ಪ್ರಗತಿವಾಹಿನಿ ಸುದ್ದಿ, ಮಾಂಜರಿ :
ಕಳೆದ ಎರಡು ತಿಂಗಳಿಂದ ಸಂಪೂರ್ಣವಾಗಿ ಬತ್ತಿ ಹೋಗಿರುವ ಕೃಷ್ಣಾ ನದಿಗೆ ಕೋಯ್ನಾ ಜಲಾಶಯದಿಂದ ನಾಳೆಯಿಂದಲೇ ನೀರು ಬಿಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭರವಸೆ ನೀಡಿದ್ದಾರೆ.
ರಾಜ್ಯಸಭಾ ಸದಸ್ಯ ಡಾ ಪ್ರಭಾಕರ ಕೊರೆ ನೆತೃತ್ವದ ನಿಯೋಗ ಇಂದು ಮುಂಬಯಿಯಲ್ಲಿ ದೇವೆಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು. ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದ ನಂತರ ಫಡ್ನವೀಸ್ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಾಳೆಯಿಂದಲೇ ನೀರು ಬಿಡುವಂತೆ ಸೂಚಿಸಿದರು ಎಂದು ಕೋರೆ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರವು ಕಳೆದ ಮೂರು ವರ್ಷಗಳಿಂದ ಮಾನವೀಯತೆಯ ಆಧಾರದ ಮೇಲೆ ಕರ್ನಾಟಕದ ಜನತೆಗಾಗಿ ಕೃಷ್ಣೆಗೆ ನೀರು ಬಿಡುತ್ತ ಬಂದಿದೆ. ಹಾಗೆಯೇ ಈ ಬಾರಿಯೂ ನೀರು ಬಿಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಇದರಿಂದ ವಿಜಯಪುರ, ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಯ ಜನರಿಗೆ ಕುಡಿಯುವ ನೀರು ದೊರೆಯಲಿದೆ ಎಂದು ಅವರು ತಿಳಿಸಿದರು.
ಕೃಷ್ಣಾ ನದಿ ಬತ್ತಿರುವುದರಿಂದ ಗಡಿಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ನೂರಾರು ಗ್ರಾಮಗಳಲ್ಲಿ ಹನಿ ನೀರಿಗೂ ಹಾಹಾಕಾರ ಉಂಟಾಗಿದೆ. ಜನ, ಜಾನುವಾರು ಪಕ್ಷಿ ಸಂಕುಲ ನೀರು ಇಲ್ಲದೆ ಪರದಾಡುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಪರಿಣಾಮ ಕೋಯ್ನಾ ಜಲಾಶಯದಿಂದ ಕೃಷ್ಣೆಗೆ ಕೂಡಲೆ 4 ಟಿಎಮಸಿ ನೀರು ಹರಿಸುವಂತೆ ಬಿಜೆಪಿ ನಾಯಕರನಿಯೋಗ ಮನವಿ ಸಲ್ಲಿಸಿತು.
ನಿಯೋಗದಲ್ಲಿ ವಿಧಾನ ಪರಿಷತ್ತಿನ ವಿರೋಧಿ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಬಾಗಕೋಟ ಸಂಸದ ಪಿ ಸಿ ಗದ್ದಿಗೌಡರ, ತೆರದಾಳ ಶಾಸಕ ಸಿದ್ದು ಸವದಿ, ಕುಡಚಿ ಶಾಸಕ ಪಿ ರಾಜೀವ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಜೊಲ್ಲೆ ಉದ್ಯೋಗ ಸಮೂಹ ಸಂಸ್ಥಾಪಕ ಆಣ್ಣಾಸಾಹೇಬ ಜೊಲ್ಲೆ ಇದ್ದರು.
ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರಿಗೆ ಮನವರಿಕೆ ಮಾಡಕೊಡಲಾಯಿತು. ಮಾನವೀತೆಯ ಆಧಾರದಲ್ಲಿ ತಕ್ಷಣ ಕೋಯ್ನಾ ಜಲಾಶಯದಿಂದ 4 ಟಿಎಂಸಿ ನೀರನ್ನು ಹರಿಸುವ ಭರವಸೆ ನೀಡಿದ್ದಾರೆ ಎಂದು ಡಾ. ಪ್ರಭಾಕರ ಕೊರೆ ತಿಳಿಸಿದರು.
ಶಾಶ್ವತವಾದ ಪರಿಹಾರಕ್ಕಾಗಿ ಪ್ರತಿ ವರ್ಷ ಕೃಷ್ಣಾ ನದಿ ತೀರದಲ್ಲಿ ಉಂಟಾಗುತ್ತಿರುವ ನೀರಿನ ಸಮಸ್ಯೆ ಕುರಿತು ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವೆ ಶಾಶ್ವತವಾದ ಒಪ್ಪಂದ ಮಾಡಬೇಕೆಂದು ಈ ವೇಳೆ ಫಡ್ನವೀಸ್ ಅವರಿಗೆ ಮನವಿಯನ್ನು ಮಾಡಲಾಯಿತು.
ಡಾ. ಪ್ರಭಾಕರ ಕೋರೆ ಅಲ್ಲಿಂದಲೇ ಕರ್ನಾಟಕದ ನೀರಾವರಿ ಸಚಿವ ಡಿ ಕೆ ಶಿವಕುಮಾರ ಅವರಿಗೆ ದೂರವಾಣಿ ಮುಖಾಂತರ ಮಾತನಾಡಿ, ಶಾಶ್ವತವಾಗಿ ಪರಿಹಾರಕ್ಕಾಗಿ ಚುನಾವಣೆ ನೀತಿಸಂಹಿತೆ ಮುಗಿದ ನಂತರ ನೀರಾವರಿ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿಗಳ ಜೊತೆ ಸಭೆಯನ್ನು ನಡೆಸಿ ಶಾಶ್ವತವಾದ ಒಪ್ಪಂದ ಮಾಡಬೇಕೆಂದು ಸಲಹೆ ನೀಡಿದರು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೆಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ