ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಭಾರತರತ್ನ ಡಾ. ಸಿ.ವಿ. ರಾಮನ್ ಅವರ ರಾಮನ್ ಪರಿಣಾಮ ಸಂಶೋಧನೆಯ ಜ್ಞಾಪಕಾರ್ಥ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಗಣಿತ ಶಾಸ್ತ್ರ ಸಪ್ತಾಹ ಆಚರಿಸಲಾಯಿತು.
ಧಾರವಾಡ ಕರ್ನಾಟಕ ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಚ್.ಎಸ್. ರಮಣೆ ಮಾತನಾಡಿ, ವಿಜ್ಞಾನಕ್ಕಾಗಿ ಮಾನವ ಮತ್ತು ಮಾನವನಿಗಾಗಿ ವಿಜ್ಞಾನ ಸಿದ್ಧಾಂತ ಮಾನವತೆಯ ಉಳಿವಿಗಾಗಿ ಅನೇಕ ಉತ್ಕರ್ಷ ಕೊಡುಗೆಗಳನ್ನು ನೀಡಿದೆ. ಅಲ್ಲದೆ ಗಣಿತ ಶಾಸ್ತ್ರವು ಮಾನವನ ನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಸಂಜಯ ಪೂಜಾರಿ, ಭಾರತೀಯ ವಾಯು ಸೇನೆಯು ತನ್ನ ದಾಳಿಗಳಲ್ಲಿ ಗಣಿತಶಾಸ್ತ್ರದ ಸಿದ್ಧಾಂತಗಳನ್ನು ಬಹುಪಕ್ಷೀಯವಾಗಿ ಉಪಯೋಗಿಸಿಕೊಂಡ ಬಗೆಯನ್ನು ವಿವರಿಸಿದರು.
ಸಮೀಕ್ಷಾ, ಸುಖದಾ ಪ್ರಾರ್ಥನೆ ಹಾಡಿದರು. ಆಡಳಿತಾಧಿಕಾರಿ ರಾಜು ಜೋಶಿ, ಡಾ. ವಿಜಯ ಕುಲಕರ್ಣಿ, ಪ್ರೊ. ರಾಜು ನಾಗಾಂವಕರ, ಡಾ. ಪಿ.ಬಿ. ಮುತಾಲಿಕ ದೇಸಾಯಿ, ಪ್ರೊ. ಕಿರಣ ಪೋತದಾರ, ಪ್ರೊ. ಸಾರಿಖಾ ಪಾವಶೆ, ಪ್ರೊ. ಅಷ್ಪಾಕ ಪಠಾಣ, ಪ್ರೊ. ಶ್ವೇತಾ ಶಿರಗಾಂವಿ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಅಧ್ಯಕ್ಷ ಪ್ರೊ. ಅನುರಾಧಾ ಹೂಗಾರ ಸ್ವಾಗತಿಸಿದರು. ಅತಿಕಾ ಬೇಗ್ ನಿರೂಪಿಸಿದರು. ಪುರುಷೋತ್ತಮ ಪೋಳ ವಂದಿಸಿದರು.