Latest

ಜನಸಂಖ್ಯೆಗನುಗುಣವಾಗಿ ವೈದ್ಯರ ಲಭ್ಯತೆ ಇಲ್ಲದೆ ಸಮಸ್ಯೆ ; ಡಾ. ಅಭಿಜಾತ ಶೇಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಗ್ರಾಮೀಣ ಹಾಗೂ ಕೃಷಿ ಆಧಾರಿತ ಭಾರತ ದೇಶದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಜನರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಸಿಗುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಲಭಿಸದೆ ಜನತೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ನವದೆಹಲಿಯ ನ್ಯಾಶನಲ್ ಬೋರ್ಡ ಆಫ್ ಎಕ್ಸಾಮಿನೇಶನ್‌ನ ಡಾ. ಅಭಿಜಾತ ಶೇಟ್ ಹೇಳಿದರು.
ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಜವಾಹರಲಾಲ ನೆಹರು ವೈದ್ಯಕೀಯ iಹಾವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಜೆಎನ್‌ಎಂಸಿ ಸೈಂಟಿಫಿಕ್ ಸೊಸೈಟಿಯ ೩೭ನೇ ವಾರ್ಷಿಕ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್‍ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಸಾವಿರ ಜನಕ್ಕೆ ಓರ್ವ ವೈದ್ಯರು ಅವಶ್ಯ. ಆದರೆ ನಮ್ಮಲ್ಲಿ ೨ ಸಾವಿರ ಜನಕ್ಕೆ ಒಬ್ಬರು ವೈದ್ಯರು ಮಾತ್ರ ಇದ್ದಾರೆ. ಆದ್ದರಿಂದ ವೈದ್ಯಕೀಯ ಮಹಾವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಗ್ರಾಮೀಣ ಸೇವೆಗೆ ವೈದ್ಯರು ಅಣಿಯಾಗುವಂತೆ ಕಾರ್‍ಯರೂಪಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ಅತ್ಯಂತ ಸಂದಿಗ್ಧ ಪರಿಸ್ಥಿಯಲ್ಲಿ ಚಿಕಿತ್ಸೆ ನೀಡುವ ತಜ್ಞ ವೈದ್ಯರು ಲಭಿಸುತ್ತಿಲ್ಲ. ಪ್ರತಿ ವರ್ಷ ೬೦ ಸಾವಿರ ಪದವಿ, ೩೦ ಸಾವಿರ ಸ್ನಾತಕೋತ್ತರ ಪದವಿ ಪಡೆದ ವೈದ್ಯರು ಹೊರಬೀಳುತ್ತಿದ್ದಾರೆ. ಆದರೂ ಕೂಡ ವೈದ್ಯರು ಸೇವೆಗೆ ಲಭಿಸುತ್ತಿಲ್ಲ. ದೇಶದಲ್ಲಿ ಸುಮಾರು ೧೦ ಲಕ್ಷಕ್ಕೂ ಅಧಿಕ ವೈದ್ಯರಿದ್ದರೂ ಕೂಡ ಅವರಲ್ಲಿ ಕೇವಲ ೮.೧೮ (ಅಲೋಪತಿ) ಲಕ್ಷ ವೈದ್ಯರು ಮಾತ್ರ ಸೇವೆಗೆ ಲಭ್ಯವಿದ್ದಾರೆ. ೨೦೨೫ಕ್ಕೆ ೧.೫ ಲಕ್ಷ ವೈದ್ಯರನ್ನು ಪ್ರತಿ ವರ್ಷ ಸೇವೆಗೆ ಅಣಿಗೊಳಿಸಲು ಯೋಜನೆ ರೂಪಿಸಲಾಗಿದೆ. ಕಳೆದ ೪೦ ವರ್ಷಗಳಿಂದ ವೈದ್ಯಕೀಯ ಶಿಕ್ಷಣ ಬದಲಾವಣೆ ಕಂಡಿಲ್ಲ. ಅದನ್ನು ಬದಲಾಯಿಸಿ ಪ್ರಸಕ್ತ ವ್ಯವಸ್ಥೆಗೆ ತಕ್ಕಂತೆ ರೂಪಿಸಬೇಕಾಗಿದೆ. ಆದರೆ ಅದು ಕಾರ್‍ಯಗತಗೊಳ್ಳುವುದು ಕಠಿಣ ಎಂದ ಅವರು ಮಿಲಿಟರಿ ವೈದ್ಯರಿಂದ ತರಬೇತಿ ನೀಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ. ಕೆ.ಎಸ್. ಗೋಪಿನಾಥ ಉಪನ್ಯಾಸ ನೀಡಿದರು. ಶಸ್ತ್ರಚಿಕಿತ್ಸಾ ವಿಧಾನದಲ್ಲಿ ರೊಬೊಟಿಕ್ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಜೆಎನ್ ವೈದ್ಯಕೀಯ ಮಾಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್.ಎಸ್. ಮಹಾಂತಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್‍ಯಾಧ್ಯಕ್ಷ ಡಾ. ಆರ್.ಬಿ. ನೇರಲಿ, ಡಾ. ವಿ.ಎ. ಕೋಟಿವಾಲೆ, ಡಾ. ರೇಷ್ಮಾ ಕರಿಶೆಟ್ಟಿ, ಡಾ. ಶಮಾ ಬೆಲ್ಲದ, ಡಾ. ಆರ್.ಎಸ್. ಮುಧೋಳ, ಡಾ. ಕುಮಾರ ವಿಂಚುರಕರ, ಡಾ. ಶಿವಗೌಡಾ ಪಾಟೀಲ, ಡಾ. ಎ.ಪಿ. ಹೊಗಾಡೆ, ಡಾ. ಎನ್.ಆರ್. ಮುನವಳ್ಳಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button