ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕರ್ತವ್ಯಕ್ಕೆ ಗೈರ-ಹಾಜರಿದ್ದ ಎಪಿಎಂಸಿ ಠಾಣೆಯ ಎಎಸ್‌ಐ ಮತ್ತು ಮದ್ಯಪಾನ ಮಾಡಿ ಅಶಿಸ್ತಿನಿಂದ ವರ್ತಿಸಿದ ಹಿರೇಬಾಗೇವಾಡಿ ಠಾಣೆಯ ಹೆಡ್ ಕಾನ್ಸಟೇಬಲ್‌ರವರನ್ನು ಅಮಾನತ್ತುಗೊಳಿಸಿ ಪೊಲಿಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಾರ್ಕೆಟ್ ಠಾಣಾ ವ್ಯಾಪ್ತಿಯ ಹಳೆ ಬಾಜಿ ಮಾರ್ಕೆಟನ್ನು ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಸ್ಥಳಾಂತರಿಸುವ ಕಾಲಕ್ಕೆ ಕೆಎಲ್‌ಇ ಛತ್ರಿ ಹತ್ತಿರ ಬಂದೋಬಸ್ತ್ ಕರ್ತವ್ಯಕ್ಕೆಂದು ನಿಯೋಜಿಸಿದ್ದ ಎಪಿಎಂಸಿ ಠಾಣೆಯ ಎಎಸ್‌ಐ ಎಂ. ಆರ್. ಜನಮಟ್ಟಿ ತಮಗೆ ಕರ್ತವ್ಯ ನಿಯೋಜನೆಯಾದ ಸ್ಥಳದಲ್ಲಿ ಗೈರ್ ಹಾಜರಾಗಿದ್ದು, ಮೇಲಾಧಿಕಾರಿಗಳು ಕೇಳಿದಾಗ ವಾಕಿಟಾಕಿಯಲ್ಲೂ ಸಹ ತಪ್ಪು ಮಾಹಿತಿ ನೀಡಿ ಮಹತ್ವದ ಕರ್ತವ್ಯದಲ್ಲಿ ಘೋರ ನಿರ್ಲಕ್ಷ್ಯತನ ತೋರಿದ್ದಾರೆಂದು ಅವರನ್ನು ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಲಾಗಿದೆ.
ಹಿರೇಬಾಗೇವಾಡಿ ಠಾಣೆಯ ಹೆಡ್ ಕಾನ್ಸಟೇಬಲ್ ವಾಯ್. ಎಸ್. ಹಲಕಿ ಬೆಳಗಾವಿ ಗ್ರಾಮೀಣ ಠಾಣಾ ಹದ್ದಿಯಲ್ಲಿ ರಿಂಗ್ ರೋಡ್ ಕಾಮಗಾರಿ ಕುರಿತು ಬಂದೋಬಸ್್ತ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು, ನಿಯೋಜಿಸಿದ ಕರ್ತವ್ಯಕ್ಕೆ ಹೋಗದೇ ತಮ್ಮ ಕರ್ತವ್ಯಕ್ಕೆ ಗೈರು ಹಾಜರಾಗಿ ಸಮವಸ್ತ್ರದಲ್ಲಿ ಮದ್ಯಪಾನ ಮಾಡಿ ಠಾಣೆಗೆ ಬಂದು, ಪಿಎಸ್‌ಐ ಕುಳಿತುಕೊಳ್ಳುವ ಆಸನದಲ್ಲಿ ಕುಳಿತುಕೊಂಡು ನಿದ್ರೆಯನ್ನು ಮಾಡಿ ಅಶಿಸ್ತು ಪ್ರದರ್ಶನ ಮಾಡಿದ್ದರಿಂದ ಅವರನ್ನೂ ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಲಾಗಿದೆ.
ಹೆಲ್ಮೇಟ್ ಕಡ್ಡಾಯ; ಮುಂದುವರೆದ ಕಾರ್ಯಾಚರಣೆ; 504 ಪ್ರಕರಣ
ಬೆಳಗಾವಿ ನಗರದಲ್ಲಿ ಹೆಲ್ಮೆಟ್ ಧರಿಸದವರ ವಿರುದ್ಧ ಕಾರ್ಯಾಚರಣೆಯನ್ನು ಕಳೆದ ಸುಮಾರು 18 ದಿನಗಳಿಂದ ಮುಂದುವರೆಸಲಾಗಿದ್ದು, ನಿತ್ಯ 500 ರಿಂದ 1000 ಜನರ ವರೆಗೆ ದಂಡ ಕಟ್ಟುತ್ತಿದ್ದಾರೆ.
ಗುರುವಾರ ಹೆಲ್ಮೇಟ್ ಧರಿಸದೆ ವಾಹನ ಸವಾರಿ ಮಾಡುತ್ತಿದ್ದ ಒಟ್ಟು 504 ವಾಹನ ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಒಟ್ಟು 50,400 ರೂ. ದಂಡ ವಿಧಿಸಲಾಗಿದೆ.
ಆಭರಣ ಕಳ್ಳರ ಬಂಧನ
ಜನರ ಗಮನ ಬೇರೆಡೆ ಸೆಳೆದು ಬಂಗಾರದ ಆಭರಣಗಳನ್ನು ದೋಚುತ್ತಿದ್ದ ಇಬ್ಬರು ಅಂತರ್‌ರಾಜ್ಯ ಕಳ್ಳರನ್ನು ಬಂಧಿಸಿರುವ ಮಾರ್ಕೆಟ್ ಠಾಣೆ ಪೊಲೀಸ್‌ರು, ವಾಹನ ಸಮೇತ 2,01,000 ರೂ ಮೌಲ್ಯದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ರಾಹುಲ ಕನ್ನಯ್ಯ ಸೊಲಂಕಿ, (೨೩ ವರ್ಷ ಸಾ: ಕಲ್ಯಾಣ ಪಾಟಾ ಮುಮರಾ ಪನವೇಲ್ ರೋಡ ಠಾಣೆ ಜಿಲ್ಲಾ ಮುಂಬೈ) ಮತ್ತು ಅಮೀತ ಜೀವನ ರಾಠೋಡ (ವಯಾ: ೨೧ ವರ್ಷ ಸಾ: ಲೋನಿಕಾಳಾ ಬೋಳ ಘೋರ್ಪಡೆ ವಸ್ತಿ ಗಲ್ಲಿ ನಂ:೧೦ ಪೂನಾ ರಾಜ್ಯ: ಮಹಾರಾಷ್ಟ್ರ) ಬಂಧಿತರು.
ಎಸಿಪಿ ಎನ್. ವ್ಹಿ. ಬರಮನಿ ಅವರ ಉಸ್ತುವಾರಿಯಲ್ಲಿ ಮಾರ್ಕೇಟ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ ವಿಜಯ ಮುರಗುಂಡಿ ಹಾಗೂ ಅವರ ಸಿಬ್ಬಂದಿಗಳಾದ ಎಎಸ್‌ಐ, ಬಿ.ಕೆ.ಮೀಟಗಾರ, ವಿ ಬಿ ಮಾಳಗಿ, ಆಶೀರ ಎಮ್ ಜಮಾದಾರ, ಎಮ್. ಎಸ್. ಚವಡಿಕಾರ್ಯಾಚರಣೆ ನಡೆಸಿದರು.
1.56 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, 45 ಸಾವಿರ ರೂ. ಮೌಲ್ಯದ ಬೈಕ್ ಸೇರಿ ಒಟ್ಟೂ 2,01,000 ರೂ. ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತರು ಈ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ