ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಕೃಷ್ಣಾ-ಭೀಮಾ ನದಿಗೆ ನೀರು ಬಿಡುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ ಅವರಿಗೆ ಪತ್ರ ಬರೆದಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಮಾನವೀಯತೆಯ ಆಧಾರದ ಮೇಲೆ ಜನರು ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಪೂರೈಸಲು ಕೊಯ್ನಾದಿಂದ ಕೃಷ್ಣ ನದಿಗೆ 2 ಟಿಎಂಸಿ ಹಾಗೂ ಉಜ್ಜನಿಯಿಂದ ಭೀಮಾ ನದಿಗೆ 2 ಟಿಎಂಸಿ ನೀರನ್ನು ಹರಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉತ್ತರ ಕರ್ನಾಟಕದ ಜನ ತೀವ್ರ ಬರಗಾಲದಿಂದ ತತ್ತರಿಸಿದ್ದು, ಮಹಾರಾಷ್ಟ್ರದ ಕೋಯ್ನಾ, ಉಜ್ಜಯಿನಿ ಅಣೆಕಟ್ಟೆಗಳಿಂದ ರಾಜ್ಯದ ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುವಂತೆ ಅವರು ಮಹಾರಾಷ್ಟ್ರ ಸಿಎಂ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯವು ಈಗಾಗಲೇ ತೀವ್ರ ಬರಗಾಲ ಎದುರಿಸುತ್ತಿದೆ. ಉತ್ತರ ಕರ್ನಾಟಕದ ಬಹುಪಾಲು ಎಲ್ಲ ಜಿಲ್ಲೆಗಳೂ ಸಹ ಬರಪೀಡಿತ ಜಿಲ್ಲೆಗಳಾಗಿವೆ. ಮುಂಗಾರು ಕೊರತೆ ತೀವ್ರವಾಗಿದ್ದು ಮಾರ್ಚ್ ಆರಂಭದಲ್ಲಿಯೇ ನದಿಗಳಲ್ಲಿ ನೀರು ಕೊರತೆ ಪ್ರಾರಂಭವಾಗಿದೆ.
ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಈ ನಾಲ್ಕು ಜಿಲ್ಲೆಗಳಿಗೆ ನೀರು ಹರಿಸಲು ಕೃಷ್ಣಾ-ಭೀಮಾ ನದಿಗೆ ನೀರು ಬಿಡಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.