ಹುಕ್ಕೇರಿ ಹಿರೇಮಠದ ಕಾರ್ಯ ಇತರ ಮಠಗಳಿಗೂ ಮಾದರಿ : ಮುಜರಾಯಿ ಸಚಿವ ಪಿ ಟಿ ಪರಮೇಶ್ವರ ನಾಯ್ಕ್
ಪ್ರಗತಿವಾಹಿನಿ ಸುದ್ದಿ, ಹರಿಹರ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಸರ್ವಧರ್ಮೀಯರ ಮಠವಾಗಿ ಬೆಳೆದು ನಿಂತಿದೆ. ಗಡಿಭಾಗದಲ್ಲಿ ಕನ್ನಡ ಕಟ್ಟುವ ಕೈಂಕರ್ಯದಲ್ಲಿ ಇರುವ ಹುಕ್ಕೇರಿಯ ಹಿರೇಮಠ ಇವತ್ತು ರಾಜ್ಯ, ಅಂತರ್ ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲಿ ಕೂಡ ತನ್ನ ಸಮನ್ವಯತೆಯಿಂದ ಹೆಸರು ಮಾಡಿದೆ. ಈ ಮಠದ ಶ್ರೀ ಗಳ ಕಾರ್ಯ ಇತರ ಮಠಗಳಿಗೂ ಮಾದರಿಯಾಗಿದೆ ಎಂದು ಕರ್ನಾಟಕ ಘನ ಸರ್ಕಾರದ ಮುಜರಾಯಿ ದತ್ತಿ ಇಲಾಖೆಯ ಸಚಿವರಾದ ಪಿ ಟಿ ಪರಮೇಶ್ವರ ನಾಯ್ಕ್ ಹೇಳಿದರು.
ಹರಿಹರದ ಶ್ರೀ ಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠ, ಶ್ರೀ ಲಿಂ. ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಂಸ್ಕರಣೆಯಲ್ಲಿ ನೀಡಲಾದ “ಸಮನ್ವಯ ಸಿರಿ ರಾಷ್ಟ್ರೀಯ ಪ್ರಶಸ್ತಿ”ಯನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಿಗೆ ನೀಡಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕನ್ನಡದ ರಾಜ್ಯೋತ್ಸವದ ಸಂದರ್ಭದಲ್ಲಿ ಸುಮಾರು 50 ಸಾವಿರ ಜನರಿಗೆ ಹೋಳಿಗೆ ಊಟವನ್ನು ಹಾಕುವುದರೊಂದಿಗೆ ಕನ್ನಡದ ಹಬ್ಬವನ್ನು ಆಚರಿಸಿರುವ ಕಾರ್ಯ ಅನುಪಮ ಎಂದರು.
ಪ್ರಶಸ್ತಿ ಪ್ರದಾನದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಆಶೀರ್ವಚನ ನೀಡಿದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಪ್ರಶಸ್ತಿಗಳು ತಮ್ಮ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕಾಗಿತ್ತು ಎಂದರೆ ಆದರ್ಶ ವ್ಯಕ್ತಿಗಳನ್ನು ಹುಡುಕಿಕೊಂಡು ಅವರಿಗೆ ಪ್ರಶಸ್ತಿಯನ್ನು ನೀಡಿದಾಗ ಮಾತ್ರ ಅದು ಯೋಗ್ಯವಾಗುತ್ತದೆ. ಸಮನ್ವಯ ಸಿರಿ ಪ್ರಶಸ್ತಿಯನ್ನು ನೀಡುವುದರ ಮುಖಾಂತರ ಚಂದ್ರಶೇಖರ ಶಿವಾಚಾರ್ಯ ರಿಗೆ ಅವರ ವ್ಯಕ್ತಿತ್ವಕ್ಕೆ ಪ್ರಶಸ್ತಿ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ ಎಂದರು.
ಪ್ರಶಸ್ತಿ 25,000 ನಗದು ಹಾಗೂ ಪ್ರಶಸ್ತಿ ಫಲಕ, ಶಾಲು ಒಳಗೊಂಡಿತ್ತು. ಪ್ರಶಸ್ತಿಯನ್ನು ಸ್ವೀಕರಿಸಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಪ್ರಶಸ್ತಿಯಂತೆ ಅವರ ಆದರ್ಶವನ್ನು ಮೈಗೂಡಿಸಿಕೊಂಡು ವಾಗೀಶ ಪಂಡಿತಾರಾಧ್ಯರ ಬದುಕಿನ ಆದರ್ಶ ನಮ್ಮಲ್ಲಿ ಬರಲಿ ಎಂದು ನಮ್ರವಾಗಿ ಹೇಳಿದರು.
ಬೆಂಗಳೂರು ಕೃಷಿ ಇಲಾಖೆಯ ಅಪರ ನಿರ್ದೇಶಕರಾದ ಎಂ ಎಸ್ ದಿವಾಕರ್ ಮಾತನಾಡಿ, ಹುಕ್ಕೇರಿ ಶ್ರೀ ಚಂದ್ರಶೇಖರ ಸ್ವಾಮಿಗಳಿಂದ ಐಎಎಸ್ ಕೆಎಎಸ್ ಆದವರೂ ಕೂಡ ಆಡಳಿತವನ್ನು ಕಲಿಯುವಂತಿದೆ. ಸುಮಾರು ಅಧಿಕಾರಿಗಳು ಅವರನ್ನು ಗೌರವಿಸುತ್ತಾರೆ. ಏಕೆಂದರೆ ಅವರ ಸಮಯ ಪ್ರಜ್ಞೆ ಮತ್ತು ಕಾರ್ಯದಕ್ಷತೆ ಎಂದರು.
ಹರಿಹರದ ಶಾಸಕ ಎಚ್.ಎಸ್ ಶಿವಶಂಕರ್ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ ಎಂ ಹಾಲ ಸ್ವಾಮಿಯವರು ಸಂಸ್ಥೆಯ ಉಪಾಧ್ಯಕ್ಷರೂ ವಹಿಸಿದ್ದರು. ಪ್ರೊ. ಸಿ ಬಿ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಕೆ ಎಮ್ ರುದ್ರ ಸ್ವಾಮಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಆರ್ ಬಿ ಪ್ರಶಾಂತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ