ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಕೈಗಾರಿಕೆಗಳ ಸ್ಥಾಪನೆಗೆ ಕ್ರಮ -ಶಾಸಕಿ ಕನೀಜ ಫಾತೀಮಾ

   ಪ್ರಗತಿವಾಹಿನಿ ಸುದ್ದಿ, ಕಲಬುರಗಿ
ಕಲಬುರಗಿ ಜಿಲ್ಲೆಯ ತೊಗರಿ ಬೇಳೆಯು ಏಷ್ಯಾ ಖಂಡದಲ್ಲಿ ಪ್ರಸಿದ್ಧಿ ಹೊಂದಿದೆ. ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ತೊಂದರೆಗಳಿದ್ದಲ್ಲಿ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಕಲಬುರಗಿ ಉತ್ತರ ಶಾಸಕಿ ಕನೀಜ ಫಾತೀಮಾ ತಿಳಿಸಿದರು. 
ಅವರು ಕಲಬುರಗಿಯ ಹೆಚ್.ಕೆ.ಸಿ.ಸಿ.ಐ. ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕಲಬುರಗಿ ಲೇಡೀಸ್ ಅಸೋಸಿಯೇಶನ್ ಮ್ಯಾನ್ಯುಫ್ಯಾಕ್ಚರರ್ಸ್ ಪಾರ್ಕ್ (ಕೆ-ಲ್ಯಾಂಪ್), ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್ ಹಾಗೂ ಗುಲಬರ್ಗಾ ಕೈಗಾರಿಕಾ ಪ್ರದೇಶ ಉತ್ಪಾದಕರ ಸಂಘ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೈಗಾರಿಕಾ ನೀತಿ 2014-19 ಹಾಗೂ ಉದ್ದೇಶಿತ ಹೊಸ ಕೈಗಾರಿಕಾ ನೀತಿ ಮತ್ತು ಸುಗಮ ವಾಣಿಜ್ಯ-ವ್ಯವಹಾರ ನಡೆಸುವಿಕೆಗಾಗಿ ಸಲಹೆಗಳ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಕಲಬುರಗಿಯಲ್ಲಿ ಮಹಿಳೆಯರಿಗಾಗಿ  ಮಹಿಳಾ ಔದ್ಯೋಗಿಕ ಪಾರ್ಕ್ ಸ್ಥಾಪನೆಯಾಗಿದ್ದು, ಇದರಿಂದ ಹೆಚ್ಚಿನ ಮಹಿಳೆಯರು ಉದ್ಯೋಗದಲ್ಲಿ ತೊಡಗುವಂತಾಗಬೇಕು ಎಂದರು. 
ಕಾಸಿಯಾ ಉಪಾಧ್ಯಕ್ಷ ಆರ್. ರಾಜು ಮಾತನಾಡಿ, ಕೈಗಾರಿಕ ನೀತಿ ಜಾರಿಗೊಳಿಸಿದ ಪ್ರಥಮ ರಾಜ್ಯ ಕರ್ನಾಟಕವಾಗಿದ್ದು, ಕೈಗಾರಿಕಾ ನೀತಿಯಡಿ ಜವಳಿ, ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನ, ಮೂಲಭೂತ ಸೌಕರ್ಯ, ಖನಿಜ ನೀತಿ, ಭೌಗೋಳಿಕ ನೀತಿಗಳಂತಹ ಹತ್ತು ಹಲವು ನೀತಿಗಳನ್ನು ಜಾರಿಗೆ ತಂದಿದೆ. ಕೈಗಾರಿಕರಣದಲ್ಲಿ ಹಾಗೂ ಔದ್ಯೋಗಿಕವಾಗಿ ರಾಜ್ಯವೂ ಮೊದಲನೇ ಸ್ಥಾನಕ್ಕೆ ಬರಲು ಸರ್ಕಾರ ಹೊರಡಿಸಿರುವ ನೀತಿಗಳ ಉಪಯೋಗ ಪಡೆಯಬೇಕು. ಉದ್ದಿಮೆದಾರರು ಐ.ಎಸ್.ಓ. ಪಡೆಯುವುದರ ಮೂಲಕ ಧನಸಹಾಯ ಪಡೆಯಬಹುದು. ಸರ್ಕಾರದ ನೀತಿಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಉದ್ದಿಮೆ ಅಭಿವೃದ್ಧಿಪಡಿಸಲು ಸಾಧ್ಯ ಎಂದರು. 
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಎಲ್ಲ ಜಿಲ್ಲೆಗಳ ಕಾರ್ಯಾಗಾರ ಹಮ್ಮಿಕೊಂಡು ಸರ್ಕಾರದ ನೀತಿಗಳ ಬಗ್ಗೆ ಉದ್ದಿಮೆದಾರರಿಗೆ ತಿಳಿ ಹೇಳಲಾಗುತ್ತಿದೆ. ನೀತಿಯಲ್ಲಿರುವ ತಪ್ಪುಗಳನ್ನು ಸರಿಪಡಿಸಲು ಸಲಹೆ ಪಡೆಯಲಾಗುತ್ತಿದೆ. ಸಂಕಷ್ಟದಲ್ಲಿರುವ ಉದ್ದಿಮೆಗಳನ್ನು ಪುನಶ್ಚೇತನಗೊಳಿಸುವ ಅವಶ್ಯತೆಯಿದೆ. ಈ ಕುರಿತು ಸಲಹೆ ನೀಡಬೇಕು. ಮುಂದಿನ 5 ವರ್ಷಕ್ಕೆ ಯಾವ ಮಾದರಿಯ ನೀತಿ ಬೇಕಾಗುತ್ತದೆ ಎಂಬ ಕುರಿತು ಪ್ರತಿಕ್ರಿಯೆ ನೀಡಬೇಕು. ಹೈ.ಕ. ಭಾಗದಲ್ಲಿ ಗುಡಿ ಕೈಗಾರಿಕೆ ಬೆಳವಣಿಗೆಯಾಗಬೇಕಾಗಿದೆ. ಈ ಭಾಗದಲ್ಲಿ ಸಿಗುವ ಕಚ್ಚಾ ವಸ್ತುಗಳಿಗನುಗುಣವಾಗಿ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎಂದರು. 
 ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ಹೈ.ಕ. ಭಾಗಕ್ಕೆ ವರದಾನವಾಗಿ ದೊರೆತ್ತಿರುವ 371(ಜೆ) ಕಲಂ ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಭಾಗದಲ್ಲಿ ಔದ್ಯೋಗೀಕರಣ ಹೆಚ್ಚಿಸಲು ಮುಂದಿನ ದಿನಗಳಲ್ಲಿ 371(ಜೆ) ಕಲಂ  ಯಾವ ರೀತಿ  ಸಹಾಯವಾಗಲಿದೆ ಎಂಬ ಬಗ್ಗೆ ಚರ್ಚೆಗಳಾಗಬೇಕು. ಕಲಬುರಗಿ ಜಿಲ್ಲೆಯಲ್ಲಿ ಖನೀಜ ನಿಕ್ಷೇಪಗಳು ಹೇರಳವಾಗಿವೆ. ಇಲ್ಲಿ ಕೇವಲ ಸಿಮೆಂಟ್ ಕಂಪನಿಗಳು ಮಾತ್ರ ಸ್ಥಾಪನೆಯಾಗಿವೆ. ಈ ಭಾಗದಲ್ಲಿ ಪರಿಸರ ಸ್ನೇಹಿ ಕೈಗಾರಿಕೆಗಳು ಬರಬೇಕಾಗಿದೆ. ಕಲಬುರಗಿ ಮತ್ತು ತುಮಕೂರಿನಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಸ್ಥಾಪನೆಗೆ ಮಂಜೂರಾತಿ ದೊರೆತಿತ್ತು. ಈಗಾಗಲೇ ತುಮಕೂರಿನಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್ ಕಾಮಗಾರಿಯೂ ಶೇ. 80ರಷ್ಟು ಪೂರ್ಣಗೊಂಡಿದೆ. ಕಲಬುರಗಿಯಲ್ಲಿಯೂ ಸಹ ಇಂಡಸ್ಟ್ರೀಯಲ್  ಕಾರಿಡಾರ  ಸ್ಥಾಪನೆಗೆ ಮುತುವರ್ಜಿವಹಿಸಬೇಕಾಗಿದೆ. 
ಈಗಾಗಲೇ 2000 ಎಕರೆ ಭೂಮಿಯನ್ನು ಇಂಡಸ್ಟ್ರೀಯಲ್ ಕಾರಿಡಾರ್‍ಗಾಗಿ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಇಂಡಸ್ಟ್ರೀಯಲ್ ಕಾರಿಡಾರ್‍ಗಾಗಿ ಬಂಡವಾಳ ಶಾಹಿಗಳನ್ನು ಗುರುತಿಸುವ ಜವಾಬ್ದಾರಿ ಕೈಗಾರಿಕಾ ಸಂಘದ ಮೇಲಿದೆ ಎಂದರು.
ಕಲಬುರಗಿಯ ಪ್ರಮುಖ ಉದ್ದಿಮೆಯಾದ ದಾಲ್ ಉದ್ದಿಮೆ ಸೊರಗುತ್ತಿದೆ. ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜಿಲ್ಲಾಧಿಕಾರಿಗಳು ದಾಲ್ ಉದ್ದಿಮೆ ಪುನಶ್ಷೇತನಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದನ್ನು ಜಾರಿಗೊಳಿಸಬೇಕು. ಜೇವರ್ಗಿಯಲ್ಲಿ ಫುಡ್ ಪಾರ್ಕ್ ಪ್ರಾರಂಭಿಸಲು ಭೂಮಿ ಭೂಸ್ವಾಧೀನ ಮಾಡಿಕೊಂಡು ನಿವೇಶನ ಹಂಚಿಕೆ ಸಹಿತ ಮಾಡಲಾಗಿದೆ. ಫುಡ್‍ಪಾರ್ಕ್ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವಂತೆ ಮುತುವರ್ಜಿ ವಹಿಸಬೇಕು. ಮಹಿಳಾ ಉದ್ದಿಮೆದಾರರಿಗಾಗಿ ಪ್ರಾರಂಭಿಸಿರುವ ಮಹಿಳಾ ಉದ್ದಿಮೆದಾರರ ಪಾರ್ಕ್‍ನಲ್ಲಿರುವ ತೊಂದರೆಗಳನ್ನು ನಿವಾರಿಸಬೇಕು. 230 ಮಹಿಳಾ ಉದ್ದಿಮೆದಾರರು ಉದ್ದಿಮೆ ಪ್ರಾರಂಭಿಸಲು ಕ್ರಿಯಾ ಯೋಜನೆ ಹೊಂದಿದ್ದು, ಅವರನ್ನು ಪ್ರೋತ್ಸಾಹಿಸಬೇಕು. ಬೃಹತ್ ಕಾರ್ಖಾನೆಗಳು ತಮ್ಮ ಆದಾಯಕ್ಕನುಗುಣವಾಗಿ ಕಾರ್ಖಾನೆ ಅಕ್ಕಪಕ್ಕದ ಗ್ರಾಮಗಳ ಅಭಿವೃದ್ಧಿ ಮಾಡುತ್ತಿಲ್ಲ. ಇದನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.  
 ಕಾರ್ಯಕ್ರಮದಲ್ಲಿ ಬೆಂಗಳೂರಿನ (ಎಂಎಸ್‍ಎಂಇ ಮತ್ತು ಪಿಪಿ) ಅಪರ ನಿರ್ದೇಶಕ ಹಾಗೂ ಎಂಎಸ್‍ಎಫ್‍ಸಿ ಸದಸ್ಯ ಕಾರ್ಯದರ್ಶಿ ಹೆಚ್.ಎಂ. ಶ್ರೀನಿವಾಸ, ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರ ಜಂಟಿ ನಿರ್ದೇಶಕಿ ಸುರೇಖಾ ಮನೋಲಿ, ಬೆಂಗಳೂರಿನ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಲಿಂಗಪ್ಪ ಬಿ. ಪೂಜಾರಿ, ಕಲಬುರಗಿ ಕೆಎಸ್‍ಎಫ್‍ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ. ಗಣಪತಿ ರಾಠೋಡ ಹಾಗೂ ಕೆಎಸ್‍ಪಿಸಿಬಿ ಪರಿಸರ ಅಧಿಕಾರಿ ಸಿ.ಎನ್. ಮಂಜಪ್ಪ, ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಚಿದಂಬರರಾವ ಪಾಟೀಲ, ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button