ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮಹಿಳೆಯರಿಲ್ಲದೆ ಮನೆಯಿಲ್ಲ. ಮನೆ ಪರಿಪೂರ್ಣವಾಗಬೇಕಾದರೆ ಅಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ನಿರ್ದೇಶಕ ಡಾ. ಎಸ್.ಸಿ. ಧಾರವಾಡ ಹೇಳಿದರು.
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾರಿಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಗಳಿಂದ ಗುರುತಿಸಿಕೊಂಡಿದ್ದಾರೆ. ಅವರಿಗಾಗಿ ಈ ಒಂದು ದಿನ ಸಂಭ್ರಮಾಚರಿಸಿದರೆ ಸಾಲದು. ಪ್ರತಿ ದಿನವನ್ನೂ ಸ್ತ್ರೀ ಸಂಕುಲಕ್ಕೆ ಮೀಸಲಾಗಿಡಬೇಕು ಎಂದರು.
ಮುಖ್ಯ ಅತಿಥಿ ಕೆಎಲ್‌ಇ ಹೋಮಿಯೋಪತಿ ಕಾಲೇಜು ಪ್ರಾಚಾರ್ಯ ಡಾ. ಎಂ.ಎ. ಉಡಚನಕರ ಮಾತನಾಡಿ, ಮನೆಯ ಕೇಂದ್ರಬಿಂದುವಾದ ಮಹಿಳೆಯರು ಮನೆಯಲ್ಲಿ ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ, ಮಗಳಾಗಿ ನಮ್ಮ ಜೊತೆಗೆ ಬೆಳೆದರೂ ಸಮಾಜ ಅವರಿಗೆ ಪುರುಷನ ನಂತರದ ಸ್ಥಾನ ನೀಡುತ್ತಿರುವುದು ಖೇದಕರ. ಮಹಿಳೆಯರು ತಮ್ಮ ಪ್ರತಿಭೆಗಳಿಂದ ತಮ್ಮನ್ನು ಗುರುತಿಸಿಕೊಂಡರೆ ಅಧಿಕ ಸಾಧನೆ ಮಾಡಬಹುದಾಗಿದೆ ಎಂದು ನುಡಿದರು.
ಹಿರಿಯ ವೈದ್ಯ ಡಾ. ಬಿ.ಎಸ್. ಮಹಾಂತಶೆಟ್ಟಿ ಮಾತನಾಡಿ, ಮಹಿಳೆಯರು ಅಡುಗೆ ಮನೆಯಿಂದ ಹಿಡಿದು ಇಂದು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಗಳಿಂದ ಜಗದ್ವಿಖ್ಯಾತಿ ಪಡೆದಿದ್ದಾರೆ. ಅವರನ್ನು ಇನಷ್ಟು ಸಶಕ್ತರನ್ನಾಗಿಸುವ ಅವಶ್ಯಕತೆ ಇದೆ ಎಂದರು.
ಡಾ. ಸುಚೇತಾ ವಾಘಮಾರೆ ಮಾತನಾಡಿದರು. ಆಸ್ಪತ್ರೆಯ ವೈದ್ಯರು, ನರ್ಸಿಂಗ್ ವಿದ್ಯಾರ್ಥಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ರಾಕಿ ಸುಳಕಡೆ ನಿರೂಪಿಸಿದರು. ಮಂಜುಳಾ ಪಿಸೆ ಸ್ವಾಗತಿಸಿದರು. ಪ್ರಭಾವತಿ ಪಾಟೀಲ ವಂದಿಸಿದರು.