Latest

ಗಡಿನಾಡಿನ ಉನ್ನತ ಶಿಕ್ಷಣದ ಹೊಂಗಿರಣ-ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

ಬುಧವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ

ಗಡಿನಾಡಿನಲ್ಲಿ ಉನ್ನತ ಶಿಕ್ಷಣದ ಆಶಾಕಿರಣವಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಒಂಭತ್ತು ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನತೆಯ ಉನ್ನತ ಶಿಕ್ಷಣದ ಆಶೋತ್ತರಗಳನ್ನು ಈಡೇರಿಸಿದೆ. ಜಾಗತಿಕವಾಗಿ ಗುಣಮಟ್ಟದ ಉನ್ನತ ಶಿಕ್ಷಣವನ್ನು, ಶೈಕ್ಷಣಿಕವಾಗಿ ಹಿಂದುಳಿದ ಹಾಗೂ ಗಡಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ನೀಡುವ ಮಹಾತ್ವಾಕಾಂಕ್ಷಿ ಉದ್ದೇಶವನ್ನು ಸಾದ್ಯಂತವಾಗಿ ಈಡೇರಿಸಿದೆ.

ಐತಿಹಾಸಿಕ ಪ್ರಸಿದ್ಧ ಕಿತ್ತೂರಿನ ರಾಣಿ ಚನ್ನಮ್ಮಳ ಹೆಸರನ್ನು ಹೊತ್ತ ವಿಶ್ವವಿದ್ಯಾಲಯವು ನಾಡು-ನುಡಿ ಪ್ರೇಮ, ಸಾಹಿತ್ಯಿಕ ಗರಿಮೆ, ಸಾಂಸ್ಕೃತಿಕ ಹಿರಿಮೆ, ಶೈಕ್ಷಣಿಕ ಚಿಂತನೆಗಳನ್ನು ಗಡಿ ಭಾಗಗಳ ಸಾಮಾನ್ಯ ಜನತೆ ಹಾಗೂ ವಿದ್ಯಾರ್ಥಿಗಳಿಗೆ ಪಸರಿಸುತ್ತ ಪ್ರಾದೇಶಿಕ ಹಾಗೂ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿದೆ. ಗಡಿನಾಡಿನ ಆಶಾಕಿರಣವಾಗಿ ಲಕ್ಷಾಂತರ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಕಾಂಕ್ಷೆಗಳನ್ನು ಈಡೇರಿಸುತ್ತ ಶೈಕ್ಷಣಿಕವಾಗಿ ಮಹತ್ತರ ಸಾಧನೆಯ ಹಾದಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಸ್ಕೂಲ್ ಕಾನ್ಸೆಪ್ಟ್‌ಗಳನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿ ಜಾಗತಿಕ ಮಟ್ಟದ ಶೈಕ್ಷಣಿಕ ಪ್ರಗತಿ ಪಥದತ್ತ ದಾಪುಗಾಲನ್ನಿಟ್ಟಿದೆ.


ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ದಿ: ೨೬-೦೭-೨೦೧೦ ರಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದಂತೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಅಧಿನಿಯಮ ೨೦೧೦ ರ ಪ್ರಕಾರ ಅಸ್ತಿತ್ವಕ್ಕೆ ಬಂದಿರುತ್ತದೆ. ಎಂಟನೇ ವರ್ಷಗಳನ್ನು ಪೊರೈಸಿದ ವಿಶ್ವವಿದ್ಯಾಲಯವು ಅಭಿವೃದ್ಧಿಯ ಪ್ರಮುಖ ಹೆಜ್ಜೆಗಳಿಂದ ಸಾಧನೆಗಳನ್ನು ದಾಖಲಿಸಿದೆ. ರಾಷ್ಟ್ರೀಯ ಹೆದ್ದಾರಿ – ೪ ಕ್ಕೆ ಭೂತರಾಮನಹಟ್ಟಿ ಗ್ರಾಮದ ಸರಹದ್ದಿಗೆ ಹೊಂದಿಕೊಂಡಿರುತ್ತದೆ. ಉತ್ತರ ಕರ್ನಾಟಕದ ಮೂರು ಪ್ರತಿಷ್ಠಿತ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪಾಲಿಗೆ ಶೈಕ್ಷಣಿಕ ವರದಾನವಾಗಿದೆ. ಸುಮಾರು ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣವನ್ನು ಪಡೆದು ಪದವಿಗಳನ್ನು ಹೊಂದಿ ಸಮಾಜದ, ವ್ಯವಸ್ಥೆಯ ಮುಖ್ಯಧಾರೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇದೊಂದು ಹೆಮ್ಮೆಯ ಸಂಗತಿ.

ಶಿವಾನಂದ ಹೊಸಮನಿ

ಬೆಳಗಾವಿಯಿಂದ ೧೮ ಕಿ.ಮೀ. ಗಳ ಉತ್ತರ ಭಾಗದಲ್ಲಿರುವ ವಿಶ್ವವಿದ್ಯಾಲಯವು ೧೭೮.೨೦ ಎಕರೆ ಪ್ರದೇಶದಲ್ಲಿ ನೆಲೆಗೊಂಡಿದೆ. ಮುಖ್ಯ ಆವರಣದಲ್ಲಿ ಆಡಳಿತ ಕಛೇರಿ ಹಾಗೂ ಎರಡು ವಸತಿ ನಿಲಯಗಳನ್ನು ಅಲ್ಲದೇ ಶೈಕ್ಷಣಿಕ ಕಟ್ಟಡವನ್ನು ಹೊಂದಿದೆ. ವಿಶ್ವವಿದ್ಯಾಲಯವು ಸರ್ಕಾರದ ವಿವಿಧ ಯೋಜನೆಗಳಿಂದ ೧೦ ಕೋಟಿ ರೂಪಾಯಿಗಳನ್ನು ಅಭಿವೃದ್ಧಿ ಅನುದಾನವೆಂದು ಈವರೆಗೆ ಪಡೆದುಕೊಂಡಿದೆ. ಇದರಲ್ಲಿ ಯುಜಿಸಿಯಿಂದ ೨.೫೦ ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಾಗಿದೆ. ಹಾಗೂ ವಿಶೇಷ ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಹಲವು ಕೋಟಿಗಳಷ್ಟು ಅನುದಾನವನ್ನು ಪಡೆದು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಲಾಗಿದೆ.
ಗಡಿಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ೩೭೨ ಮಹಾವಿದ್ಯಾಲಯಗಳು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿವೆ. ಸುಮಾರು ೨ ಲಕ್ಷ ವಿದ್ಯಾರ್ಥಿಗಳು ಇದರಡಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ವಿಜಯಪುರದಲ್ಲಿ ’ವಚನ ಸಂಗಮ’, ಬಾಗಲಕೋಟೆಯಲ್ಲಿ ’ಅನುಭಾವ ಸಂಗಮ’ ಜಮಖಂಡಿಯಲ್ಲಿಯೂ ಸ್ನಾತಕೋತ್ತರ ಕೇಂದ್ರ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವನ್ನು ವಿಶ್ವವಿದ್ಯಾಲಯವು ಹೊಂದಿದ್ದು, ರಾಜ್ಯದ ಎರಡನೆಯ ಅತಿದೊಡ್ಡ ವಿಶ್ವವಿದ್ಯಾಲಯವಾಗಿದೆ. ಅಲ್ಲದೆ ೫೨ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸಗಳನ್ನು ಅನುಮತಿ ನಿಡಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ. ೧೯ ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ ೧,೪೫೬ ವಿದ್ಯಾರ್ಥಿಗಳು ಉನ್ನತ ಅಧ್ಯಯನ ನಡೆಸುತ್ತಿದ್ದಾರೆ. ೪ ವಿಷಯಗಳಲ್ಲಿ ಪಿ.ಜಿ. ಡಿಪ್ಲೋಮಾ ಕೋರ್ಸ್ ೪೦೦ ಕ್ಕಿಂತ ಹೆಚ್ಚು ವಿಷಯಗಳಲ್ಲಿ ಪಿಎಚ್.ಡಿ ಸಂಶೋಧನೆಗಳು ನಡೆಯುತ್ತಿವೆ. ಯುಜಿಸಿ ಯಿಂದ ೨ಎಫ್ ಹಾಗೂ ೧೨ಬಿ ಮನ್ನಣೆಯನ್ನು ಪಡೆದುಕೊಂಡಿದೆ. ಯುಜಿಸಿ ಯಿಂದ ನ್ಯಾಕ್ ಮನ್ನಣೆಗಾಗಿ ಅಧ್ಯಯನ ವರದಿ (ಎಸ್‌ಎಸ್‌ಆರ್) ಯನ್ನು ಸಲ್ಲಿಸಲಾಗಿದೆ. ಅನೇಕ ಮೂಲಭೂತ ಸೌಕರ್ಯಗಳ ಕೊರತೆಗಳ ನಡುವೆಯೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತ ಜ್ಞಾನಮುಖಿ, ಸಮಾಜಮುಖಿ, ಉದ್ಯೋಗಮುಖಿ ಚಿಂತನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದರೊಂದಿಗೆ ಶೈಕ್ಷಣಿಕವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಗುಣಾತ್ಮಕವಾಗಿ ಬೆಳೆದು ನಿಂತಿದೆ.

ಆಡಳಿತಾಂಗ :

ವಿಶ್ವವಿದ್ಯಾಲಯದ ಪ್ರಮುಖ ಅಂಗವಾದ ಆಡಳಿತಾಂಗವು ಶೈಕ್ಷಣೀಕ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾಮಂಡಳ ವಿಭಾಗದೊಂದಿಗೆ ಕಾಲೇಜು ಅಭಿವೃದ್ಧಿ ಮಂಡಳಿ ವಿಭಾಗ, ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ, ಯೋಜನೆ ಮತ್ತು ಅಭಿವೃದ್ಧಿ ವಿಭಾಗ, ವಿಶ್ವವಿದ್ಯಾಲಯ ಗ್ರಂಥಾಲಯ, ವಿದ್ಯಾರ್ಥಿ ಕಲ್ಯಾಣ ವಿಭಾಗ, ಪ್ರಸಾರಾಂಗ, ರಾಷ್ಟ್ರೀಯ ಸೇವಾ ಯೋಜನೆ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ, ಪಿ.ಜಿ. ಜಿಮಖಾನ, ವಸತಿನಿಲಯಗಳು, ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ ಘಟಕ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಘಟಕ, ಕಟ್ಟಡ ವಿಭಾಗ, ಮಹಿಳಾ ಸಬಲೀಕರಣ ಕೋಶ,  ಆರೋಗ್ಯ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶ, ಸಂಶೋಧನಾ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ.

ಅಧ್ಯಯನಾಂಗ :

ಆಧುನಿಕ ಶಿಕ್ಷಣದ ಶೈಕ್ಷಣಿಕ ಉಪಕ್ರಮಗಳನ್ನು ಅತ್ಯಂತ ಸಮರ್ಥವಾಗಿ ಅಳವಡಿಸಿಕೊಂಡಿದೆ. ಸಂಶೋಧನೆ ಹಾಗೂ ಉಪನ್ಯಾಸಗಳಿಗೆ ಒತ್ತುನೀಡಿ ವಿದ್ಯಾರ್ಥಿಗಳ ಬೌದ್ಧಿಕ ಏಳಿಗೆಗಾಗಿ ಶ್ರಮಿಸುತ್ತಿರುವ ವಿಶ್ವವಿದ್ಯಾಲಯದ ಕಾರ್ಯಸಾಧನೆಯು ಅತ್ಯಂತ ಶ್ಲಾಘನೀಯವಾಗಿದೆ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತ್ತಕೋತ್ತರ ಕೋರ್ಸನ್ನು ಆರಂಭಿಸಲಾಗಿದೆ.
ವಿಶ್ವವಿದ್ಯಾಲಯವು ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸಗಳಿಗೆ ಆತ್ಯಾಧುನಿಕ ಪಠ್ಯಕ್ರಮವನ್ನು ಅಭಿವೃದ್ಧಿ ಪಡಿಸಿದೆ. ಸ್ಕೂಲ್ ಕಾನ್‌ಸೆಪ್ಟ್ ಗಳನ್ನು ಅಳವಡಿಕೊಂಡ ಕರ್ನಾಟಕ ರಾಜ್ಯದ ಮೊದಲ ವಿಶ್ವವಿದ್ಯಾಲಯವಾಗಿದೆ. ೦೯ ಸ್ಕೂಲ್‌ಗಳ ಅಡಿಯಲ್ಲಿ ೧೯ ವಿವಿಧ ವಿಭಾಗಗಳು ಶಿಕ್ಷಣಮುಖಿಯಾಗಿ ಪ್ರವಹಿಸುತ್ತಿದೆ. ಅಧ್ಯಯನಾಂಗವು ಪ್ರಸ್ತುತ ವರ್ಷದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಉನ್ನತ್ತೀಕರಣಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಆದರ್ಶ ಮತ್ತು ಅನುಕರಣೆಯ ಸಾಧಕರಿಂದ ವಿಶೇಷ ಉಪನ್ಯಾಸಗಳನ್ನು, ಸಂಸ್ಥಾಪನಾ ಉಪನ್ಯಾಸ ಮಾಲಿಕೆಗಳನ್ನು ಹಾಗೂ ಪಠ್ಯದೊಂದಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಅಂತರಶಿಸ್ತಿಯ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ, ಬೋಧಕ ಸಿಬ್ಬಂದಿಗಳಿಗೆ ಅಂತರಾಷ್ಟ್ರೀಯ ವಿಚಾರಸಂಕಿರಣಗಳಲ್ಲಿ ಪಾಲ್ಗೋಳ್ಳಲು ವಿದೇಶ ಪ್ರಯಾಣಕ್ಕೆ ಪ್ರೊತ್ಸಾಹ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಗಣಕಶಾಸ್ತ್ರ, ಎಂ.ಬಿ.ಎ ಹಾಗೂ ಕ್ರಿಮಿನಾಲಜಿ ವಿಭಾಗಗಳಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಒಪ್ಪಂದಗಳು ಹಾಗೂ ಒಡಂಬಡಿಕೆಗಳಿಗೆ ಉತ್ತೇಜನ, ೧೯ ವಿಭಾಗಗಳಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಾರ್ಯಗಾರಗಳ ಆಯೋಜನೆ, ಅಯ್.ಸಿ.ಎಸ್.ಎಸ್.ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರಕಾರದ ಉನ್ನತ ಶಿಕ್ಷಣ ಇಲಾಖೆಗಳ ಪ್ರಾಯೋಜಕತ್ವದಲ್ಲಿ ವಿವಿಧ ವಿಭಾಗಗಳಿಂದ ದೊರೆತ ಯು.ಜಿ.ಸಿ ಪ್ರಾಯೋಜಿತ ಸಂಶೋಧನಾ ಯೋಜನೆಗಳ ಅಧ್ಯಯನಗಳು ಪ್ರಗತಿಯಲ್ಲಿವೆ. ರಸಾಯನಶಾಸ್ತ್ರ ವಿಭಾಗ ೦೩ ಪೇಟೆಂಟಗಳನ್ನು ಯಶಸ್ವಿಯಾಗಿ ಪೊರೈಸಿದೆ. ಹಾಗೂ ೦೪ ಪೇಟೆಂಟಗಳಿಗೆ ಅರ್ಜಿ ಸಲ್ಲಿಸಿದೆ. ಕನ್ನಡ ವಿಭಾಗಕ್ಕೆ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನಾ ಸಹಾಯ ಅನುದಾನ ದೊರೆತಿವೆ.
ವಿ.ಜಿ.ಎಸ್.ಟಿ ಪ್ರಾಯೋಕತ್ವದಲ್ಲಿ ಗಣಕಯಂತ್ರ ಲ್ಯಾಬ್, ಭೌತಶಾಸ್ತ್ರ ಮತ್ತು ರಾಸಾಯನ ಶಾಸ್ತ್ರ ಹಾಗೂ ಗಣಕ ವಿಜ್ಞಾನ ವಿಭಾಗಗಳ ಪ್ರಯೋಗಾಲಯಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಡಿ.ಬಿ.ಟಿ, ಡಿ.ಎಸ್.ಟಿ, ಅಯ್.ಸಿ.ಎಸ್.ಎಸ್.ಆರ್, ಡಿ.ಎ.ಇ, ಕೆ.ಟಿ.ಆಯ್.ಎಸ್.ಟಿ ಅನುದಾನಗಳಿಂದ ವಿವಿಧ ಸಂಶೋಧನಾ ಯೋಜನೆಗಳು ಪ್ರಗತಿಯಲ್ಲಿವೆ.
ಗಣಕಯಂತ್ರ, ಸಮಾಜಕಾರ್ಯ, ಇಂಗ್ಲೀಷ, ಸಮಾಜಶಾಸ್ತ್ರ, ಎಂ.ಬಿ.ಎ, ಇತಿಹಾಸ, ಭೌತಶಾಸ್ತ್ರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲಗಳ ಸಂಪಾದಕರಾಗಿ, ಸಹಸಂಪಾದಕರಾಗಿ, ಸಂಪಾದನಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೋಧಕ ಸಿಬ್ಬಂದಿಗಳು ಕ್ರೀಯಾಶೀಲರಾಗಿದ್ದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕಾಗಳಿಗೆ ಭಾಜನರಾಗಿದ್ದಾರೆ. ಅನೇಕ ಬೋಧಕ ಸಿಬ್ಬಂದಿಗಳು, ಸಾಮಾಜಿಕ ಸೇವೆಗಳಲ್ಲಿಯೂ ತೊಡಗಿದ್ದಾರೆ. ಕನ್ನಡ, ರಸಾಯನಶಾಸ್ತ್ರ, ಸಮಾಜಕಾರ್ಯ ವಿಭಾಗಗಳ ಬೋಧಕ ಸಿಬ್ಬಂದಿಗಳು ಸ್ಥಳೀಯ ಹಿಂದುಳಿದ ಗ್ರಾಮಗಳಾದ ಬಂಬರಗಾ, ಗುಗ್ರಾನಟ್ಟಿ ಮತ್ತು ಭೂತರಾಮನಹಟ್ಟಿ ಗ್ರಾಮಗಳನ್ನು ಶೈಕ್ಷಣಿಕ ದತ್ತು ಗ್ರಾಮಗಳನ್ನಾಗಿ ಸ್ವೀಕರಿಸಿವೆ.
ಗ್ರಂಥಾಲಯವು ರೂ.೧,೦೧,೫೨,೪೪೧ ಮೊತ್ತದ ೫೨,೭೭೪ ಪುಸ್ತಕಗಳನ್ನು ಹೊಂದಿದೆ. ಗ್ರಂಥಾಲಯವನ್ನು ಉನ್ನತ ದರ್ಜೆಗೆ ಏರಿಸಲಾಗಿದೆ. ಸಮಾಜಕಾರ್ಯ ಹಾಗೂ ಎನ್.ಎಸ್.ಎಸ್ ವಿಭಾಗಗಳು ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ವಿಶೇಷ ಶೀಬಿರಗಳನ್ನು ಏರ್ಪಡಿಸುವುದರ ಮೂಲಕ ಆರೋಗ್ಯ, ಕೃಷಿ ಹಾಗೂ ಶೈಕ್ಷಣಿಕ ಪ್ರಗತಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ೦೩ ಜಿಲ್ಲೆಗಳ ವಿಶೇಷ ಸಾಧಕರಿಗೆ ಸನ್ಮಾನ, ರಾಷ್ಟ್ರೀಯ ನಾಯಕರ ಗಣ್ಯರ, ದಾರ್ಶನಿಕರ, ಜಯಂತಿ ಮತ್ತು ಪುಣ್ಯ ಸ್ಮರಣೋತ್ಸವ ಆಚರಿಸಲಾಗಿದೆ.
ಪರೀಕ್ಷಾಂಗ – ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಅತ್ಯಂತ ಕ್ರಿಯಾಶೀವಾಗಿ ಉನ್ನತ ಶಿಕ್ಷಣದ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಪರೀಕ್ಷಾಂಗವು ಹೊಸ ಮಾದರಿಗಳ ಕ್ರಿಯಾಯೋಜನೆಗಳಿಂದ ಅಧ್ಯಯನಾಂಗಕ್ಕೆ ಪೂರಕವಾಗಿ ಶೈಕ್ಷಣಿಕ ಉನ್ನತ್ತಿಕರಣಕ್ಕೆ ಮಾದರಿಯಾಗಿದೆ. ಪರೀಕ್ಷಾಂಗ ವಿಭಾಗದಲ್ಲಿ ಆತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಪಡಿಸಲಾದ ಸಾಪ್ಟವೇರ್ ಮತ್ತು ಹಾರ್ಡವೇರ್‌ಗಳನ್ನೊಳಗೊಂಡ ವ್ಯವಸ್ಥಿತ ಕಂಪ್ಯೂಟರ್ ಲ್ಯಾಬ್‌ನ್ನು ಹೊಂದಿದೆ. ಶೀಘ್ರ ಫಲಿತಾಂಶ ಪ್ರಕಟಣೆ ಹಾಗೂ ಹಾಲ್ ಮಾರ್ಕ ಇರುವ ಅಂಕಪಟ್ಟಿಗಳನ್ನು ವಿತರಿಸುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಿದೆ.
ಪ್ರಸಾರಾಂಗ – ಸಾಹಿತ್ಯ ನಿಂತ ನೀರಲ್ಲ. ಅದು ಅವ್ಯಾಹತವಾಗಿ ಹರಿಯುತ್ತಿರುವ ಜೀವಂತ ಪ್ರವಾಹ ಹೀಗಾಗಿ ಬದಲಾಗುತ್ತಿರುವ ಹೊಸ ಸಂವೇದನೆಗಳನ್ನು ಅಧ್ಯಯನಿಸುವ ತುರ್ತು ಅಗತ್ಯ ನಮ್ಮ ವಿದ್ಯಾರ್ಥಿಗಳ ಮುಂದಿದೆ. ಸಾಹಿತ್ಯದ ಚಿಂತನ ಕ್ರಮ ರೂಪಿಸುವಲ್ಲಿ ವಿದ್ಯಾರ್ಥಿಗಳನ್ನು ಹಲವು ಕುತೂಹಲಗಳ ಮೂಲಕ ಸಮಸ್ಯೆಗಳೆಡೆಗೆ ಪ್ರವಹಿಸುವ ಚಿಂತನ ಶೀಲತೆ ಇಂದು ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ಪೂರಕವಾಗಿ ಸಂಕಲ್ಪಬದ್ಧವಾದ ದೃಢವಾದ ಬದಲಾವಣೆಗಳನ್ನು ಅಳವಡಿಸಿಕೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರಸಾರಾಂಗವು ದಿಟ್ಟ ಹೊಸ ಹೆಜ್ಜೆಗಳನ್ನಿಟ್ಟಿದೆ. ವಿದ್ಯಾರ್ಥಿಗಳ ಸಕ್ರಿಯ ಹಾಗೂ ಗಟ್ಟಿಯಾದ ಚಿಂತನ ಕ್ರಮವನ್ನು ರೂಪಿಸುವ ಹಿನ್ನೆಲೆಯಲ್ಲಿ ಕೆಲವು ಮಾರ್ಪಾಟುಗಳನ್ನೊಳಗೊಂಡ ಮಾದರಿ ಪಠ್ಯಪುಸ್ತಕಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳ ಚಿಂತನಾಕ್ರಮ ಮತ್ತು ಆಲೋಚನಾಕ್ರಮಗಳಿಗೆ ಹೊಸ ನೆಲೆಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಈಚಿನ ೫೦ ವರ್ಷಗಳ ಪಠ್ಯ ಕೇಂದ್ರಿತ ನೆಲೆಯ ಚಿಂತನೆಗಳು. ಹೊಸ ಕಾಲದ ಅವಶ್ಯಕತೆಗಳನ್ನು ಅಳವಡಿಸಿಕೊಂಡು ಈ ಕಾಲದ ಬಹುತ್ವ ಮಾದರಿಗೆ ಅನುಗುಣವಾಗಿ, ವರ್ತಮಾನದ ಅನೇಕ ಆಸಕ್ತಿಗಳನ್ನು ಸಮಸ್ಯೆಗಳನ್ನು ಸಾಹಿತ್ಯವು ಕೂಡಾ, ತೆರೆದ ಕಣ್ಣುಗಳಿಂದ ಕಾಣುತ್ತಿದೆ. ಎಂಬ ಚಿಂತನಶೀಲತೆಯನ್ನು ಪ್ರಕಟಣೆ, ಅಧ್ಯಯನ, ಅಧ್ಯಾಪನಗಳೊಂದಿಗೆ ಹೊರಹಾಕುವುದೇ ಪ್ರಸಾರಾಂಗದ ಮುಖ್ಯ ಉದ್ದೇಶವಾಗಿದೆ.
ಪ್ರಸಾರಾಂಗವು ಈವರೆಗೂ ೪೬ ಕನ್ನಡ ಪದವಿ ಪಠ್ಯಪುಸ್ತಕಗಳನ್ನು. ೦೭ ವಾರ್ಷಿಕ ವರದಿಗಳನ್ನು, ೦೩ ಇತರೆ ಪುಸ್ತಕಗಳನ್ನು ಪ್ರಕಟಿಸಿದೆ. ’ವಿವಾಹ ಪೂರ್ವ ಕಾನೂನು ತಿಳಿವಳಿಕೆ’ ಎಂಬ ರಾಜ್ಯ ಮಟ್ಟದ ಕಾರ್ಯಗಾರ ಏರ್ಪಡಿಸುವ ಮೂಲಕ ಸಮಾಜಮುಖಿ ಚಿಂತನೆಯತ್ತ ಮುಖ ಮಾಡಿದೆ. ಈ ವಾರ್ತಾಪತ್ರಿಕೆಯನ್ನು ಹೊರತರುವ ಮೂಲಕ ವಿಶ್ವವಿದ್ಯಾಲಯದ ಶೈಕ್ಷಣಿಕ ಮಾಹಿತಿಯನ್ನು ಪ್ರಚಾರ ಮಾಡುವ ಹಾಗೂ ದಾಖಲೀಕರಣದಂತಹ ಭಿನ್ನಮಾದರಿಯ ಕಾರ್ಯಗಳಿಂದ ಅಭಿನಂದನೆಗೆ ಅರ್ಹವಾಗಿದೆ. ಈ ನಿಟ್ಟಿನಲ್ಲಿ ತನ್ನ ಕಾರ್ಯಕ್ಷಮತೆಯ ಕ್ಷಿತಿಜವನ್ನು ಇಮ್ಮಡಿಗೊಳಿಸಿದ ಪ್ರಸಾರಾಂಗವು, ೧೧ ವಿಸ್ತರಣಾ ಮತ್ತು ಪ್ರಚಾರೋಪನ್ಯಾಸ ಮಾಲಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ಏರ್ಪಡಿದೆ. ಅದರಂತೆ ವಿಶ್ವವಿದ್ಯಾಲಯದ ಅವಶ್ಯಕ ಮಾಹಿತಿಗಳನ್ನು ಒಂದೆಡೆ ದಾಖಲಿಸುವ ಹಾಗೂ ಪ್ರಮುಖ ವಿಷಯಗಳನ್ನು, ಆಯೋಜಿತ ಕಾರ್ಯಕ್ರಮಗಳ ಮಾಹಿತಿಯನ್ನು ಪ್ರಚಾರ ಪಡಿಸುವ ನಿಟ್ಟಿನಲ್ಲಿ ’ಇ’ ಪತ್ರಿಕೆಯನ್ನು ಹೊರ ತರುವ ಮುಖಾಂತರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಮ್ಮೆಯ ಮುಖವಾಣಿಯಾಗುತ್ತಿರುವುದು ಅತೀವ ಸಂತೋಷದ ಸಂಗತಿ.
ಫ.ಗು. ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ವಚನ ಸಂಗಮ ತೊರವಿ, ವಿಜಯಪುರ
ವಿಜಯಪುರ ಸರಹದ್ದಿನ ತೊರವಿ ಗ್ರಾಮದಲ್ಲಿರುವ ಫ.ಗು. ಹಳಕಟ್ಟಿ ವಚನ ಸಂಗಮ ಸ್ನಾತಕೋತ್ತರ ಕೇಂದ್ರವು ಅತ್ಯಂತ ಕ್ರಿಯಾಶೀಲವಾಗಿ ಆ ಭಾಗದ ಜನತೆಯ ಉನ್ನತ ಶಿಕ್ಷಣದ ಆಶೋತ್ತರಗಳಿಗೆ ಕಾಯಕಲ್ಪ ನೀಡುವ ಶೈಕ್ಷಣಿಕ ಕೇಂದ್ರವಾಗಿದೆ. ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸ್ನಾತಕೋತ್ತರ ಕೋರ್ಸುಗಳನ್ನು ತೆರೆಯುವ ಉದ್ದೇಶವನ್ನು ಹೊಂದಲಾಗಿದೆ. ಪ್ರಸ್ತುತ ೬ ಸ್ನಾತಕೋತ್ತರ ಕೋರ್ಸುಗಳು ಹಾಗೂ ಒಂದು ಸ್ನಾತಕೋತ್ತರ ಡಿಪ್ಲೋಮಾ ಕೋರ್ಸುಗಳು ನಡೆಯುತ್ತಿವೆ. ಸುಮಾರು ೪೪೯ ವಿದ್ಯಾರ್ಥಿಗಳು ಅಲ್ಲಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ೨೮ ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ ಅಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿದೆ. ವಿಜಯಪುರದ ವಚನಸಂಗಮ ಸ್ನಾತಕೋತ್ತರ ಕೇಂದ್ರಕ್ಕೆ ಹೆಚ್ಚುವರಿಯಾಗಿ ನೂರು ಎಕರೆ ಜಮೀನಿಗೆ ಬೇಡಿಕೆ ಸಲ್ಲಿಕೆಯಾಗಿದೆ. ರೂ.೧.೬೨ ಕೋಟಿ ಹಣಕಾಸಿನ ನೇರವಿನಿಂದ ಪ.ಜಾ./ಪ.ಪಂ. ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ವಿದ್ಯಾರ್ಥಿ ನಿಲಯದ ಕಾರ್ಯ ಪ್ರಗತಿಯಲ್ಲಿದೆ.
ಎಸ್.ಆರ್. ಕಂಠಿ ಸ್ನಾತಕೋತ್ತರ ಕೇಂದ್ರ, ಅನುಭಾವ ಸಂಗಮ, ಬಾಗಲಕೋಟೆ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದ ನಂತರ ಬಾಗಲಕೋಟೆಯಲ್ಲಿ ಎಸ್.ಆರ್. ಕಂಠಿ ಹೆಸರಿನಲ್ಲಿ ಸ್ನಾತಕೋತ್ತರ ಕೇಂದ್ರವನ್ನು ತೆರೆಯಿತು. ಪ್ರಸ್ತುತ ಬಾಗಲಕೋಟೆಯ ಬಸವೇಶ್ವರ ವಿದ್ಯಾವಧಕ ಸಂಘದ ಸಂಸ್ಥೆಯ ಕಾಲೇಜಿನ ಕಟ್ಟಡದಲ್ಲಿ ಸ್ನಾತಕೋತ್ತರ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ೨ ಸ್ನಾತಕೋತ್ತರ ಕೋರ್ಸುಗಳನ್ನು ಅಲ್ಲಿ ನಡೆಸಲಾಗುತ್ತಿದೆ. ಬರುವ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಕೋರ್ಸುಗಳನ್ನು ತೆರೆಯುವ ಉದ್ದೇಶವನ್ನು ಹೊಂದಲಾಗಿದೆ. ಸುಮಾರು ೧೫೯ ವಿದ್ಯಾರ್ಥಿಗಳು ಅಲ್ಲಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಇಬ್ಬರು ಅಧ್ಯಾಪಕರು ಹಾಗೂ ಭೋಧಕ ಸಿಬ್ಬಂದಿಯು ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಗಲಕೋಟೆಯಲ್ಲಿ ತೆರೆದಿರುವ ಸ್ನಾತಕೋತ್ತರ ಕೇಂದ್ರಕ್ಕೆ ನೂರು ಎಕರೆ ಜಮೀನಿಗೆ ಮತ್ತು ಮುಧೋಳದಲ್ಲಿ ಸ್ನಾತಕೋತ್ತರ ಕೇಂದ್ರ ಅಭಿವೃದ್ಧಿ ಪಡಿಸಲು ನೂರು ಎಕರೆ ಜಮೀನಿಗೆ ಬೇಡಿಕೆ ಸಲ್ಲಿಕೆಯಾಗಿದೆ.
ಸ್ನಾತಕೋತ್ತರ ಕೇಂದ್ರ, ಜಮಖಂಡಿ
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಜಮಖಂಡಿಯಲ್ಲಿ ಹೊಸದಾಗಿ ೨೦೧೭-೧೮ನೇ ಸಾಲಿನಿಂದ ಸ್ನಾತಕೋತ್ತರ ಕೇಂದ್ರವನ್ನು ತೆರೆಯಿತು. ಪ್ರಸ್ತುತ ಸ್ನಾತಕೋತ್ತರ ಕೇಂದ್ರದಲ್ಲಿ ೨ ಸ್ನಾತಕೋತ್ತರ ಕೋರ್ಸುಗಳನ್ನು ಅಲ್ಲಿ ನಡೆಸಲಾಗುತ್ತಿದೆ. ಬರುವ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಕೋರ್ಸುಗಳನ್ನು ತೆರೆಯುವ ಉದ್ದೇಶವನ್ನು ಹೊಂದಲಾಗಿದೆ. ಸುಮಾರು ೧೦೫ ವಿದ್ಯಾರ್ಥಿಗಳು ಅಲ್ಲಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಒಬ್ಬ ಅಧ್ಯಾಪಕರು ಹಾಗೂ ಭೋಧಕ ಸಿಬ್ಬಂದಿಯು ಬೋಧನೆ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯ, ಬೆಳಗಾವಿ

ಬೆಳಗಾವಿ ನಗರದಲ್ಲಿ ಈ ಮೊದಲು ಇದ್ದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನಾಗಿ ಸರ್ಕಾರವು ಘೋಷಿಸಿ ಆದೇಶ ನೀಡಿತು. ವಿಶ್ವವಿದ್ಯಾಲಯದ ಅಧಿಕೃತ ಘಟಕ ಮಹಾವಿದ್ಯಾಲಯವಾಗಿ ಅದು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಕಾಲೇಜು ಕಟ್ಟಡಕ್ಕೆ ನಿವೇಶನ ಮೊದಲ ಹಂತದ ಕಟ್ಟಡದ ಕಾಮಗಾರಿಯು ಮುಕ್ತಾಯವಾಗಿದೆ. ಸುಮಾರು ೧೫೨೬ ಸ್ನಾತಕ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಹಾಗೂ ೨ ಸ್ನಾತಕೋತ್ತರ ಕೋರ್ಸುಗಳು ನಡೆಯುತ್ತಿವೆ. ೯೫ ಸ್ನಾತಕೋತ್ತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ರೂ.೪.೫೮ ಕೋಟಿ ಅನುದಾನದಿಂದ ಮೊದಲನೆಯ ಹಾಗೂ ಎರಡನೆಯ ಮಹಡಿಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ರೂ.೯.೮೦ ಕೋಟಿಯಲ್ಲಿ ೩ ಅಂತಸ್ತಿನ ಕಟ್ಟಡದ ಕಾಮಗಾರಿ ಯೋಜನೆ ರೂಪಿಸಲಾಗಿದೆ. ಮಹಾವಿದ್ಯಾಲಯವು ಯು.ಜಿ.ಸಿಯಿಂದ ೨(ಜಿ) ೧೨(ಃ) ಮನ್ನಣೆಯನ್ನು ೨೦೧೮ರಲ್ಲಿ ಪಡೆದುಕೊಂಡಿದೆ.
ಬೆಳಗಾವಿ ನಗರದ ಅಭಿವೃದ್ದಿ ಪ್ರಾಧಿಕಾರದಿಂದ ೨ ಎಕರೆ ಜಮೀನನ್ನು ಶೇಕಡಾ ೭೫% ರೀಯಾಯಿತಿನಲ್ಲಿ ಪಡೆಯಲಾಗಿದ್ದು, ಪರೀಕ್ಷಾ ಕೇಂದ್ರ ಹಾಗೂ ವಿದ್ಯಾರ್ಥಿನಿಯರ ವಸತಿನಿಲಯವನ್ನು ರೂ. ೯.೫೮ ಕೋಟಿಗಳ ಅನುದಾನ ದಿಂದ ಪ್ರಾರಂಭಿಸುವ ಯೋಜನೆ ಪ್ರಗತಿಯಲ್ಲಿದೆ.
ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸೇರಿದ ನಾಲ್ಕು ಆವರಣಗಳು ತುರ್ತಾಗಿ ಅಭಿವೃದ್ಧಿಯಾಗಬೇಕಾಗಿದೆ. ವಿಶ್ವದರ್ಜೆಯ ಗುಣಮಟ್ಟದ ಉನ್ನತ ಶಿಕ್ಷಣವನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸುವ ಉದಾತ್ತ ಉದ್ದೇಶವನ್ನು ವಿಶ್ವವಿದ್ಯಾಲಯವು ಹೊಂದಿದೆ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಕರ್ನಾಟಕದ ಗಡಿ ಜಿಲ್ಲೆಗಳಾಗಿದ್ದು. ಅವುಗಳ ಸರ್ವತೋಮುಖ ಪ್ರಗತಿಗೆ ದಿಟ್ಟ ಹೆಜ್ಜೆಯನ್ನು ಇಡುತ್ತಿದೆ.
ಹಿರಿಯ ಆರ್ಥಿಕತಜ್ಞ ಪ್ರೊ. ಶಿವಾನಂದ. ಬಿ. ಹೊಸಮನಿ ಕುಲಪತಿಗಳಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.   ಕುಲಪತಿಗಳ ಸೂಕ್ತ ಮಾರ್ಗದರ್ಶದಲ್ಲಿ ವಿ.ವಿ.ಯ ಆಡಳಿತಾಂಗವು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಬೋಧಕ ಸಿಬ್ಬಂದಿಗಳು ಬೋಧನೆ, ಸಂಶೋಧನೆ, ಆಡಳಿತಾತ್ಮಕ ಕಾರ‍್ಯಗಳಲ್ಲಿ ತೊಡಗಿಕೊಂಡಿದ್ದು, ಅಧ್ಯಯನ ಅಧ್ಯಾಪನಗಳು ನಿರಂತರವಾಗಿ ನಡೆಯುತ್ತಿವೆ. ಉನ್ನತ ಶಿಕ್ಷಣದ ಆಶೋತ್ತರಗಳಿಗೆ ಸ್ಪಂದಿಸುತ್ತಿರುವ ವಿಶ್ವವಿದ್ಯಾಲಯ ಶೈಕ್ಷಣಿಕವಾಗಿ ಆಡಳಿತಾತ್ಮಕವಾಗಿ ಹೆಚ್ಚುಗಾರಿಕೆಯನ್ನು ಹೊಂದುತ್ತಿರುವುದು ಸಂತೋಷ.
ವಿಶ್ವವಿದ್ಯಾಲಯದ ಆರು ಘಟಿಕೋತ್ಸವಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಪ್ರೊ.ಸಿದ್ದು ಪಿ. ಆಲಗೂರ ಅವರು ಕುಲಸಚಿವರಾಗಿ, ಪ್ರೊ. ರಂಗರಾಜ ವನದುರ್ಗ ಅವರು ಮೌಲ್ಯಮಾಪನ ಕುಲಸಚಿವರಾಗಿ,  ಶಂಕರಾನಂದ ಬನಶಂಕರಿ ಅವರು ಹಣಕಾಸು ಅಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರ ಸೂಕ್ತ ಮಾರ್ಗದರ್ಶನದಲ್ಲಿ ವಿದ್ಯಾಮಂಡಳ ಹಾಗೂ ಆಡಳಿತ ವಿಭಾಗಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.
ಒಟ್ಟಾರೆಯಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪ್ರತಿ ಶೈಕ್ಷಣಿಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮುಖಾಂತರ ಗಡಿ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗೆ ಸ್ಪಂದಿಸುತ್ತಿದೆ. ಜಾಗತಿಕವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬದಲಾಗುತ್ತಿರುವ ಪ್ರವೃತ್ತಿ ಹಾಗೂ ಆಸಕ್ತಿಗಳನ್ನು ಗುರುತಿಸಿ ಹಾಗೂ ಸ್ಪರ್ಧಾತ್ಮಕ ಯುಗಕ್ಕೆ ತಕ್ಕ ಶೈಕ್ಷಣಿಕ ಹೊಸ ಆಯಾಮಗಳನ್ನು ತೀವ್ರಗತಿಯಲ್ಲಿ ಅನುಷ್ಠಾನಕ್ಕೆ ತರುವುದರೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಮೂಡಿಸಿದೆ.

-ಪ್ರೊ. ಸಿದ್ದು ಪಿ. ಆಲಗೂರ
ಕುಲಸಚಿವರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button