ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಭಾರತೀಯ ಜನತಾ ಪಾರ್ಟಿ ವಿಶ್ವದಲ್ಲಿಯೇ ಬಲಿಷ್ಠ ಪಕ್ಷವಾಗಲು ಪಂ. ದೀನದಯಾಳ ಉಪಾಧ್ಯಾಯರು ಹಾಕಿಕೊಟ್ಟ ತತ್ವಾದರ್ಶಗಳೇ ಕಾರಣವೆಂದು ಯುವ ಧುರೀಣ ನಾಗಪ್ಪ ಶೇಖರಗೋಳ ಹೇಳಿದರು.
ಪಟ್ಟಣದ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಸೋಮವಾರ ಅರಭಾವಿ ಬಿಜೆಪಿ ಮಂಡಲ ವತಿಯಿಂದ ಪಂ. ದೀನದಯಾಳ ಉಪಾಧ್ಯಾಯರ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಳ್ಳಲಾದ ಸಮರ್ಪಣಾ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪಂ. ಉಪಾಧ್ಯಾಯರ ಪಾತ್ರ ಗಣನೀಯ. ಇಂದು ಬಿಜೆಪಿ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದರೆ ಅದಕ್ಕೆ ಉಪಾಧ್ಯಾಯರು ಕಾರಣ. ಜಗತ್ತಿನಲ್ಲಿಯೇ ಅತೀ ದೊಡ್ಡ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ. ಈ ಕನಸನ್ನು ನನಸಾಗಿಸಲು ಪ್ರತಿಯೊಬ್ಬರೂ ತನು-ಮನ-ಧನದಿಂದ ಕೆಲಸ ಮಾಡಿ ನವಭಾರತ ನಿರ್ಮಾಣಕ್ಕೆ ಮೋದಿ ಮತ್ತೊಮ್ಮೆ ಎಂಬ ಸಂಕಲ್ಪ ತೊಡಬೇಕೆಂದು ನಾಗಪ್ಪ ಶೇಖರಗೋಳ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಎನ್‌ಎಸ್‌ಎಫ್ ಅತಿಥಿ ಗೃಹದ ಲಕ್ಕಪ್ಪ ಲೋಕುರಿ, ಸಿ.ಪಿ. ಯಕ್ಷಂಬಿ, ಎಂ.ಡಿ. ಪಾಟೀಲ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಸವರಾಜ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪ್ರಮೋದ ನುಗ್ಗಾನಟ್ಟಿ, ಪುಂಡಲೀಕ ಮೇಟಿ, ಧರೆಪ್ಪ ಬಿ.ಗೌಡರ, ಮಾಯಪ್ಪ ಪೂಜೇರಿ, ನಿಂಗಪ್ಪ ಪೂಜೇರಿ, ಹಣಮಂತ ಅಜ್ಜನ್ನವರ, ಕೃಷ್ಣಾ ಗಡಕರಿ, ಮಹಾಂತೇಶ ಚೌಗಲಾ, ಅರಭಾವಿ ಮಂಡಲ ಬಿಜೆಪಿ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.