ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಒತ್ತು
ಸಮಗ್ರ ಅಭಿವೃದ್ಧಿ ಸೂಚ್ಯಂಕದ ಪರಿಷ್ಕರಣೆ
ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸಂವಿಧಾನದ ಪರಿಚ್ಛೇಧದ ೩೭೧(ಜೆ) ಅಡಿಯಲ್ಲಿ ಕಲ್ಪಿಸಲಾಗಿರುವ ವಿಶೇಷ ಆದ್ಯತೆ ನೀಡಿ ಶಿಕ್ಷಣ, ಆರೋಗ್ಯ, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿ ಸೂಚ್ಯಂಕವನ್ನು ಪರಿಷ್ಕರಣೆ ಮಾಡಲು ಕ್ರಮ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ರಾಜ್ಯ ವಿಧಾನಪರಿಷತ್ತಿನಲ್ಲಿ ಮಂಗಳವಾರ ಪ್ರಕಟಿಸಿದರು.
ಕೆ. ಸಿ. ಕೊಂಡಯ್ಯ ಹಾಗೂ ಶರಣಪ್ಪ ಮಟ್ಟೂರ್ ಅವರು ನಿಯಮ ೩೩೦ ರ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ ಸಾಮಾಜಿಕ-ಆರ್ಥಿಕ, ಜನಸಂಖ್ಯಾ ವ್ಯಾಪ್ತಿಯ ಅಭಿವೃದ್ಧಿಯ ಸ್ಪಷ್ಟ ಚಿತ್ರಣ ಪಡೆಯಲಾಗುವುದು. ಕಲಬುರ್ಗಿಯ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಿಗೆ ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರ ಪ್ರತ್ಯಾಯೋಜಿಸಲಾಗುವುದು. ಈ ಭಾಗದಲ್ಲಿ ಖಾಲಿ ಇರುವ ೪೫ ಸಾವಿರ ಹುದ್ದೆಗಳ ಪೈಕಿ ಈಗಾಗಲೇ ಸುಮಾರು ೨೫ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉಳಿದ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದರು.
ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ೨೦೧೩-೧೪ ಮತ್ತು ೨೦೧೪-೧೫ ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಪ್ರತ್ಯೇಕ ಅನುದಾನ ಮಂಜೂರು ಮಾಡಿರುವುದಿಲ್ಲ. ಅಲ್ಲದೆ, ೨೦೧೫-೧೬ ರಿಂದ ೨೦೧೭-೧೮ ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಅನುದಾನ ಪ್ರತ್ಯೇಕವಾಗಿ ಮಂಜೂರಾಗಿದೆ. ಮಂಜೂರಾದ ಎಲ್ಲಾ ಅನುದಾನವೂ ಬಿಡುಗಡೆಯಾಗಿದೆ.
ಅಂತೆಯೇ, ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ೨೦೧೩ ರಿಂದ ಇಲ್ಲಿಯವರೆಗೆ ಸಾಮಾನ್ಯ ವೆಚ್ಚದಡಿ ಬಿಡುಗಡೆಯಾದ ೧೧೨೯.೩೫ ಕೋಟಿ ರೂಪಾಯಿಗಳಲ್ಲಿ ೬೯೩ ಕೋಟಿ ರೂ. ವೆಚ್ಚವಾಗಿದೆ. ಅಲ್ಲದೆ, ೪೩೬.೩೨ ಕೋಟಿ ರೂ.ಗಳ ಹಣ ಖರ್ಚಾಗದೇ ಬಾಕಿ ಉಳಿದಿದೆ. ಮೊದಲ ಮತ್ತು ಎರಡನೇ ಕಂತನ್ನು ನೇರವಾಗಿ ಬಿಡುಗಡೆ ಮಾಡಲಾಗಿದೆ. ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಆದೇಶದ ಪ್ರಕಾರ ಮೂರನೇ ಮತ್ತು ನಾಲ್ಕನೇ ಕಂತು ಬಿಡುಗಡೆ ಮಾಡಲು ಹಿಂದಿನ ಕಂತುಗಳ ಶೇಕಡಾ ೭೫ ರಷ್ಟು ಅನುದಾನದ ಬಳಕೆ ಕಡ್ಡಾಯವಾಗಿದೆ. ಪ್ರತಿವರ್ಷ ಬಿಡುಗಡೆಯಾದ ಅನುದಾನದಲ್ಲಿಯೇ ಸುಮಾರು ೨೦೦ ಕೋಟಿ ರೂ. ಬಾಕಿ ಉಳಿದಿದೆ. ಮಂಡಳಿಯು ನಿಗದಿತ ಸಮಯದಲ್ಲಿ ಅನುದಾನ ಬಳಸಿಕೊಂಡರೆ, ಆಯವ್ಯಯದ ಜೊತೆಗೆ ಹೆಚ್ಚುವರಿ ಅವಶ್ಯಕ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅನುದಾನ ಬಳಕೆ ಕುಂಠಿತವಾಗಲು ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯೇ ಪ್ರಮುಖ ಕಾರಣವಾಗಿದೆ. ಸುಮಾರು ೪೫,೦೦೦ ಹುದ್ದೆಗಳ ಭರ್ತಿಗೆ ಏಕಕಾಲದಲ್ಲಿ ಅನುಮತಿ ನೀಡಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ೨೦ ರಿಂದ ೨೫ ಸಾವಿರ ಹುದ್ದೆಗಳ ನೇಮಕಾತಿಯಾಗಿದೆ. ಉಳಿದ ಖಾಲಿ ಹುದ್ದೆಗಳನ್ನು ವಿಶೇಷ ಆದ್ಯತೆಯಡಿ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ಚರ್ಚೆಯಲ್ಲಿ ಪಾಲ್ಗೊಂಡು ಈ ಭಾಗದ ಜನರ ಬಹು ದಶಕಗಳ ಹೋರಾಟದ ಫಲವಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಸಂವಿಧಾನದ ಪರಿಚ್ಛೇಧ ೩೭೧ (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ದೊರೆತಿದೆ. ಇದರ ಪ್ರತಿಫಲಗಳ ಚಿತ್ರಣ ದೊರೆಯಬೇಕಾದರೆ ಕನಿಷ್ಠ ಐದು ವರ್ಷಗಳ ಕಾಲಾವಕಾಶವನ್ನಾದರೂ ನೀಡಬೇಕು. ಸುವರ್ಣ ಕರ್ನಾಟಕ ನಿರ್ಮಾಣವಾಗಲು ರಾಜ್ಯದ ಎಲ್ಲಾ ಪ್ರದೇಶಗಳೂ ಸಮಾನವಾಗಿ ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು.
ಸದಸ್ಯರಾದ ಬಸವರಾಜ ಪಾಟೀಲ ಇಟಗಿ, ರಘುನಾಥರಾವ್ ಮಲ್ಕಾಪುರೆ, ಅರುಣ ಶಹಾಪೂರ ಅವರೂ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ