ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಸಾರ್ವಜನಿಕರ, ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಬಂದ ಉಡಾನ್ ಯೋಜನೆ ಅಡಿಯಲ್ಲಿ ಹಾರಾಡುತ್ತಿದ್ದ ವಿಮಾನವೂ ಈಗ ಹುಬ್ಬಳ್ಳಿ ಪಾಲಾಗುತ್ತಿದೆ.
ಉಡಾನ್ ಯೋಜನೆ ಬಂದಾಗ ಬೆಳಗಾವಿಯ ಎಲ್ಲಾ ವಿಮಾನಗಳು ಹುಬ್ಬಳ್ಳಿಗೆ ಹಾರಿ ಹೋಗಿದ್ದವು. ನಂತರ ಇಲ್ಲಿನ ಸಾರ್ವಜನಿಕರು ಹೋರಾಟಕ್ಕಿಳಿದರು.
ಅದರ ಫಲವಾಗಿ ಉಡಾನ್ 3ರಲ್ಲಿ ಬೆಳಗಾವಿ ಸೇರ್ಪಡೆಯಾಯಿತು. ಕೆಲವು ವಿಮಾನಗಳೂ ಹಾರಾಡತೊಡಗಿದವು.
ಆದರೆ ಇದೀಗ ವಾರದಲ್ಲಿ 4 ದಿನ ಬೆಳಗಾವಿ- ಬೆಂಗಳೂರು ಮಧ್ಯೆ ಹಾರಾಡುತ್ತಿದ್ದ ಏರ್ ಇಂಡಿಯಾ ವಿಮಾನಗಳನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲಾಗುತ್ತಿದೆ.
ಜೂನ್ 1ರಿಂದ ಏರ್ ಇಂಡಿಯಾ ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಹಾರಾಟ ನಡೆಸಲಿದೆ. ಬೆಳಗಾವಿ – ಬೆಂಗಳೂರು ಮಧ್ಯೆ ಈಗ ವಿಮಾನ ಹಾರಾಟವಿದ್ದು ಶೇ.95ರಷ್ಟು ಸೀಟ್ ತುಂಬಿರುತ್ತದೆ. ಇಷ್ಟಿದ್ದರೂ ಅದನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲು ಸಕಾರಣವೇ ಇಲ್ಲ.
ಮೂಲಗಳ ಪ್ರಕಾರ ಹುಬ್ಬಳ್ಳಿಯ ರಾಜಕಾರಣಿಗಳ ನಿರಂತರ ಒತ್ತಡವೇ ಇದಕ್ಕೆ ಕಾರಣ. ಆದರೆ, 4 ನೇ ಬಾರಿ ಆಯ್ಕೆಯಾಗಿರುವ ನಮ್ಮ ಸಂಸದರ ಹತ್ತಿರ ಇರುವ ವಿಮಾನ ಉಳಿಸಿಕೊಳ್ಳುವ ತಾಕತ್ತಿಲ್ಲವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಏರ್ ಇಂಡಿಯಾ ತನ್ನ ವಿಮಾನಗಳನ್ನು ಹುಬ್ಬಳ್ಳಿಗೆ ಸ್ಥಳಾಂತರಿಸುವುದನ್ನು ಪ್ರತಿಭಟಿಸಲು ಇಲ್ಲಿಯ ವಿವಿಧ ಸಂಘಟನೆಗಳು ಮಂಗಳವಾರ ಸಭೆ ನಡೆಸಲು ನಿರ್ಧರಿಸಿವೆ.
ಈ ಕುರಿತಂತೆ ಗಮನ ಸೆಳೆಯಲು ಸಂಸದರಿಗೆ ನಿರಂತರವಾಗಿ ಫೋನ್ ಮಾಡುತ್ತಿದ್ದೇನೆ. ಆದರೆ ಸಿಗುತ್ತಿಲ್ಲ ಎಂದು ಪ್ರೊಫೆಶನಲ್ ಫೋರಂ ಅಧ್ಯಕ್ಷ ಬಿ.ಎಸ್.ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದರು.
ಒಂದು ಮೂಲದ ಪ್ರಕಾರ, ಶುಕ್ರವಾರ ಸಂಸದ ಸುರೇಶ ಅಂಗಡಿ ನವದೆಹಲಿಗೆ ಹೋಗುವ ಸಂದರ್ಭದಲ್ಲಿ ಏರ್ ಇಂಡಿಯಾ ನಿರ್ಧಾರವನ್ನು ಅವರ ಗಮನಕ್ಕೆ ಅಧಿಕಾರಿಗಳು ತಂದಿದ್ದಾರೆ.
ಹುಬ್ಬಳ್ಳಿಗೆ ಏರ್ ಇಂಡಿಯಾ ಸ್ಥಳಾಂತರಕ್ಕೆ ಅಲ್ಲಿಯ ಸಂಸದ ಪ್ರಹ್ಲಾದ ಜೋಶಿಯವರ ನಿರಂತರ ಒತ್ತಡ ಕಾರಣ ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಬೆಳಗಾವಿ ಪ್ರೊಫೆಶನಲ್ ಫೋರಂ ಗೆ ತಿಳಿಸಿದ್ದಾರೆ.
ನಾವು ಬೆಳಗಾವಿಗೆ ವಿಮಾನ ಕೇಳೋಣ, ಹುಭ್ಭಳ್ಳಿಯಿಂದ ಸ್ಥಳಾಂತರಿಸಲು ಕೇಳೋದು ಬೇಡ ಎಂದು ಸುರೇಶ ಅಂಗಡಿ ಈ ಹಿಂದೆ ಮೀಟಿಂಗ್ ಒಂದರಲ್ಲಿ ಹೇಳಿದ್ದರು. ಆದರೆ ಅವರು ಮಾತ್ರ ನಮ್ಮದನ್ನೆಲ್ಲ ಎತ್ತಿಕೊಂಡು ಹೋಗುತ್ತಿದ್ದಾರೆ.
ನವದೆಹಲಿಯಲ್ಲಿರುವ ಸುರೇಶ ಅಂಗಡಿ ಈ ಬಗ್ಗೆ ಏನು ಮಾಡುತ್ತಾರೆ ಕಾದು ನೋಡಬೇಕಿದೆ. ಪ್ರತಿಕ್ರಿಯೆ ಪಡೆಯಲು ಮಾಡಿದ ಕರೆಯನ್ನು ಅವರು ಸ್ವೀಕರಿಸಲಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ