Latest

ದಾನಿ ದುಂಡಪ್ಪ ಕರಿಶೆಟ್ಟಿ ನಿಧನ

 

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನಿವೃತ್ತ ಮುಖ್ಯೋಪಾಧ್ಯಾಯ, ಶಿಕ್ಷಣ ಪ್ರೇಮಿ ಹಾಗೂ ಕೆಎಲ್‌ಇ ಸಂಸ್ಥೆಯ ದಾನಿಗಳಾಗಿದ್ದ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ದುಂಡಪ್ಪ ಚೆನ್ನಮಲ್ಲಪ್ಪ ಕರಿಶೆಟ್ಟಿ ಉರ್ಫ ಖಾನಪೇಠ (೮೨) ಇವರು ಬುಧವಾರ ಜನೆವರಿ, ರಂದು ಮಧ್ಯಾಹ್ನ ೧೨.೩೦ಕ್ಕೆ ಬೆಳಗಾವಿ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅನಾರೋಗ್ಯ ಕಾರಣದಿಂದ ನಿಧನರಾದರು.

ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಅಭಿಮಾನಿಗಳಾಗಿದ್ದ ಅವರು ರಾಮದುರ್ಗ ತಾಲೂಕಿನ ಚಂದರಗಿ ಹೋಬಳಿ, ಬುದನೂರು ಗ್ರಾಮದ ೧೧  ಎಕರೆ  ೩೮ ಗುಂಟೆ ಜಮೀನನ್ನು ತಮ್ಮ ತಂದೆ ದಿ. ಚನ್ನಮಲ್ಲಪ್ಪ ದುಂಡಪ್ಪ ಕರಿಶೆಟ್ಟಿ ಇವರ ಸ್ಮರಣಾರ್ಥ ಹಾಗೂ ೨೧ ಲಕ್ಷ ರೂಪಾಯಿಗಳ ಮುದ್ದತಿ ಠೇವಣಿಯನ್ನು ತಮ್ಮ ತಾಯಿ ದಿ. ಗಂಗವ್ವಾ ಚನ್ನಮಲ್ಲಪ್ಪ ಕರಿಶೆಟ್ಟಿ ಇವರ ಸ್ಮರಣಾರ್ಥ ದಾನವಾಗಿ ಅರ್ಪಿಸಿದ್ದರು.

ಡಾ. ಪ್ರಭಾಕರ ಕೋರೆ ಸಂತಾಪ 

ದುಂಡಪ್ಪ ಕರಿಶೆಟ್ಟಿ ಅವರ ನಿಧನಕ್ಕೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೆಎಲ್‌ಇ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕೆಎಲ್‌ಇ ಪರಿವಾರವು ಕಂಬನಿ ಮಿಡಿಯುತ್ತಿದ್ದು, ದೇವರು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಡಾ. ಕೋರೆ ಪ್ರಾರ್ಥಿಸಿದ್ದಾರೆ.

ಗುರು-ಶಿಷ್ಯ ಪರಂಪರೆಗೆ ಹೊಸ ಭಾಷ್ಯ ಬರೆದ ಕರಿಶೆಟ್ಟಿ

ನಮ್ಮ ದೇಶ ಅನಾದಿ ಕಾಲದಿಂದಲೂ ಗುರು-ಪರಂಪರೆಯ ಸಾರಥ್ಯದಲ್ಲಿ ಏಳ್ಗೆಯಾದುದು. ಅರ್ಜುನ, ಏಕಲವ್ಯ, ರಾಮ, ಲಕ್ಷ್ಮಣ, ಶಿವಾಜಿ, ವಿವೇಕಾನಂದ, ಅಂಬೇಡ್ಕರ್, ಅಬ್ದುಲ್ ಕಲಾಂ ಇವರೆಲ್ಲರೂ ತಮ್ಮ ಸರ್ವ ಸಾಧನೆಯನ್ನು ಗುರು ಚರಣಕ್ಕರ್ಪಿಸಿದವರೆ. ಅಷ್ಟೇ ಅಲ್ಲ ಮೊನ್ನೆಯಷ್ಟೇ ನಮ್ಮನ್ನಗಲಿದ ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಬೆಳೆಸಿ ಬಿಟ್ಟು ಹೋದ ಶಿಷ್ಯ ಸಂಕುಲದ ವ್ಯಾಪ್ತಿ ಊಹಾತೀತ.

ಅದೇ ತೆರನಾದ ಮತ್ತೋರ್ವ ಗುರುದೇವ ಶ್ರೀಯುತ ದುಂಡಪ್ಪ ಚೆನ್ನಮಲ್ಲಪ್ಪ ಕರಿಶೆಟ್ಟಿ (ಕಾನಪೇಟ), ೧೯೩೯ರಲ್ಲಿ ಜನಿಸಿದ ಸಾಲಹಳ್ಳಿ ಗ್ರಾಮದವರಾದ ಇವರು ರಾಮಕೃಷ್ಣ ಪರಮಹಂಸರು ಹಾಗೂ ವಿವೇಕಾನಂದರ ಆರಾಧಕರಾಗಿ ಆಜನ್ಮಬ್ರಹ್ಮಚರ್ಯ ಪಾಲಿಸಿದವರು. ಗಾಂಧೀಜಿಯವರ ಸ್ವಾವಲಂಬನೆ, ಸತ್ಯ ಪರಿಪಾಲನೆ, ಸಹಿಷ್ಣುತೆಯ ಸರಳ ಜೀವನ ನಡೆಸುತ್ತ ಸರ್ವ ಧರ್ಮಗ್ರಂಥಗಳ ಅಭ್ಯಾಸ ಮಾಡಿದ ಸದಾ ಖಾದಿಧಾರಿಗಳು. ಹುಟ್ಟಿನಿಂದ ಬಸವ ಧರ್ಮದವರಾದ ಇವರು, ಬಸವಣ್ಣನ ಕಾಯಕಯೋಗ ಕರಲಿಂಗ ಪೂಜೆಗಳನ್ನು ಪರಿಪಾಲಿಸಿದ ಅನುಭಾವಿಗಳು. ೩೬ ವರ್ಷಗಳ ತಮ್ಮ ಪ್ರಾಥಮಿಕ ಶಾಲಾ ವೃತ್ತಿಯನ್ನು ಬೆಳಗಾವಿ ಜಿಯ ಹೊಸಕೋಟೆ, ಯರಗಟ್ಟಿ, ಸೊಪ್ಪಡ್ಲ ಗ್ರಾಮಗಳಲ್ಲಿ ಪೂರೈಸಿದರು.

ನೂರಾರು ಸಂಖ್ಯೆಯಲ್ಲಿ ಶಿಕ್ಷಕರು, ಎಂಜಿನಿಯರ್‌ರು, ವೈದ್ಯರು, ಕೃಷಿ ಪದವೀಧರರು, ಪಶು ವೈದ್ಯರು, ಉಪನ್ಯಾಸಕರು, ವಿಜ್ಞಾನಿಗಳು ಇವರ ಶಿಷ್ಯ ಸಮುದಾಯ.

ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ನುಡಿಯೊಳಗಾಗಿ ನಡೆವ ಜೀವನ ಶೈಲಿಯಿಂದ ತಮ್ಮ ಶಿಕ್ಷಕ ಸಹೋದ್ಯೋಗಿಗಳ ನೈತಿಕತೆ ದ್ವಿಗುಣಗೊಳಿಸಿದರು. ಕರ್ತವ್ಯ ಸಲ್ಲಿಸಿದ ಪ್ರತಿ ಹಳ್ಳಿಗಳ ಎರಡೆರಡು ತಲೆಮಾರಿನ ಯುವ ಜನಾಂಗದ ನೈತಿಕತೆ ಕಾಪಾಡಿದವರು. ಕುಗ್ರಾಮಗಳ ಬಡವರ ಮಕ್ಕಳನ್ನೋದಿಸಿ ಉದ್ಧರಿಸಿ ಅವರ ಮನೆಯ ಬೆಳಕಾದವರು. ಸದಾ ಮಕ್ಕಳ ಅಭ್ಯುದಯವನ್ನೇ ಬಯಸಿದ ಇವರ ಸೇವೆಗೆ ಮೆಚ್ಚಿ ಇಲಾಖೆ ಕೊಡಮಾಡಿದ ಬಿರುದು ಪ್ರಶಸ್ತಿಗಳನ್ನು ನಯವಾಗಿ ತಿರಸ್ಕರಿಸಿದ ಅಪರೂಪದ ಗುರುಗಳಿವರು. ಜನಮನ್ನಣೆಯ ಬಯಕೆ ಲವಲೇಶವಿಲ್ಲದ ಇವರು ಡಿವಿಜಿಯವರ ಕಾನನದ ಮಲ್ಲಿಗೆಯಂತೆ ಎಲೆ ಮರೆಯಲ್ಲಿದ್ದುಕೊಂಡು ವಿನಮ್ರತೆಯಿಂದ ಸುವಾಸನೆಯ ಬೀರಿದ ಅಪರೂಪದ ವ್ಯಕ್ತಿ.

ತಮ್ಮ ಜೀವಮಾನದ ಎಲ್ಲ ಗಳಿಕೆಯನ್ನುಳಿಸಿ ತಮ್ಮ ವಿದ್ಯಾರ್ಥಿಗಳ ಟ್ರಸ್ಟ್ ಮೂಲಕ ಬಡ ಪ್ರತಿಭಾವಂತ ಮಕ್ಕಳಿಗೆ ಶಿಷ್ಯ ವೇತನ ನೀಡಿದರು.

ಸಾಲಹಳ್ಳಿ ಗ್ರಾಮದ ಹೆಣ್ಣು ಮಕ್ಕಳು ಎಸ್ಸೆಸ್ಸೆಲ್ಸಿ ನಂತರ ಓದದೇ ಇರುವುದರ ಕಾರಣ ಕಂಡು ಬಾಗಲಕೋಟೆಯ ಬಸವೇಶ್ವರ ಸಂಸ್ಥೆಗೆ ಜಮೀನು ದಾನ ಮಾಡಿ ಮಹಿಳಾ ಕಾಲೇಜು ಪ್ರಾರಂಭ ಮಾಡಿಸಿದರು.

ಕೆಎಲ್‌ಇ ಸಂಸ್ಥೆಗೆ ಸುಮಾರು ೪೦ ಲಕ್ಷ ರೂ. ಹಾಗೂ ತಮ್ಮ ಜಮೀನು ದಾನ ಮಾಡಿ ವಿದ್ಯಾ ಸಂಸ್ಥೆ ಪ್ರಾರಂಭಿಸಲು ಕೋರಿಕೊಂಡರು. ಅಲ್ಲದೆ ತಮ್ಮ ಶರೀರವನ್ನು ಕೆಎಲ್‌ಇ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮರಣೋತ್ತರ ದಾನ ನೀಡಿದರು.

ಸ್ವಾರ್ಥರಹಿತ ದೇಶ ಸೇವೆಯೊಡನೆ ದೇಶ ಪರ್ಯಟನೆಯನ್ನೂ ಮಾಡಿದರು. ತಮ್ಮ ಮೃತ ದೇಹ ಸಹಿತ ದೇಶಕ್ಕಾಗಿ ದಾನ ಮಾಡಿದವರು.

ಇಂಥ ಅಪರೂಪದ ಗುರುಗಳು ಅಲ್ಪ ಕಾಲದ ಅನಾರೋಗ್ಯದಿಂದ ಕೆಎಲ್‌ಇ ಆಸ್ಪತ್ರೆಯಲ್ಲಿ ಗೌರವಯುತವಾಗಿ ಒದಗಿಸಿದ ಉಚಿತ ಉನ್ನತ ಚಿಕಿತ್ಸೆಗಳ ಹೊರತಾಗಿಯೂ ಜ.೩೦ರಂದು ಭೌತಿಕವಾಗಿ ಶಿಷ್ಯ ಬಳಗವನ್ನು ಅಗಲಿದರು. ಇವರ ಶಿಷ್ಯ ವರ್ಗದವರೆಲ್ಲ ಸಮಯೋಚಿತ ಅವಸಾನ ಸೇವೆ ಮಾಡಿದರು. ಇವರ ಆತ್ಮಕ್ಕೆ ಶಾಂತಿ ಕೋರುತ್ತ ‘ಮತ್ತೆ ಬಾ ಗುರುದೇವ ಭಾರತಾಂಬೆಯ ಮಡಿಲ ಮಗುವಾಗಿ ನಮ್ಮ ಬಾಳ ಬೆಳಗುವ ಗುರುವಾಗಿ’ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

 

ಲೇಖನ : ವೀರಣ್ಣ ಯರಗಣವಿ,

ವೈದ್ಯರು, ಬಾಗಲಕೋಟೆ ಸರಕಾರಿ ಆಸ್ಪತ್ರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button