ಮೂರು ದಿನಗಳ ರಾಷ್ಟ್ರ ಮಟ್ಟದ ಸಾಹಿತ್ಯ –ಸಾಂಸ್ಕೃತಿಕ ಮೇಳ ಜಿಐಟಿ “ಔರಾ“ಕ್ಕೆ ಅದ್ಧೂರಿ ತೆರೆ
ನನ್ನ ಟಿವಿ ಶೋ ತಂಡದಲ್ಲಿ ಬೆಳಗಾವಿಯ ವಿಶ್ವಪ್ರಸಾದ ಎನ್ನುವ ಹುಡುಗ ಇದ್ದ. ಅವನು ಹಾಗೂ ಆತನ ಪಾಲಕರು ನನ್ನನ್ನು ಬೆಳಗಾವಿಗೆ ಹಲವು ಬಾರಿ ಆಹ್ವಾನಿಸಿದ್ದರು. ಬೆಳಗಾವಿಯ ಊಟ, ವಾತಾವರಣ ಖುಷಿ ನೀಡಿತು. ಬೆಳಗಾವಿಗೆ ಬರಬೇಕೆನ್ನುವ ಹಲವು ವರ್ಷಗಳ ಕನಸು ನನಸಾಯಿತು.
-ನೀತಿ ಮೋಹನ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸೋಮವಾರ ರಾತ್ರಿ ಬೆಳಗಾವಿ ಎಂದಿನ ಬೆಳಗಾವಿಯಾಗಿರಲಿಲ್ಲ. ಪ್ರತಿಷ್ಠಿತ ಕೆಎಲ್ಎಸ್ ಸಂಸ್ಥೆಯ ಜಿಐಟಿ ಮೈದಾನ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಹುಚ್ಚೆದ್ದು ಕುಣಿಯಿತು. ಸುಮಧುರವಾಗಿ ಹರಿದುಬರುತ್ತಿದ್ದ ಸಂಗೀತ ಸುಧೆ, ಅದರೊಂದಿಗೆ ಲಘುವಾದ ನೃತ್ಯ ಅಲ್ಲಿ ಸೇರಿದ್ದ ಸಹಸ್ರಾರು ಜನರನ್ನು ಕುಣಿಸಿತು.
ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮೇಳ “ಔರಾ” ದಲ್ಲಿ ಮೂರು ದಿನಗಳ ಕಾಲ ನಡೆದ ವಿವಿಧ ಸೃಜನಶೀಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಅಂತಿಮ ದಿನವಾದ ಸೋಮವಾರ ಖ್ಯಾತ ಗಾಯಕಿ ನೀತಿ ಮೋಹನ್ ಒಂದೊಂದಾಗಿ ಹಾಡು ಹಾಡುತ್ತಿದ್ದಂತೆ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು, ಬೆಳಗಾವಿಯ ಗಣ್ಯರು ಸಂಗೀತದ ಅಲೆಯಲ್ಲಿ ತೇಲಿಹೋದರು.
ನೀತಿ ಮೋಹನ್ ವೇದಿಕೆ ಪ್ರವೇಶವಾಗುತ್ತಿದ್ದಂತೆ ವಿದ್ಯಾರ್ಥಿಗಳು ಹರ್ಷೋದ್ಘಾರದಿಂದ ಸ್ವಾಗತಿಸಿದರು. ಮಧುರ ಹಾಡುಗಳೊಂದಿಗೆ ಗಾಯನ ಆರಂಭಿಸಿದ ನೀತಿ ಮೋಹನ್ ಇಷ್ಕ ವಾಲಾ ಲವ್, ಆಜಾ ಬಾಲಂ, ನೈನೋ ವಾಲೆ ನೇ, ಪ್ಯಾರ್ ಮಾಂಗಾ ಹಾಯ್ ತುಮಿ ಸೆ, ಹರ್ ಕಿಸಿ ಕೋ ನಹಿ ಮಿಲ್ತಾ, ತುಮೇ ಆಪ್ನ ಬನಕೆ ಜುನೂನ್, ಅಗರ್ ತುಮ ಸಾಥ್ ಹೊ, ಜಗ ಗೂಮೆಯಾ ಹೀಗೆ ಮುಂತಾದ ಇಂಪಾದ ಗೀತೆಗಳಿಂದ ಜನರನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋದರು.
ನಂತರ ಪಂಜಾಬಿ, ಲಂಡನ್ ತುಮ್ಕಾಡ, ಬದ್ರಿ ಕಿ ದಿಲ್ಹಾನಿ, ಗುಂಡೆ ಚಿತ್ರದ ತೂನೆ ಮಾರಿ ಎಂಟ್ರಿ, ಬಲಂ ಪಿಚ್ಕಾರಿ, ರಾಕ್ ಶೈಲಿಯಲ್ಲಿ ಹಲವಾರು ಗೀತೆಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕ ಸಮೂಹವನ್ನೇ ಕುಣಿಸಿದರು. ಕೊನೆಗೆ ಪ್ರಸಿದ್ಧ ಗೀತೆ ದಮ್ ಮಾರೋ ದಮ್ ಹಾಡಿ ಸೇರಿದ ಸಮೂಹವನ್ನು ಸಂಗೀತದ ನಶೆಯಲ್ಲಿ ತೇಲಿಸಿದರು. ಒಟ್ಟಿನಲ್ಲಿ ಸೇರಿದ್ದ ಜನಸಮೂಹವನ್ನು ಸುಮಾರು ಎರಡೂವರೆ ಘಂಟೆಗಳ ಕಾಲ ನೀತಿ ಮೋಹನ್ ಸಂಗೀತ ಮಂತ್ರ ಮುಗ್ದರನ್ನಾಗಿಸಿತು.
ನಗರದ ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಕೆ ಎಲ್ ಎಸ್ ಸದಸ್ಯರು, ಆಮಂತ್ರಿತರು, ಸಿಬ್ಬಂದಿ ವರ್ಗ, ವಿದ್ಯಾರ್ಥಿ ಸಮೂಹ ಈ ಸಂಗೀತ ಸಂಜೆಯ ಮಜಾ ಅನುಭವಿಸಿದರು. ಕೆ ಎಲ್ ಎಸ್ ಅಧ್ಯಕ್ಷ ಅನಂತ ಮಂಡಗಿ ನೀತಿ ಮೋಹನ್ ಅವರನ್ನು ಸನ್ಮಾನಿಸಿದರು. ಕಾರ್ಯಾಧ್ಯಕ್ಷ ಎಂ ಆರ್ ಕುಲಕರ್ಣಿ, ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್. ಕಾಲಕುಂದ್ರಿಕರ, ಪ್ರಾಚಾರ್ಯ ಡಾ. ಎ. ಎಸ್. ದೇಶಪಾಂಡೆ, ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ. ಶಿವಕುಮಾರ್, ವಿದ್ಯಾರ್ಥಿ ಪ್ರತಿನಿಧಿಗಳಾದ ಆಕಾಶ್ ದೇಶಪಾಂಡೆ, ನಿವೇದಿತಾ ಅಂಕಲಗಿ, ಆಯಾತ ಅತ್ತಾರ್ ಹಾಜರಿದ್ದರು.
ನಂತರ ನೀತಿ ಮೋಹನ್ ಅವರು “ಔರಾ”ದ ಮುಖ್ಯ ಟ್ರೋಫಿ ಯನ್ನು ವಿಜೇತರಿಗೆ ವಿತರಿಸಿದರು. ಕೆ ಎಲ್ ಇ ಸಂಸ್ಥೆಯ ಜೆ ಎನ್ ಎಂ ಸಿ ಜನರಲ್ ಚಾಂಪಿಯನ್ ಪ್ರಶಸ್ತಿ ಬಾಚಿಕೊಂಡಿತು.
3 ದಿನಗಳ ಈ ಮೇಳ ದೇಶಭಕ್ತಿ, ಕ್ರೀಡೆಯ ಮಹತ್ವ ಮತ್ತು ಮನೋರಂಜನೆಗಳನ್ನೂ ಒಳಗೊಂಡ ಸಮೂಹ ನೃತ್ಯ ಎಲ್ಲರ ಮನ ಗೆದ್ದಿತು. ಹಲವು ಕಲ್ಪನೆಗಳ ಮೇಲೆ ನಡೆದ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ೧೫ ಕ್ಕಿಂತ ಹೆಚ್ಚು ತಂಡಗಳು ಭಾಗವಹಿಸಿದ್ದವು. ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಗಾಯನ ಸ್ಪರ್ಧೆಗಳು ನಡೆದವು. ವಿದ್ಯಾರ್ಥಿಗಳು ಸಾಹಿತ್ಯಕ್ಕೆ ಸಂಬಂಧಪಟ್ಟ ಕವನ ರಚನೆ, ಕಥೆ ಬರೆಯುವುದು ಹೀಗೆ ಹಲವು ಅರ್ಥಪೂರ್ಣ ಸ್ಪರ್ಧೆಗಳಲ್ಲಿ ತಮ್ಮ ಸೃಜನಶೀಲತೆಯನ್ನು ವ್ಯಕ್ತಪಡಿಸಿದರು.
ಇನ್ನು ಕೆಲವು ವಿದ್ಯಾರ್ಥಿಗಳು ತಮ್ಮ ಕ್ರಿಯಾತ್ಮಕ ಮತ್ತು ಭಾವನಾತ್ಮಕ ಪ್ರತಿಭೆಗಳನ್ನು ಫೋಟೋಗ್ರಾಫಿ, ಮಾತು, ಕಿರು ಚಿತ್ರ ಸ್ಪರ್ಧೆಗಳಲ್ಲಿ ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ. ಹಲವು ಸಾಮಾಜಿಕ ಆಗು ಹೋಗುಗಳ ಮತ್ತು ಸಾಮಾಜಿಕ ಪಿಡುಗುಗಳ ಮೇಲೆ ಬೀದಿನಾಟಕಗಳನ್ನು ಪ್ರದರ್ಶಿಸಿದರು.
ಹೀಗೆ ವಿದ್ಯಾರ್ಥಿಗಳಲ್ಲಿರುವ ಸಾಂಸ್ಕೃತಿಕ ಮತ್ತು ಕಲಾತ್ಮಕ ಸೃಜನಶೀಲತೆಯನ್ನು ಪ್ರದರ್ಶಿಸಲು ಮತ್ತು ಪ್ರೋತ್ಸಾಹಿಸಲು ರಾಷ್ಟ್ರ ಮಟ್ಟದ ವೇದಿಕೆಯಾಗಿದ್ದ ಕರ್ನಾಟಕದ ಹೆಸರಾಂತ “ಔರಾ -೧೯” ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮೇಳ ನೀತಿ ಮೋಹನ್ ಸಂಗೀತ ಸಂಜೆಯೊಂದಿಗೆ ಮುಕ್ತಾಯವಾಯಿತು.
ಪ್ರಗತಿವಾಹಿನಿ ಔರಾ ಉತ್ಸವಕ್ಕೆ ಮಾಧ್ಯಮ ಪ್ರಾಯೋಜಕತ್ವ ಒದಗಿಸಿತ್ತು.
ಜಿಐಟಿಯಲ್ಲಿ ಔರಾ ಉತ್ಸವ: ನೀತಿ ಮೋಹನ್ ಕಾರ್ಯಕ್ರಮಕ್ಕೆ ಕ್ಷಣಗಣನೆ
ಜಿಐಟಿ ರಾಷ್ಟೀಯ ಮೇಳ ಔರಾಗೆ ಅದ್ದೂರಿ ಚಾಲನೆ
ಜಿಐಟಿಯಲ್ಲಿ ಮಾ. 30 ರಿಂದ “ಔರಾ -19” -ರಾಷ್ಟ್ರೀಯ ಸಾಂಸ್ಕೃತಿಕ ಮೇಳ
(ಸುದ್ದಿಯನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ