ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮಾಡುವ ಚುನಾವಣಾ ಖರ್ಚುವೆಚ್ಚವನ್ನು ಆಯೋಗ ಗಂಭೀರವಾಗಿ ಪರಿಗಣಿಸಲಿದೆ. ಆದ್ದರಿಂದ ಸಕಾಲದಲ್ಲಿ ಸರಿಯಾಗಿ ಲೆಕ್ಕಪತ್ರ ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್ ಆರ್. ತಿಳಿಸಿದರು.
ಅಭ್ಯರ್ಥಿಗಳ ಖರ್ಚುವೆಚ್ಚ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಭ್ಯರ್ಥಿಗಳು ಚುನಾವಣಾ ಖರ್ಚುವೆಚ್ಚದ ಲೆಕ್ಕಪತ್ರಗಳನ್ನು ಪರಿಶೀಲನೆಗೆ ಸಕಾಲದಲ್ಲಿ ಸಲ್ಲಿಸದಿದ್ದರೆ ಅಂತಹ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ವೆಚ್ಚದಲ್ಲಿ ಬೇನಾಮಿಯಾಗಿ ಇನ್ನೊಬ್ಬರ ಪರ ಪ್ರಚಾರ ನಡೆಸುವುದು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಸ್ಟಾರ್ ಪ್ರಚಾರಕರ ಜತೆ ಅಭ್ಯರ್ಥಿಗಳು ವೇದಿಕೆ ಹಂಚಿಕೊಂಡರೆ ಅಥವಾ ಸ್ಟಾರ್ ಪ್ರಚಾರಕರು ನಿರ್ದಿಷ್ಟ ಅಭ್ಯರ್ಥಿಗಳಿಗೆ ಮತ ನೀಡುವಂತೆ ಕೋರಿದರೆ ಆ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಡಾ. ವಿಶಾಲ್ ಹೇಳಿದರು.
ಚುನಾವಣಾ ವೆಚ್ಚ ವೀಕ್ಷಕ ಪ್ರದೀಪ್ ಕುಮಾರ್ ಮುಜುಂದಾರ್ ಮಾತನಾಡಿ, ನಿಗದಿತ ರಿಜಿಸ್ಟರ್ನ ಪ್ರತಿ ಪುಟಗಳ ಮೇಲೂ ಅಭ್ಯರ್ಥಿಗಳೇ ಕಡ್ಡಾಯವಾಗಿ ಸಹಿ ಮಾಡಿರಬೇಕು. ಅಭ್ಯರ್ಥಿಗಳು ಸಹಿ ಮಾಡದಿರುವ ಪುಟವನ್ನು ಅಧಿಕೃತ ಎಂದು ಪರಿಗಣಿಸುವುದಿಲ್ಲ. ಚುನಾವಣೆಗಾಗಿಯೇ ತೆರೆಯಲಾಗುವ ಪ್ರತ್ಯೇಕ ಬ್ಯಾಂಕ್ ಖಾತೆಯ ಮೂಲಕವೇ ಖರ್ಚು ಭರಿಸಬೇಕು ಎಂದರು.
ಜಿಲ್ಲಾ ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಎಂ.ಪಿ. ಅನಿತಾ ಮಾತನಾಡಿ, ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ೭೦ ಲಕ್ಷ ರೂಪಾಯಿ ವೆಚ್ಚದ ಮಿತಿಯಿದೆ. ಪ್ರತ್ಯೇಕ ಖಾತೆ ತೆರೆದು ಆ ಖಾತೆಯ ಮೂಲಕವೇ ಪ್ರತಿಯೊಂದು ಖರ್ಚುಗಳನ್ನು ಪಾವತಿಸಬೇಕು. ಹತ್ತು ಸಾವಿರ ಮೇಲ್ಪಟ್ಟ ಪಾವತಿಯನ್ನು ಚೆಕ್, ಡಿಡಿ, ನೆಫ್ಟ್ ಅಥವಾ ಆರ್ ಟಿಜಿಎಸ್ ಮೂಲಕ ಮಾತ್ರ ಪಾವತಿಸಬೇಕು. ನಗದಾಗಿ ಗರಿಷ್ಠ ಹತ್ತು ಸಾವಿರ ರೂಪಾಯಿ ಮಾತ್ರ ದೇಣಿಗೆ ಸ್ವೀಕರಿಸಬಹುದು. ಇದಕ್ಕೂ ವಿವರವಾದ ಮಾಹಿತಿ ನೀಡಬೇಕು. ದೇಣಿಗೆ ಹಣವನ್ನು ನೇರವಾಗಿ ಖರ್ಚು ಮಾಡದೇ ಅದನ್ನು ಬ್ಯಾಂಕ್ ಖಾತೆಗೆ ಹಾಕಬೇಕು ಎಂದು ತಿಳಿಸಿದರು.
ನಾಮಪತ್ರದಿಂದ ಫಲಿತಾಂಶದವರೆಗೆ ಲೆಕ್ಕಪತ್ರ ಸಲ್ಲಿಕೆ ಕಡ್ಡಾಯ:
ನಾಮಪತ್ರ ಸಲ್ಲಿಕೆಯಿಂದ ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೆ ಪ್ರತಿಯೊಂದು ಮಾಹಿತಿಯನ್ನು ನಿಗದಿತ ಎ.ಬಿ.ಸಿ ನಮೂನೆಯ ರಿಜಿಸ್ಟರ್ ನಲ್ಲಿ ನಮೂದಿಸಬೇಕು ಎಂದು ಅನಿತಾ ಹೇಳಿದರು.
ಫಲಿತಾಂಶ ಘೋಷಣೆಯಾದ ೩೦ ದಿನಗಳಲ್ಲಿ ಅಂತಿಮ ಲೆಕ್ಕಪತ್ರವನ್ನು ಸಲ್ಲಿಸಬೇಕು. ಚುನಾವಣಾ ವೆಚ್ವ ವೀಕ್ಷಕರು ಲೆಕ್ಕ ಪರಿಶೀಲನೆ ಕೈಗೊಂಡಾಗ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ತಾವು ಸ್ವತಃ ಅಥವಾ ಚುನಾವಣಾ ಏಜೆಂಟ್ ಮೂಲಕ ಖರ್ಚುವೆಚ್ಚದ ಲೆಕ್ಕಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸಬೇಕು. ಲೆಕ್ಕಪತ್ರ ದಾಖಲೆ ಸಲ್ಲಿಸದಿದ್ದರೆ ಚುನಾವಣಾಧಿಕಾರಿ ಕಾಲಾವಕಾಶ ನೀಡುತ್ತಾರೆ. ಆಗಲೂ ನೀಡದಿದ್ದರೆ ಆರ್.ಪಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಬಹುದು. ಅದಕ್ಕೆ ಆಸ್ಪದ ನೀಡದೇ ಸಕಾಲದಲ್ಲಿ ಲೆಕ್ಕಪತ್ರ ಪರಿಶೀಲನೆಗೆ ಒಪ್ಪಿಸಬೇಕಾಗುತ್ತದೆ ಎಂದು ಅನಿತಾ ವಿವರಿಸಿದರು.
ವಿವಿಧ ಪಕ್ಷಗಳ ಅಭ್ಯರ್ಥಿಗಳ ಚುನಾವಣಾ ಏಜೆಂಟರುಗಳು ಮತ್ತು ಅನೇಕ ಪಕ್ಷೇತರ ಅಭ್ಯರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ