Latest

ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತ್ತು -ಲೋಕೇಶ್ ಕುಮಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹಲವಾರು ದಿನಗಳಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಿದ್ದ ಹಾಗೂ ಲೋಕಸಭಾ ಚುನಾವಣೆಯಂತಹ ಅತೀ ಮಹತ್ವದ ಕರ್ತವ್ಯಕ್ಕೆ ಹಾಜರಾಗುವಂತೆ  ಮೇಲಾಧಿಕಾರಿಗಳು ಸಾಕಷ್ಟು ಬಾರಿ ತಿಳಿಸಿದರೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಮಾಳಮಾರುತಿ ಠಾಣೆಯ ಪೊಲೀಸ್ ಕಾನ್ಸಟೇಬಲ್ ಸಿ. ಎಸ್. ಭರತ ಹಾಗೂ ಉದ್ಯಮಬಾಗ ಠಾಣೆಯ ಮಹಿಳಾ ಪೊಲೀಸ್ ಕಾನ್ಸಟೇಬಲ್ ರುಕ್ಮಿಣಿ ಉಪ್ಪಾರ ಅಮಾನತುಗೊಂಡವರು.

ಕರ್ತವ್ಯದಲ್ಲಿ ಘೋರ ನಿಷ್ಕಾಳಜಿತನ ಮತ್ತು ಬೇಜವಾಬ್ದಾರಿ ಪ್ರದರ್ಶಿಸಿದ್ದರಿಂದ ಇಬ್ಬರನ್ನೂ ಅಮಾನತ್ತಿನಲ್ಲಿಡಲಾಗಿದೆ ಎಂದು ಪೊಲೀಸ್ ಆಯುಕ್ತ ಲೋಕೇಶ್ ಕುಮಾರ ತಿಳಿಸಿದ್ದಾರೆ.

ಬಂದೋಬಸ್ತ್:
ಲೋಕಸಭಾ ಚುನಾವಣೆ  ಹಿನ್ನೆಲೆಯಲ್ಲಿ ಬೆಳಗಾವಿ ನಗರ ವ್ಯಾಪ್ತಿಯಲ್ಲಿ  ಒಟ್ಟು 1433 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯ ಮೀಸಲು ಪಡೆಯ 3, ಕೇಂದ್ರ ಮೀಸಲು ಪಡೆ (ಸಿಎಪಿಎಫ್)ನ 2 ಹಾಗೂ ನಗರ ಸಶಸ್ತ್ರ ಪಡೆಯ 10 ಪ್ರಹಾರ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

 ಮತಗಟ್ಟೆಗಳ ಹಾಗೂ ಮತದಾರರ ಭದ್ರತೆ ಮತ್ತು ಮತದಾನಕ್ಕೆ ಸೂಕ್ತ ಬಂದೋಬಸ್ತ್ ನೊಂದಿಗೆ ಭಯಮುಕ್ತ ವಾತಾವರಣವನ್ನು ಕಲ್ಪಿಸಲಾಗಿದೆ.  ಆದ್ದರಿಂದ ಬೆಳಗಾವಿ ನಗರದ ಎಲ್ಲ ಸಾರ್ವಜನಿಕರು ನಿರ್ಭೀತಿಯಿಂದ ಹಾಗೂ ಯಾವುದೇ ಆತಂಕವಿಲ್ಲದೇ ತಮ್ಮ ಮತವನ್ನು ಚಲಾಯಿಸಬಹುದಾಗಿದೆ. ಮತಗಟ್ಟೆಯಲ್ಲಿ ಯಾವುದೇ ತೊಂದರೆ ಆದಲ್ಲಿ ಮತಗಟ್ಟೆಯಲ್ಲಿರುವ ಪೊಲೀಸ್ ಅಧಿಕಾರಿಗಳನ್ನು ಅಥವಾ ಸೆಕ್ಟರ್ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ಲೋಕೇಶ್ ಕುಮಾರ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button