Latest

ಅಭಯಾರಣ್ಯ ಘೋಷಣೆಯಾಗಿ ಏಳು ವರ್ಷ ಪೂರೈಸಿದ ಭೀಮಗಡ

 

 

 

ಪ್ರಗತಿವಾಹಿನಿ ವಿಶೇಷ

ನವೆಂಬರ್ 28, 2011 ಬಹುಶಃ ಬಹಳಷ್ಟು ಜನರಿಗೆ ಈ ದಿನದ ಮಹತ್ವ ನೆನಪಿನಲ್ಲಿದೆಯೋ ಅನುಮಾನ. ಈ  ದಿನ ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲೇ ಒಂದು ಮರೆಯಲಾಗದ ದಿನ. ಕಾರಣ ಜಿಲ್ಲೆಯ ಮೊಟ್ಟ ಮೊದಲ ಅಭಯಾರಣ್ಯ ಭೀಮಗಡ ಘೋಷಣೆಯಾದ ದಿನವಿದು. ಇದೀಗ ಈ ಅಭಯಾರಣ್ಯ ಏಳು ವರ್ಷ ಪೂರೈಸಿದ ಸಂಭ್ರಮದಲ್ಲಿದೆ.

ಸಕ್ಕರೆ ನಾಡು ಎಂದೇ ಪ್ರಸಿದ್ಧವಾದ ಬೆಳಗಾವಿ ಪಶ್ಚಿಮ ಘಟ್ಟಗಳ ಅಪರೂಪದ ಜೀವ ವೈವಿಧ್ಯವನ್ನೂ ಸಹ ಹೊಂದಿರುವ ಒಂದು ಜಿಲ್ಲೆ. ವಿಶೇಷವಾಗಿ ಖಾನಾಪುರ ತಾಲೂಕು ತನ್ನ ನಿತ್ಯ ಹರಿದ್ವರ್ಣ, ಅರೆನಿತ್ಯಹರಿದ್ವರ್ಣ ಹಾಗೂ ಎಲೆ ಉದುರುವ ಕಾಡುಗಳಿಂದ ಎಂಥವರನ್ನೂ ತನ್ನತ್ತ ಸೆಳೆಯುತ್ತದೆ. ಇಲ್ಲಿನ ಅರಣ್ಯ ಪ್ರದೇಶ ಹುಲಿ, ಚಿರತೆ, ಕಾಟಿ, ಮಂಗಟ್ಟೆ, ಕಾಳಿಂಗಸರ್ಪ, ಆನೆ ಮುಂತಾದ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದೆ. ಅಲ್ಲದೇ ಕರ್ನಾಟಕ ಹಾಗೂ ನೆರೆರಾಜ್ಯ ಗೋವಾದ ಜೀವನಾಡಿಗಳಾದ ಮಲಪ್ರಭಾ, ಮಹದಾಯಿ ಸೇರಿದಂತೆ ಅನೇಕ ಪ್ರಮುಖ ನದಿಗಳ ಉಗಮಸ್ಥಾನ ಕೂಡ. ತನ್ಮೂಲಕ ಈ ಭಾಗದಲ್ಲಿ ನೈಸರ್ಗಿಕ ಸಮತೋಲನ ಕಾಪಾಡುವುದರಲ್ಲಿಈ ಅರಣ್ಯ ಪ್ರದೇಶಗಳ ಪಾತ್ರ ಅತೀ ಮುಖ್ಯವಾಗಿದೆ.

ಮೊದಲಿಗೆ ಬೆಳಗಾವಿ ಜಿಲ್ಲೆಯಲ್ಲಿ ಅಭಯಾರಣ್ಯ ಅಥವಾ ರಾಷ್ಟ್ರೀಯ ಉದ್ಯಾನಗಳು ಇರಲಿಲ್ಲ. ವಿಶೇಷವಾಗಿ ಖಾನಾಪುರದ ಅರಣ್ಯ ಪ್ರದೇಶಗಳು ಸಂರಕ್ಷಿತ ಪ್ರದೇಶಗಳಿಗೆ ಹೇಳಿ ಮಾಡಿಸಿದ ತಾಣಗಳಾದರೂ ರಕ್ಷಿತ ಪ್ರದೇಶಗಳ ಕೊರತೆ ಎದ್ದು ಕಾಣುತ್ತಿತ್ತು. ಕೇವಲ ಮೀಸಲು ಅರಣ್ಯ ಪ್ರದೇಶಗಳಾದ್ದರಿಂದ ಇಲ್ಲಿನ ಅನೇಕ ಅರಣ್ಯೇತರ ಚಟುವಟಿಕೆಗಳನ್ನು ತಡೆಗಟ್ಟುವುದು ಅರಣ್ಯ ಇಲಾಖೆಗೆ ಸವಾಲಾಗಿತ್ತು. ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಭೀಮಗಡ ಅರಣ್ಯ ಪ್ರದೇಶವನ್ನು ಅಭಯಾರಣ್ಯವಾಗಿ ಘೋಷಣೆ ಮಾಡಬೇಕೆಂದು ನಿರಂತರ ಹೋರಾಟ ನಡೆಸಿದ್ದವಾದರೂ ಯಾವುದೇ ಫಲ ನೀಡಿರಲಿಲ್ಲ.

ಆದರೂ ಸಹ ಇವರು ತಮ್ಮ ಪ್ರಯತ್ನ ಮುಂದುವರೆಸಿಯೇ ಇದ್ದರು. ಇದೇ ಸಮಯಕ್ಕೆ ಅದೃಷ್ಟವೆಂಬಂತೆ 2008 ರಲ್ಲಿ ಅಂತರ ರಾಜ್ಯ ನಿಯೋಜನೆ ಮೇರೆಗೆ ಹಿಮಾಚಲ ಪ್ರದೇಶ ಕೇಡರ್ನ 1996 ನೇ ಬ್ಯಾಚನ ಭಾರತೀಯ ಅರಣ್ಯ ಸೇವೆ ಅಧಿಕಾರಿಯಾದ ಹಾಗೂ ಮೂಲತಹ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿಯವರಾದ ಗಿರೀಶ್ ಹೊಸೂರ್ ಎಂಬ ಅಧಿಕಾರಿ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ತಾಲೂಕಿನವರೇ ಆದ್ದರಿಂದ ಅವರಿಗೆ ಇಲ್ಲಿನ ಪ್ರದೇಶದ ಉತ್ತಮ ಜ್ಞಾನವಿತ್ತು.

ಅಲ್ಲದೇ ಸಂಘ ಸಂಸ್ಥೆಗಳು ಅವರಿಗೆ ಭೀಮಗಡ ಅರಣ್ಯ ಪ್ರದೇಶದ ಹಾಗೂ ಅದರಲ್ಲೂ ಜಗತ್ತಿನಲ್ಲೇ ಅತೀ ವಿರಳವಾದ ವ್ರೋಟನ್ ಫ್ರೀ ಟೇಲ್ಡ್ ಬಾವಲಿಗಳು ಇಲ್ಲಿ ಕಂಡುಬರುವುದರಿಂದ ಈ ಪ್ರದೇಶ ಅಭಯಾರಣ್ಯ ಘೋಷಣೆಗೆ ಅತೀ ಸೂಕ್ತವಾಗಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಎಲ್ಲಕ್ಕಿಂತ ಹೆಚ್ಚಾಗಿ ಗಿರೀಶ್ ಹೊಸೂರ್ ಅವರೇ ಖುದ್ದು ಆಸಕ್ತಿ ವಹಿಸಿದ್ದರು. ಈ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರಾಜ್ಯ ಸರಕಾರ  ಲೋಂಡಾ ವಲಯದ ಸುಮಾರು 150 ಚ ಕಿಮೀ ಹಾಗೂ ಕಣಕುಂಬಿ ವಲಯದ ಸುಮಾರು 40 ಚ ಕಿಮೀ ಅನ್ನು ಸೇರಿಸಿ ಅಂದಾಜು 190 ಚಕಿಮೀ ಅರಣ್ಯ ಪ್ರದೇಶವನ್ನು ನವೆಂಬರ್ 28, 2011 ರಂದು ಭೀಮಗಡ ಅಭಯಾರಣ್ಯವೆಂದು ಘೋಷಿಸಿತು. ತನ್ಮೂಲಕ ಜಿಲ್ಲೆಯ ಜೀವ ವೈವಿಧ್ಯದ ಪ್ರಪಂಚದಲ್ಲಿ ಹೊಸ ಅಧ್ಯಾಯ ತೆರೆಯಿತು.

ಅಭಯಾರಣ್ಯವೆಂದು ಘೋಷಣೆಯಾದರೂ ಸಹ ಪ್ರತ್ಯೇಕ ವನ್ಯಜೀವಿ ವಲಯವೆಂದು ಘೋಷಿಸಿರಲಿಲ್ಲ. ಹಾಗೂ ಲೋಂಡಾ ವಲಯ ಅರಣ್ಯಾಧಿಕಾರಿಗಳೇ ಅಭಯಾರಣ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಂತರದಲ್ಲಿ ಅರಣ್ಯ ಇಲಾಖೆ ಪ್ರತ್ಯೇಕ ವನ್ಯಜೀವಿ ವಲಯವೆಂದು ಘೋಷಿಸಿ ಪೂರ್ಣ ಪ್ರಮಾಣದ ವಲಯ ಅರಣ್ಯ ಅಧಿಕಾರಿಯನ್ನು ಕೂಡ ನೇಮಿಸಿತು. ಕಳ್ಳ ಬೇಟೆ, ಮರಗಳ್ಳತನ ಸೇರಿದಂತೆ ಅನಧಿಕೃತ ಚಟುವಟಿಕೆಗಳ ತಡೆಗೆ ಸುಸಜ್ಜಿತ ಕಳ್ಳ ಬೇಟೆ ತಡೆ ಶಿಬಿರಗಳನ್ನು ನಿರ್ಮಿಸಿ ಸೂಕ್ತ ಸಿಬ್ಬಂದಿಯನ್ನು ನೇಮಿಸಿತು. ಅಭಯಾರಣ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹೆಮ್ಮಡಗಾದಲ್ಲಿ ಪ್ರಕೃತಿ ಶಿಬಿರವನ್ನೂ ಕೂಡ ನಿರ್ಮಿಸಿತು. ಹುಲಿ ಹಾಗೂ ಇತರೆ ವನ್ಯಜೀವಿಗಳ ಚಲನವನ ಅಧ್ಯಯನ ಮಾಡಲು ಕ್ಯಾಮೆರಾ ಟ್ರ್ಯಾಪ್ ವಿಧಾನ ಅನುಸರಿಸಿ ಇಂದಿಗೂ ಮುಂದುವರೆಸಿಕೊಂಡು ಬಂದಿದೆ.

ಅಭಯಾರಣ್ಯದ ಮೂಲಕವೇ ಹಾದು ಹೋಗುವ ಖಾನಾಪುರ- ಹೆಮ್ಮಡಗಾ- ಅನಮೋಡ್ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧಿಸಿ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ದಿಟ್ಟ ಕ್ರಮ ಕೈಗೊಂಡಿದೆ. ಸ್ವಯಂಪ್ರೇರಿತರಾಗಿ ಪುನರ್ವಸತಿಗೆ ಆಸಕ್ತಿ ತೋರಿರುವ ಅಭಯಾರಣ್ಯ ವ್ಯಾಪ್ತಿಯ ಗ್ರಾಮಸ್ಥರಿಗೆ ಪುನರ್ವಸತಿ ಕಾರ್ಯ ಕೈಗೊಳ್ಳಲು ಪ್ರಯತ್ನಿಸುತ್ತಿದೆ. ಅಲ್ಲದೇ ಅಭಯಾರಣ್ಯದ ಸುತ್ತಮುತ್ತಲಿನ ಮೀಸಲು ಅರಣ್ಯ ಪ್ರದೇಶಗಳನ್ನು ರಕ್ಷಿಸಲು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸಹ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಹುಲಿ ಅಥವಾ ವನ್ಯಜೀವಿ ಸಂರಕ್ಷಣೆ ಎಂದಾಕ್ಷಣ ಕೇವಲ ಬಂಡೀಪುರ, ನಾಗರಹೊಳೆ ಕಾಡುಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ಆದರೆ ಖಾನಾಪುರ- ದಾಂಡೇಲಿ- ಶರಾವತಿ ಕಣಿವೆಯ ಅಂದಾಜು 8000 ಚ ಕಿಮೀ ಹುಲಿ ಮೊಗಸಾಲೆಯ ಹಾಗೂ ಗೋವಾ- ಮಹಾರಾಷ್ಟ್ರಗಳ ಸಂರಕ್ಷಿತ ಪ್ರದೇಶಗಳು ಹಾಗೂ ಮೀಸಲು ಅರಣ್ಯಗಳ ಮಧ್ಯೆ ಹುಲಿಗಳ ಮುಕ್ತ ಸಂಚಾರಕ್ಕೆ ಭೌಗೋಳಿಕವಾಗಿ ಅತೀ ಪ್ರಮುಖ ಪಾತ್ರ ವಹಿಸುತ್ತಿರುವ ಭೀಮಗಡ ಅಭಯಾರಣ್ಯ ನಮ್ಮ ಜಿಲ್ಲೆಯಲ್ಲಿರುವುದು ನಿಜವಾಗಿಯೂ ಹೆಮ್ಮೆಯ ವಿಷಯ.

 

ಇದರ ಸಂಪೂರ್ಣ ಕೀರ್ತಿ ಅಧಿಕಾರಿಗಳಾದ ಗಿರೀಶ್ ಹೊಸೂರ್, ಎನ್ ಜಯರಾಮ್, ರಾಮಚಂದ್ರ, ಶ್ರೀಕಾಂತ್ ಹೊಸೂರ್, ವಿಜಯ್ ಮೋಹನ್‌ರಾಜ್, ಕೃಷ್ಣ ಉದುಪುಡಿ, ಪಿ ಬಿ ಕರುಣಾಕರ, ಅಂಬಾಡಿ ಮಾಧವ, ಬಸವರಾಜ್ ಪಾಟೀಲ್, ಎಂ. ವಿ. ಅಮರನಾಥ, ಅಶೋಕ್ ಪಾಟೀಲ್, ಎಸ್. ಎಸ್. ನಿಂಗಾಣಿ, ಬಸವರಾಜ್ ಉಳವನ್ನವರ್, ಬಸವರಾಜ್ ವಾಳದ್, ರಮೇಶ್ ಗಿರಿಯಪ್ಪನವರ್ ಹಾಗೂ ಸಂಘ ಸಂಸ್ಥಗಳ ಮೂಲಕ ಹೋರಾಡಿದ ಶ್ರೀಹರಿ ಕುಗಜೀ, ದುರ್ಗೇಶ್ ಕಸ್ಬೇಕರ್ ಅಂಥವರಿಗೆ ಸಲ್ಲಬೇಕು

-ಗಿರಿಧರ ಕುಲಕರ್ಣಿ, ವನ್ಯಜೀವಿ ಕಾರ್ಯಕರ್ತ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button