ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
2017ರ ಏಪ್ರಿಲ್ 1ರಂದು ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜೆಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿದ್ದು, ಇಬ್ಬರು ಆರೋಪಿಗಳಿಗೆ ತಲಾ 20 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.
ಖಾನಾಪುರದ ರವಿ ಯಲ್ಲಪ್ಪ ಧರೆನ್ನವರ್ ( ಧರಿಗೌಡ) (19) ಮತ್ತು ರಾಮದುರ್ಗದ ಮುದಕವಿಯ ಲಕ್ಷ್ಮಣ ಸಿದ್ದಪ್ಪ ಜಾಲಾಪುರ (43) ಶಿಕ್ಷೆಗೊಳಗಾದವರು.
ಮಹಿಳೆಯೊಬ್ಬಳು ತನ್ನ ಗಂಡನಿಗೆ ಬುತ್ತಿ ಕೊಡಲು ಹೊಲಕ್ಕೆ ಹೋಗುತ್ತಿದ್ದಾಗ ರವಿ ಆಕೆಯನ್ನು ಹಿಡಿದೆಳೆದು, ಕಬ್ಬಿನ ಹೊಲಕ್ಕೆ ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಲಕ್ಷ್ಮಣ ಅತ್ಯಾಚಾರ ಎಸಗಲು ರವಿಗೆ ಪ್ರಚೋದನೆ ನೀಡಿದ್ದಾನೆ.
ಘಟನೆ ನಂತರ ಮಹಿಳೆಯ ಗಂಡ ಬಂದು ವಿಚಾರಿಸಿದಾಗ ಇಬ್ಬರೂ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ರಾಮದುರ್ಗ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಿಪಿಐ ಜಿ.ಬಿ.ಗೌಡರ್ ಪ್ರಕರಣ ದಾಖಲಿಸಿದ್ದರು.
ಬೆಳಗಾವಿಯ 8ನೇ ಅಪರ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶ ವಿ.ಬಿ.ಸೂರ್ಯವಂಶಿ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಆರೋಪಿಗಳಿಗೆ 20 ವರ್ಷ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ, ಸಂತ್ರಸ್ತೆಗೆ ನಿಯಮಾವಳಿ ಪ್ರಕಾರ ಪರಿಹಾರ ನೀಡಲು ಶಿಫಾರಸ್ಸು ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ