ಪ್ರಗತಿವಾಹಿನಿ ಸುದ್ದಿ, ತುಮಕೂರು
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತುಮಕೂರಿನ ಸಿದ್ಧಗಂಗಾ ಶ್ರೀಗಳ ದರ್ಶನಕ್ಕಾಗಿ ಮಠದ ಬಳಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ಅವರ ಒತ್ತಡದ ಹಿನ್ನೆಲೆಯಲ್ಲಿ ಕಿಟಕಿ ಮೂಲಕ ಶ್ರೀಗಳ ದರ್ಶನಕ್ಕೆ ಬುಧವಾರ ರಾತ್ರಿ ಅವಕಾಶ ಕಲ್ಪಿಸಲಾಗಿದೆ.
ಬುಧವಾರ ಬೆಳಗಿನ ಜಾವ 4 ಗಂಟೆಗೆ ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಸಥಳಾಂತರಿಸಿ ಮಠದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ. ಶ್ರೀಗಳ ಚಿಕಿತ್ಸೆಗೆ ತೊಂದರೆಯಾಗಬಾರದು, ಸೋಂಕು ತಗುಲಬಾರದು ಎಂದು ಭಕ್ತರ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಆದರೆ ರಾತ್ರಿಯಾದರೂ ಭಕ್ತರು ಕದಲದ ಹಿನ್ನೆಲೆಯಲ್ಲಿ ಮತ್ತು ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಕಿಟಕಿ ಮೂಲಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರು ಕಿಲೋಮೀಟರ್ ವರೆಗೆ ಸಾಲಾಗಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಶ್ರೀಗಳು ಶಿವಕುಮಾರಸ್ವಾಮಿಗಳ ಸೇವೆಯನ್ನು ಸ್ಮರಿಸುತ್ತ ಕಣ್ಣೀರು ಹಾಕಿದ್ದರಿಂದಾಗಿ ಮಠದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಯಿತು.
ಈ ಮಧ್ಯೆ, ಶ್ರೀಗಳ ಆರೋಗ್ಯ ನಿಧಾನವಾಗಿ ಚೇತರಿಕೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬುಧವಾರ ಮೈಸೂರಿನ ಯದುವೀರ ಒಡೆಯರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊದಲಾದವರು ಸ್ವಾಮಿಗಳ ದರ್ಶನ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ