Latest

ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳಿಗೆ ಆಸ್ಟ್ರೇಲಿಯಾದಲ್ಲಿ ಶೃದ್ಧಾಂಜಲಿ

    ಪ್ರಗತಿವಾಹಿನಿ ಸುದ್ದಿ, ಸಿಡ್ನಿ (ಆಸ್ಟ್ರೇಲಿಯಾ)

ಆಸ್ಟ್ರೇಲಿಯಾ ದೇಶದ ಸಿಡ್ನಿ ಮಹಾನಗರದಲ್ಲಿ ನಡೆದಾಡುವ ದೇವರು, ಪದ್ಮ ಭೂಷಣ ಡಾ.  ಶಿವಕುಮಾರ ಮಹಾಸ್ವಾಮೀಜಿಗಳಿಗೆ ಭಾವಪೂರ್ಣ  ಶೃದ್ಧಾಂಜಲಿ ಅರ್ಪಿಸಲಾಯಿತು.

ಜನೆವರಿ ೨೬ರಂದು ವೀರಶೈವ ಸಮಾಜ ಆಫ್ ಏಷಿಯಾ ಪೆಸಿಫಿಕ್ ಸಂಘಟನೆಯು ಶೃದ್ಧಾಂಜಲಿ ಕಾರ್ಯಕ್ರಮವನ್ನು ಸಿಡ್ನಿಯ ಶ್ರೀ ಸಾಯಿ ಮಂದಿರದ ಸಭಾ ಭವನದಲ್ಲಿ ಏರ್ಪಡಿಸಿ, ಅಂತಿಮ ಗೌರವ ಸಲ್ಲಿಸುವ ಅವಕಾಶವನ್ನು ಕಲ್ಪಿಸಿತ್ತು. ಈ ಕಾರ್ಯಕ್ರಮದಲ್ಲಿ ವೀರಶೈವ ಸಮುದಾಯದ ಜನರಲ್ಲದೇ ಅನೇಕ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಗೌರವಪೂರ್ವಕ ಶೃದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠದ ಸಾಕ್ಷ್ಯಚಿತ್ರವನ್ನು ತೋರಿಸಲಾಯಿತು. ಈ ಸಮಾರಂಭವು ಶೋಕ ಸಮಾರಂಭವಾಗಿರದೇ ಅಗಲಿದ ಶತಮಾನದ ಸಂತ  ಶಿವಕುಮಾರ ಸ್ವಾಮೀಜಿಗಳ ಜೀವನವನ್ನು ಮತ್ತೆ ಜ್ಞಾಪಿಸಿಕೊಂಡು ಅವರು ಸಮಾಜದ ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿ ಮತ್ತು ಸಮಾಜದ ಏಳಿಗೆಗೆ ಮಾಡಿದ ಅನೇಕ ಕಾರ್ಯಗಳನ್ನು ಪರಿಚಯಿಸುವ ಸಮಾರಂಭವಾಗಿತ್ತು.

ಕಾರ್ಯಕ್ರಮವು ಶಿವಸ್ತುತಿಯೊಂದಿಗೆ ಆರಂಭವಾಯಿತು. ವೀರಶೈವ ಸಮಾಜದ ಸಾರ್ವಜನಿಕ ಸಂಪರ್ಕಾಧಿಕಾರಿ ವಿಜಯಕುಮಾರ್  ಹಲಗಲಿಯವರು ಕಾರ್ಯಕ್ರಮದ ನಿರೂಪಸಿದರು. ವೀರಶೈವ ಸಮಾಜದ ಸಂಘಟನೆ ಅಧ್ಯಕ್ಷ ಡಾ. ಸಿದ್ಧಲಿಂಗೇಶ್ವರ ಓರೆಕೊಂಡಿ  ಎಲ್ಲರನ್ನು ಸ್ವಾಗತಿಸಿ, ತಾವು ಸ್ವಾಮಿಜಿಗಳನ್ನು ಶ್ರೀಮಠದಲ್ಲಿ ಭೇಟಿಯಾದಾಗಿನ ಸಂದರ್ಭವನ್ನು ಜ್ಞಾಪಿಸಿಕೊಂಡು ಭಾವುಕರಾಗಿ ಕಂಬನಿ ಮಿಡಿದರು.

ಸ್ಥಳೀಯ ನಗರಸಭೆಯ ಸದಸ್ಯ  ಡಾ. ಮೋಣಿಂದರ್ ಸಿಂಘ್ ಅವರು ಸ್ವಾಮೀಜಿಗಳು ಪಾಲಿಸಿದ ಶಿಸ್ತು ಮತ್ತು ಜೀವನ ಕ್ರಮದ ಸ್ವಲ್ಪವನ್ನಾದರೂ ನಾವುಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾದ ನಿರ್ದೇಶಕ ತಾರಾಚಂದ್ ಶರ್ಮಾ ಅವರು ಶ್ರೀಗಳು ತೋರಿದ ತತ್ವಗಳನ್ನು ಸ್ವಲ್ಪವನ್ನಾದರು ನಾವೆಲ್ಲರೂ ಪಾಲಿಸಿದಲ್ಲಿ ಈ ಜಗತ್ತು ಸುಂದರವಾಗುವುದರಲ್ಲಿ ಸಂದೇಹವಿಲ್ಲ ಎಂದರು. ಅಖಿಲಾ ರಮರತಿನಮ್ ಅವರು ಶ್ರೀಗಳಿಗೆ ನಮನಗಳನ್ನು ಸಲ್ಲಿಸುತ್ತ ಸ್ವಾಮಿಜಿಗಳ ಕ್ರಾಂತಿಕಾರಕ ಕಾರ್ಯಕ್ರಮಗಳ ಬಗ್ಗೆ ಅನೇಕ ಭಾರತೀಯರಿಗೇ ಅರಿವಿಲ್ಲ. ಇನ್ನು ಹೊರಗಿನವರಿಗೆ ಗೊತ್ತಿಲ್ಲದಿರುವುದು ಸೋಜಿಗವೇನಲ್ಲ. ಶ್ರೀಗಳ ಸಮಾಜದ ಅಭೀವೃದ್ಧಿಪರ ಕಾರ್ಯಕ್ರಮಗಳು ಮತ್ತು ಹಿಂದೂ ಧರ್ಮದ ಬಗ್ಗೆ ಜಗತ್ತಿನಾದ್ಯಂತ ತಿಳುವಳಿಕೆ ಮೂಡಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಮತ್ತು ಅದು ನಮ್ಮ ಕರ್ತವ್ಯ ಕೂಡ ಎಂದು ಹೇಳಿದರು.

ಶ್ರೀಗಳನ್ನು ಜನಸಾಮಾನ್ಯರು ದೇವರನ್ನಾಗಿ ಮಾಡಿ ಎತ್ತರದ ಪೀಠದ ಮೇಲೆ ಕುಳ್ಳಿರಿಸಿ ತಮ್ಮ ಕೆಲಸ ಮುಗಿಯಿತು ಎಂದು ಕೊಂಡಿದ್ದಾರೆ ಎಂದು ಡಾ. ಸಿಡ್ನಿ ಶ್ರೀನಿವಾಸ್ ಅವರು ಹೇಳಿದರು. ಶ್ರೀಗಳು ತೋರಿದ ದಾರಿಯಲ್ಲಿ ನಡೆಯುತ್ತ ಅವರ ಕಾರ್ಯವನ್ನು ಮುಂದುವರೆಸಿಕೋಡು ಸಮಾಜದ ಏಳಿಗೆಗೆ ಶ್ರಮಿಸುವುದೇ ನಾವುಗಳು ಅವರಿಗೆ ತೊರಿಸುವ ಗೌರವ ಮತ್ತು ಸೂಕ್ತ ಶೃಧ್ಧಾಂಜಲಿ ಎಂದರು.

ಸ್ಥಳೀಯ ಕನ್ನಡ ಬಾನುಲಿ ಕಾರ್ಯಕ್ರಮ “ಸಿಡ್ನಿ ಕನ್ನಡ ವಾಣಿ” ಯ ಸಂಚಾಲಕರಾದ  ರಾಜ್ ನಟರಾಜನ್ ಅವರು ಮಾತನಾಡುತ್ತ ಶ್ರೀಗಳ ಭೇಟಿಯ ಕ್ಷಣಗಳನ್ನು ನೆನೆಪಿಸಿಕೊಂಡರು. ಸಮಾಜ ಕಾರ್ಯಕರ್ತ  ಅರುಣೇಶ್ ಸೇಠ್ ಅವರು ಮಾತನಾಡಿ ಶ್ರೀಗಳು ತೋರಿದ ಮಾರ್ಗದಲ್ಲಿ ನಡೆಯುವುದರಲ್ಲಿಯೆ ನಮ್ಮ ಜೀವನ ಸಾರ್ಥಕತೆ ಅಡಗಿದೆ ಎಂದು ಹೇಳಿದರು.

ಶ್ರೀಮಠಕ್ಕೆ ತಮ್ಮ ಬಾಲ್ಯದಿಂದಲೇ ನಿಕಟ ಸಂಪರ್ಕ ಹೊಂದಿರುವ ಭಾಗ್ಯ ಶಂಕರ್ ಅವರು ಮಾತನಾಡಿ ಶ್ರಿಗಳನ್ನು ಭೇಟಿ ಮಾಡಿದ ಸಂದರ್ಭಗಳನ್ನು ನೆನಪಿಸಿಕೊಂಡು ಸಭಿಕರೊಂದೊಗೆ ಹಂಚಿಕೊಂಡರು. ಭಾರತದಿಂದ ಸಿಡ್ನಿ ನಗರಕ್ಕೆ ಭೇಟಿ ನೀಡುತ್ತಿರುವ ಹಲವರು ಶ್ರೀಗಳಿಗೆ ಅಂತಿಮ ಗೌರವ ಅರ್ಪಿಸುವ ಸದವಕಾಶ ದೊರೆತಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಸಮಾರಂಭದ ಕೊನೆಯಲ್ಲಿ  ನಳಿನಿ ಓರೆಕೊಂಡಿ, ವಿಶಾಲಾಕ್ಷಿ ಮುಳಗುಂದಮಠ,  ಗಿರಿಜದೇವಿ ಹಲಗಲಿ,  ರಾಜೇಶ್ವರಿ ಗೊಪ್ಪೇನಳ್ಳಿ ಮತ್ತು ಲೀಲಾ ಅನುವನಹಳ್ಳಿ ಅವರುಗಳು ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನೆರೆದ ಸಭಿಕರೆಲ್ಲರೂ ಪುಷ್ಪಗಳನ್ನು ಅರ್ಪಿಸಿ ತಮ್ಮ ಗೌರವ ಸಲ್ಲಿಸಿದರು.

ಆರಂಭದಲ್ಲಿ ಶಿವಸ್ತುತಿಯನ್ನು ಭಾಸ್ಕರ್ ಅವರು ಪ್ರಸ್ತುತ ಪಡಿಸಿದರು. ಶರಣೆ ಅಕ್ಕಮಹಾದೇವಿಯವರ “ತನುಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು” ವಚನವನ್ನು  ಆಸ್ಥಾ ದೇಸಾಯಿ ಸುಶ್ರಾವ್ಯವಾಗಿ ಹಾಡಿದಳು.

ಶತಮಾನದ ಸಂತ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ವ್ಯಕ್ತಿತ್ವವು ಎಲ್ಲರನ್ನೂ ಮತ್ತು ಎಲ್ಲವನ್ನೂ ಮೀರಿದ ಮೇರು ಪರ್ವತ. ಅವರಿಗೆ ಅವರೇ ಸರಿಸಾಟಿ. ಇಂತಹ ನಿಸ್ವಾರ್ಥ ಸಮಾಜೋಧ್ಧಾರಕ ಕರ್ಮಯೋಗಿಗೆ “ಭಾರತ ರತ್ನ” ಮತ್ತು “ನೋಬೆಲ್” ಪ್ರಶಸ್ತಿಗಳು ದೊರೆಯಲಿ ಮತ್ತು ದೊರೆತಲ್ಲಿ ಆ ಪ್ರಶಸ್ತಿಗಳ ಮೌಲ್ಯ ಹೆಚ್ಚಾಗುತ್ತದೆ ಎಂದು ಒಕ್ಕೊರಲಿನಿಂದ ಆಗ್ರಹಿಸಿಲಾಯಿತು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button