Latest

ಬಸವಣ್ಣನವರು ಸಮಾಜವನ್ನು ಕಟ್ಟುವ ಮೂಲಕ ವಿಶ್ವಮಾನವರಾದರು : ಡಾ.ಪ್ರಭಾಕರ ಕೋರೆ

 


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :

ಅಣ್ಣ ಬಸವಣ್ಣನವರು ತಮ್ಮ ವೈಚಾರಿಕ ವಿಚಾರಗಳಿಂದ ಅಂದು ಸಮಾಜವನ್ನು ಕಟ್ಟಿದರು. ಸಮಾಜದಲ್ಲಿ ಬೇರುಬಿಟ್ಟಿದ್ದ ಜಾತಿ ವ್ಯವಸ್ಥೆಯನ್ನು ಪ್ರಬಲವಾಗಿ ವಿರೋಧಿಸಿ ಸಮಾಜನತೆಯ ಸಿದ್ಧಾಂತವನ್ನು ಅನುಷ್ಠಾನದಲ್ಲಿ ತರುವಲ್ಲಿ ಹೋರಾಡಿದರೆಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರು ನುಡಿದರು.

ಅವರು ಬೆಳಗಾವಿಯ ಬಸವೇಶ್ವರ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕ ಹಾಗೂ ಬಸವ ಜಯಂತಿ ಉತ್ಸವ ಸಮಿತಿ, ವಿವಿಧ ಲಿಂಗಾಯತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಬಸವಣ್ಣನವರು ಸಮಾಜದ ಹಿತಚಿಂತಕರಾಗಿ ವಿವೇಚಿಸಿದರು. ಇಂದಿಗೂ ನಮ್ಮಲ್ಲಿ ಮನೆಮಾಡಿಕೊಂಡಿರುವ ಜಾತಿ, ವರ್ಗ, ಲಿಂಗ ವ್ಯವಸ್ಥೆಯನ್ನು ಕಿತ್ತುಹಾಕಲು ಸಾಧ್ಯವಾಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ಅಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಮಾಡಿರುವ ಕಾರ್ಯ ಸ್ತುತ್ಯಾರ್ಹವೆನಿಸಿದೆ. ಅವರ ಜೀವನ ಸಂದೇಶವನ್ನು ನಮ್ಮ ಬದುಕಿನಲ್ಲಿ ಅನುಕರಣೆಗೆ ತರುವುದು ಅಗತ್ಯ. ನಮ್ಮ ನಾಡಿನ ಮಠಾಧಿಪತಿಗಳು ಬಸವಣ್ಣನವರಂತೆ ಪ್ರಗತಿಪರವಾಗಿ ವಿವೇಚಿಸುವುದನ್ನು ಕಲಿಯಬೇಕಾಗಿದೆ. ಸಮಾಜವನ್ನು ಒಡೆಯುವ ಅಧಿಕಾರ ಯಾರಿಗೂ ಇಲ್ಲವೆಂದು ಹೇಳಿದರು.
ಸಂಸದರಾದ ಸುರೇಶ ಅಂಗಡಿ ಮಾತನಾಡಿ, ಬಸವಣ್ಣನವರದು ವಿಶ್ವಧರ್ಮ. ಮಾನವ ಕಲ್ಯಾಣಕ್ಕಾಗಿ ಅವರು ಮಾಡಿದ ಸೇವೆ ಸ್ಮರಣೀಯ. ಸಮಾಜ ಧರ್ಮಗಳ ಅಭ್ಯುದಯಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸೇವೆ ಸಲ್ಲಿಸಿದರು. ಬಸವಣ್ಣನವರು ಸರ್ವಸಮಾನತೆಯನ್ನು ತರುವುದರೊಂದಿಗೆ ಮಾನವ ಸಂಬಂಧಗಳಲ್ಲಿ ಮೌಲ್ಯಗಳನ್ನು ಹೆಚ್ಚಿಸಿದರು. ಆದರೆ ನಾವ್ಯಾರೂ ಅದನ್ನು ಪಾಲಿಸುತ್ತಿಲ್ಲ. ಇಂದು ಮಠಗಳು ಹಾಗೂ ರಾಜಕಾರಣಗಳು ತಮ್ಮ ಮೂಲ ಧ್ಯೇಯಗಳನ್ನು ಮರೆತಂತಿವೆ. ಇಂದು ವಚನ ಸಾಹಿತ್ಯ ಎಲ್ಲ ಭಾಷೆಗಳಲ್ಲಿ ದೊರೆಯುವಂತೆ ಮಾಡಲಾಗಿದೆ. ನರೇಂದ್ರ ಮೋದಿಯವರು ದೂರದ ಲಂಡನ್‌ನಲ್ಲಿ ಬಸವಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಬಸವಣ್ಣನವರ ಜಯಂತಿಯನ್ನು ಕಾಯಕದ ದಿನವನ್ನಾಗಿ ಆಚರಿಸಬೇಕಾಗಿದೆ. ಅವರು ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಅವರ ವಚನಗಳು ನಮ್ಮ ಬದುಕಿನ ಅನುಕರಣೆಗಳಾಗಬೇಕು. ಅಂದಾಗ ಅದಕ್ಕೆ ಅರ್ಥ ಬರುತ್ತದೆ ಎಂದರು.


ಆಶೀರ್ವಚನ ನೀಡಿದ ಬೆಳಗಾವಿ ಕಾರಂಜಿಮಠ ಪರಮಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಸಮಾಜೋಧಾರ್ಮಿಕ ಕ್ರಾಂತಿಯನ್ನು ಮಾಡುವುದರ ಮೂಲಕ ಜಗತ್ತಿಗೆ ಒಂದು ದಿವ್ಯವಾದ ಸಂದೇಶವನ್ನು ನೀಡಿದ್ದಾರೆ. ಅವರ ಸಾರಿದ ವಿಶ್ವಸಂದೇಶವನ್ನು ನಮ್ಮ ನಡೆನುಡಿಯಲ್ಲಿ ಜಾರಿಗೆ ತರಬೇಕಾಗಿದೆ. ಬಸವ ಜಯಂತಿಗೆ ಅರ್ಥಬರುವುದು ಬಡವರ, ಅನಾಥರ ಸೇವೆಯನ್ನು ಮಾಡಿದಾಗ. ಕಾಯಕ ದಾಸೋಹಗಳನ್ನು ನಮ್ಮ ನಿತ್ಯಬದುಕಿನಲ್ಲಿ ಅನುಕರಣೆಗೆ ತಂದಾಗ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ವಾಯ್.ಎಸ್.ಪಾಟೀಲ ಅವರು ಮಾತನಾಡಿ, ಮಹಾಸಭೆ ಪ್ರತಿವರ್ಷ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದೆ. ಇದಕ್ಕೆ ಹಿಂದಿನ ಹಲವಾರು ಮಹನೀಯರು ತನುಮನಧನದಿಂದ ಸೇವೆಯನ್ನು ಸಲ್ಲಿಸಿದ್ದಾರೆ. ಅವರನ್ನೆಲ್ಲ ಈ ಶುಭ ಸಂದರ್ಭದಲ್ಲಿ ಸ್ಮರಿಸಲೇಬೇಕು. ಇಂದು ಸಮಾಜ ಸಂಘಟನೆ ಬಹುಮುಖ್ಯವೆನಿಸಿದೆ. ಎಲ್ಲರೂ ಸೇವಾಮನೋಭಾವದಿಂದ ಸಮಾಜವನ್ನು ಸಂಘಟಿಸಬೇಕೆಂದು ಕರೆನೀಡಿದರು.
ವೇದಿಕೆಯ ಮೇಲೆ ಮಾಜಿ ಮಹಾಪೌರ ಡಾ.ಸಿದ್ಧನಗೌಡ ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಬಿ.ವ್ಹಿ.ಕಟ್ಟಿ,  ಜಾವೂರ, ಕಲ್ಯಾಣರಾವ್ ಮುಚಳಂಬಿ, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷರಾದ ರಮೇಶ ಕಳಸಣ್ಣನವರ, ಶಿವಾನಂದ ಮಗದುಮ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಜ್ಯೋತಿ ಭಾವಿಕಟ್ಟಿ, ಆಶಾ ಯಮಕನಮರಡಿ, ಬೀನಾ ಕತ್ತಿ, ಡಾ.ಎಫ್.ವ್ಹಿ.ಮಾನ್ವಿ, ಡಾ.ಎಚ್.ಬಿ.ರಾಜಶೇಖರ, ಎಂ.ಬಿ.ಜಿರ್ಲಿ, ಸಚಿನ್ ಪಾಟೀಲ, ವಿಜಯ ಕೊಡಗನೂರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ.ಪ್ರಭಾಕರ ಕೋರೆ ಹಾಗೂ ಸುರೇಶ ಅಂಗಡಿ ನಗದು ಬಹುಮಾನ ಹಾಗೂ ಪಾರಿತೋಷಕವನ್ನು ವಿತರಿಸಿದರು.
ನಯನಾ ಗಿರಿಗೌಡರ ಹಾಗೂ ಅಕ್ಕನ ಬಳಗ ಶಹಾಪುರ ವಚನ ಪ್ರಾರ್ಥನೆ ಮಾಡಿದರು. ಡಾ.ಗುರುದೇವಿ ಹುಲೆಪ್ಪನವರಮಠ ಸ್ವಾಗತಿಸಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಬಸವರಾಜ ತರಗಾರ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button