ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವಾಯುಯ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗಕ್ಕೆ ಸೇರಿದ (KA 22, F 898) ಬಸ್ ಚಾಲಕ ಹಾಗೂ ನಿರ್ವಾಹಕರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ದಾರಿ ಮಧ್ಯದಲ್ಲೇ ಇಳಿಸಿ ಹೋಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಇದು ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಶನಿವಾರ ಬೆಳಗಾವಿ ಕೇಂದ್ರಬಸ್ ನಿಲ್ದಾಣದಿಂದ ಎನ್‌ಡಬ್ಲ್ಯುಕೆಆರ್‌ಟಿಸಿ ಚಿಕ್ಕೋಡಿ ಹೋಗುವ ಬಸ್ ನಲ್ಲಿ ಈ ಘಟನೆ ಮರುಕಳಿಸಿದೆ. ಬಸ್ ನಲ್ಲಿ ನಿರ್ವಾಹಕಿ ವಿದ್ಯಾರ್ಥಿಗಳಿಗೆ ಹಣ ತೆಗೆದುಕೊಂಡು ರಾಣಿ ಚನ್ನಮ್ಮ ವಿವಿವರೆಗೆ ಟಿಕೆಟ್ ನೀಡಿದ್ದಾರೆ. ಟಿಕೆಟ್ ನೀಡಿದ ನಂತರ ತಾನು ಯಾವುದೇ ಕಾರಣಕ್ಕೂ ಬಸ್‌ನ್ನು ಅಲ್ಲಿ ನಿಲ್ಲಿಸುವುದಿಲ್ಲ. ಅರ್ಧ ದಾರಿಯಲ್ಲಿಯೇ ಇಳಿದುಕೊಳ್ಳಿ ಎಂದು ಹೇಳಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ ನಿರ್ವಾಹಕ ಜೊತೆಗೆ ಚಾಲಕ ಕೂಡ ದನಿ ಗೂಡಿಸಿ, ವಿದ್ಯಾರ್ಥಿಗಳನ್ನೇ ನಿಂದಿಸಿದ್ದಾರೆ. ನೀವು ಏನು ಮಾಡ್ತೀರಿ ಮಾಡ್ಕೊಳ್ಳಿ. ಯಾರಿಗೆ ಕಂಪ್ಲೇಂ ಟ್ ಮಾಡ್ತರಿ ಮಾಡಿ. ನಾವು ಮಾತ್ರ ಬಸ್ ನಿಲ್ಲಿಸುವುದಿಲ್ಲ ಎಂದು ಉದ್ಧಟತನದಿಂದ ಹೇಳಿದ್ದಾರೆ ಎಂದು ವಿದ್ಯರ್ಥಿಗಳು ಆರೋಪಿಸಿದ್ದಾರೆ.
ಬಸ್ ಚಾಲಕ, ನಿರ್ವಾಹಕರ ನಿಲುವನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಹಾಗೂ ಚಾಲಕ, ನಿರ್ವಾಹಕರ ಜೊತೆಗೆ ವಾಗ್ವಾದ ನಡೆದು ಕೆಲಹೊತ್ತು ಗೊಂದಲದ ವಾತವರಣ ನಿರ್ಮಾಣವಾಯಿತು. ಕೊನೆಗೆ ಬಸ್ ಚಾಲಕ, ನಿರ್ವಾಹಕರು ಅರ್ಧಕ್ಕೆ ಬಸ್ ನಿಲುಗಡೆಗೊಳಿಸಿ, ವಿದ್ಯಾರ್ಥಿಗಳೆಲ್ಲರನ್ನೂ ಬಸ್‌ನಿಂದ ಕೆಳಗಿಸಿದ್ದು, ರಾಣಿ ಚನ್ನಮ್ಮ ವಿವಿವರೆಗೆ ಟಿಕೆಟ್ ಕೊಡುತ್ತೇವೆ. ಆದರೆ, ನಾವು ಬಸ್ ನಿಲ್ಲಿಸುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದರು. ಈ ವೇಳೆ ವಿದ್ಯಾರ್ಥಿಗಳು ನಿರ್ವಾಹಕರು ಹೇಳಿದ್ದನ್ನೇ ಬರೆದಿದ್ದು ಅದಕ್ಕೆ ನಿರ್ವಾಹಕರು ಸಹಿ ಹಾಕಿದ್ದಾರೆ.
ನಿರ್ವಾಹಕಿಯ ಪತ್ರದ ಸಾರಾಂಶ ಹೀಗಿದೆ :
ನಾನು ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ರಾಣಿ ಚನ್ನಮ್ಮ ವಿವಿವರೆಗೆ ಟಿಕೆಟ್‌ನ್ನು ನೀಡಬಲ್ಲೆ. ಆದರೆ, ನಾನು ಬಸ್‌ನ್ನು ನಿಲ್ಲಿಸಲಾರೆ. ನನ್ನ ಮೇಲೆ ಯಾವುದೇ ಶಿಕ್ಷೆ ನೀಡಿದರೂ ನಾನು ನನ್ನ ನಿಲುವಿಗೆ ಬದ್ಧನಾಗಿದ್ದೇನೆ. ನನ್ನ ಬ್ಯಾಚ್ ನಂ. ೬೦೨ ಇರುತ್ತದೆ ಎಂದು ಪತ್ರ ಬರೆದು, ಅದಕ್ಕೆ ಸಹಿಯನ್ನು ಹಾಕಿದ್ದಾರೆ.
ದುಡ್ಡುಕೊಟ್ಟು ಪ್ರಯಾಣ ಬೆಳೆಸಿದ್ದರೂ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಚಾಲಕ, ನಿರ್ವಾಹಕರ ವಿರುದ್ದ ಕ್ರಮ ಜರುಗಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಜಿಲ್ಲೆಯ ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ, ಕಿತ್ತೂರ, ಬೈಲಹೊಂಗಲ, ಯರಗಟ್ಟಿ ಸೇರಿದಂತೆ ಇತರ ವಿವಿಧ ತಾಲೂಕುಗಳಿಂದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುವಂತಾಗಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ಮನೆಗೆ ತೆರಳಬೇಕಾದರೂ ಬಸ್‌ಗಳಿಲ್ಲದೆ, ಪರ್ಯಾಯ ಮಾರ್ಗವಿಲ್ಲದೆ ಕಷ್ಟ ಪಡುತ್ತಿದ್ದಾರೆ. ತಮ್ಮ ತಮ್ಮ ತಾಲೂಕುಗಳಿಂದ ಗ್ರಾಮೀಣ ಭಾಗಗಳಿಗೆ ಒಂದೊಂದೆ ಬಸ್‌ಗಳು ಸಂಚರಿಸುತ್ತಿದ್ದು ವಿದ್ಯಾರ್ಥಿಗಳಿಗೆ ಆ ಬಸ್ ತಪ್ಪಿದರೆ ಅಂದು ಹರ ಸಾಹಸ ಪಡಬೇಕಿದೆ. ಇಂತದರಲ್ಲಿ ವಿಶ್ವ ವಿದ್ಯಾಲಯ ನಿಲ್ದಾಣದಲ್ಲಿ ಬಸ್ ನಿಲ್ಲಿಸುವುದಿಲ್ಲ. ಇದರಿಂದ ಬೇಸತ್ತು ಹೋಗಿದ್ದೇವೆ ಎಂದು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತು ವಿದ್ಯಾರ್ಥಿಗಳು ಪ್ರಗತಿವಾಹಿನಿ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ