
-ಪೂರ್ಣಿಮಾ ಹೆಗಡೆ, ನ್ಯಾಯವಾದಿ
ಕಸೂತಿಹಾಕಿದ ಸೆರಗಿನ ನೆರಳಿನ ಮರೆಯಲ್ಲಿ ಕಣ್ತಗ್ಗಿಸಿ, ಕೈತುಂಬ ಬಳೆ ತೊಟ್ಟು, ಅಕ್ಕಿ ಆರಿಸುತ್ತಿದ್ದ ಕೈಗಳು ಇಂದು ಬಂದೂಕನ್ನು ಹಿಡಿದು ದೇಶ ರಕ್ಷಣೆಗೆ ನಿಂತಿವೆ. ತಲೆಯ ಮೇಲಿನ ಕ್ಯಾಪ್ ಸರಿಪಡಿಸಿ ಸೆಲ್ಯೂಟ್ ಹೊಡೆದು ಗಗನಕ್ಕೆ ಹಾರುತ್ತಿವೆ. ನೊಂದು ಬಂದು ನ್ಯಾಯ ಬೇಡಿದವರ ತಟ್ಟೆಯಲ್ಲಿ ನ್ಯಾಯವನ್ನಿಟ್ಟು ತನ್ನ ಹೆಸರಿನ ರುಜು ಹಾಕುತ್ತಿವೆ. ಸರಿ ಸಮಾನವಾದ ಕೊಡುಗೆ ತಾನೂ ಮನುಕುಲಕ್ಕೆ ನೀಡಬಲ್ಲೆನೆಂದು ಸಾಬೀತು ಪಡಿಸಿವೆ.
ಆದರೂ ದೌರ್ಜನ್ಯ? ಶೋಷಣೆ?
ಮೊದಲು ಮಹಿಳೆಗೆ ಅವಕಾಶವಿರಲಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಹುಟ್ಟು, ಬದುಕು, ಸಾವು. ಆದರೂ ಅಲ್ಲಿಯೇ ಶೋಷಣೆ, ಅಲ್ಲಿಯೇ ದೌರ್ಜನ್ಯ. ಆ ಮನೆಯ ಯಜಮಾನ, ಅವಳ ಯಜಮಾನ, ಆ ಮನೆಯ ಅಳಿಯ, ಊರ ಹಿರಿಯ, ಕೌಟುಂಬಿಕ ಹಿತಚಿಂತಕ ಹೀಗೇ ಯಾರ್ಯಾರೋ!

ಈಗ ನಾಲ್ಕು ಗೋಡೆಯ ಮಧ್ಯೆ ಇಲ್ಲ. ಹೊರ ಜಗತ್ತಿನಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಆದರೆ ಶೋಷಣೆ ಮಾತ್ರ ಬೆಂಬಿಡದೆ ಹಿಂಬಾಲಿಸಿದೆ. ಮನೆ ಎದುರಿನ ಬೀದಿಯಲ್ಲಿ, ದಿನವೂ ಓಡಾಡುವ ಬಸ್ಸಿನಲ್ಲಿ, ಓದುತ್ತಿರುವ ಶಾಲೆ ಕಾಲೇಜಿನಲ್ಲಿ, ಉಳಿದುಕೊಳ್ಳುವ ವಸತಿ ಗ್ರಹಗಳಲ್ಲಿ, ಕೆಲಸ ಮಾಡುವ ಕಛೇರಿಯಲ್ಲಿ ಎಲ್ಲಾಕಡೆ… ಎಲ್ಲಾ ಕಡೆ…
ವೇದಿಕೆಯಲ್ಲಿ ನಿಂತು ಬೀಗುವ ಭಾಷಣ ಬೇರೆ, ಮನಸ್ಸಿನಲ್ಲಿರುವ ಭಾವನೆ ಬೇರೆ. ಮನಸ್ಸಿನ ಭಾವನೆಯನ್ನ ನಡವಳಿಕೆ ಹೇಳುತ್ತದೆ. ಅದಕ್ಕೆ ಯಾವುದೇ ವೇದಿಕೆ ಬೇಕಿಲ್ಲ.
ದಿನ ಬೆಳಗಾದರೆ ಇಡೀ ಕುಟುಂಬದ ಬೇಕು ಬೇಡಗಳನ್ನ ಪೂರೈಸಿ, ತಾನು ದಣಿದು ಸಂಸಾರವನ್ನು ತಂಪಾಗಿಸಿ, ಇದೇ ತನ್ನ ಜನ್ಮದ ಸಾರ್ಥಕತೆಯೆಂದುಕೊಂಡು ಒಂದುದಿನ ಮಣ್ಣಾಗಿ ಹೋಗುವ ಅವಳ ಮೇಲೆ ಶೋಷಿಸಿ ದೌರ್ಜನ್ಯವೆಸಗುವಷ್ಟು ದ್ವೇಷ ಯಾಕೆ? ಒಮ್ಮೆ ಅವಳನ್ನ ಗೌರವಿಸಿ ಪ್ರೀತಿಸಿ ನೋಡಿದರೆ ಜೀವನ ಸುಂದರ ಮತ್ತು ಸರಳವಾಗುವದರಲ್ಲಿ ಸಂಶಯವೇ ಇಲ್ಲ.
ಅಛ್ಛೇದಿನ್ ಕಿ ಷುರುವಾತ್ ಆಜ್ ಸೇ ಶುರು ಕರೇಂ?