ಪ್ರಗತಿವಾಹಿನಿ ಸುದ್ದಿ, ಕೋಲಾರ
ನನ್ನ ಭವಿಷ್ಯವೇ ನನಗೆ ಗೊತ್ತಿಲ್ಲ. ಸಮ್ಮಿಶ್ರ ಸರಕಾರದ ಭವಿಷ್ಯದ ಬಗ್ಗೆ ಏನು ಹೇಳಲಿ? -ಇದು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ನುಡಿ.
ಕಳೆದ ಹಲವು ವರ್ಷಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರವಿರುವ ಕೃಷ್ಣ ಭಾನುವಾರ ಕೋಲಾರದಲ್ಲಿ ಮಾಜಿ ಸಚಿವ, ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾಧ್ಯಮದವರ ಜತೆಗೆ ಮಾತನಾಡಿ, ಸದ್ಯಕ್ಕೆ ನಾನು ರಾಜಕೀಯದಿಂದ ದೂರ ಇದ್ದೇನೆ. ಹಾಗಾಗಿ ಸಮ್ಮಿಶ್ರ ಸರಕಾರದ ಭವಿಷ್ಯವನ್ನು ಹೇಳುವ ಸ್ಥಿಯಲ್ಲಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದ ಸ್ಪರ್ಧೆ ಆಯಾ ಪಕ್ಷಕ್ಕೆ ಸೇರಿದ ವಿಚಾರ ಎಂದು ಹೇಳಿದರು.
ಇದಕ್ಕೂ ಮೊದಲು ಎಸ್ಸೆಂ ಕೃಷ್ಣ ಕೋಲಾರ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು. ಇಬ್ಬರೂ ಉಭಯ ಕುಶಲೋಪರಿ ಹಂಚಿಕೊಂಡು ಚಹಾ ಸೇವಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಕಾರ್ಯವೈಖರಿಗೆ ಬೇಸತ್ತು, ಬಹಿರಂಗವಾಗಿಯೇ ಟೀಕೆ ಮಾಡಿ ಕಾಂಗ್ರೆಸ್ ನಿಂದ ಹೊರಬಿದ್ದ ಎಸ್.ಎಂ.ಕೃಷ್ಣ ಅಲ್ಲಿಂದ ಇಲ್ಲಿಯವರೆಗೂ ಅವರನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ಭಾನುವಾರದ ಇಬ್ಬರ ಭೇಟಿ ಹಲವು ಊಹಾಪೋಹಗಳಿಗೂ ಕಾರಣವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ