Latest

ಬೆಳಗಾವಿ ಜಿಲ್ಲಾ ರಡ್ಡಿ ಸಮಾಜದಿಂದ ಪ್ರತಿಭಟನೆ; ಮನವಿ ಅರ್ಪಣೆ

     ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ರಡ್ಡಿ ಸಮಾಜದ ಎಚ್.ಕೆ.ಪಾಟೀಲ, ಎಸ್.ಆರ್.ಪಾಟೀಲ ಹಾಗೂ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನಿರಾಕರಿಸಿ ರಡ್ಡಿ ಸಮಾಜಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯ ಆಗಿದೆ ಎಂದು ಆರೋಪಿಸಿ ಮಂಗಳವಾರ ಬೆಳಗಾವಿ ಜಿಲ್ಲಾ ರಡ್ಡಿ ಸಮಾಜದವರು ಪ್ರತಿಭಟನೆ ನಡೆಸಿದರು.
ನಗರದ ಚನ್ನಮ್ಮ ವೃತ್ತದಿಂದ ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಡ್ಡಿ ಸಮಾಜದ ಹಿರಿಯ ಅನುಭವಿ ರಾಜಕಾರಣಿಗಳಾದ ಎಚ್.ಕೆ.ಪಾಟೀಲ, ಎಸ್.ಆರ್.ಪಾಟೀಲ ಹಾಗೂ ರಾಮಲಿಂಗಾರೆಡ್ಡಿ ಈ ಮೂವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಡ್ಡಿ ಸಮಾಜದ ಉಪಾಧ್ಯಕ್ಷ ಬಿ.ಎನ್ ನಾಡಗೌಡ ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿ, 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅನೇಕ ಸಚಿವರು ಸೋತಿರುವ ಸಂದರ್ಭದಲ್ಲೂ ಎಚ್.ಕೆ.ಪಾಟೀಲ ಹಾಗೂ ರಾಮಲಿಂಗಾ ರೆಡ್ಡಿ ಅವರು ತಮ್ಮದೆ ಆದ ಅಪಾರ ಜನಪ್ರಿಯತೆಯಿಂದಾಗಿ ಜಯಶೀಲರಾಗಿದ್ದಾರೆ. ಇಂತಹ ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿಗಳಿಗೆ ಸಚಿವ ಸ್ಥಾನ ಕೈ ತಪ್ಪಿರುವುದು ರಾಜ್ಯದ ಸುಮಾರು 14 ಜಿಲ್ಲೆ 80 ತಾಲೂಕುಗಳಲ್ಲಿರುವ ಸುಮಾರು 70 ಲಕ್ಷಕ್ಕೂ ಮೀರಿರುವ ರೆಡ್ಡಿ ಸಮುದಾಯಕ್ಕೆ ಆಘಾತ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಚ್.ಕೆ.ಪಾಟೀಲ, ರಾಮಲಿಂಗಾ ರೆಡ್ಡಿ, ಎಸ್.ಆರ್.ಪಾಟೀಲ ರಾಜ್ಯ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿರುವ ಹಿರಿಯ ಕಾಂಗ್ರೆಸ್ ಪಕ್ಷದ ಅನುಭವಿ ರಾಜಕಾರಣಿಗಳು, ಸುದೀರ್ಘ ರಾಜಕೀಯ ಜೀವನದಲ್ಲಿ ಕರ್ನಾಟಕ ಸರ್ಕಾರದಲ್ಲಿ ವಿವಿಧ ಖಾತೆಯ ಸಚಿವರುಗಳಾಗಿ ಪಕ್ಷ ನಿಷ್ಟೆ, ಅಪಾರವಾಧ ಜನಪರ ಕಾಳಜಿಯಿಂದ ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ. ಅದೇ ರೀತಿ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಸೇವಾ ಹಿರಿತನ ಹಾಗೂ ಅನುಭವಗಳನ್ನು ಗಮನಿಸಿ ಅವರಿಗೂ ಸಚಿವ ಸ್ಥಾನ ನಿಡದೆ ಉತ್ತರ ಕರ್ನಾಟಕಕ್ಕೆ ಹಾಗೂ ಸಮಾಜಕ್ಕೆ ಅನ್ಯಾಯವಾಗಿದೆ. ಪಕ್ಷದ ಏಳಿಗೆಗಾಗಿ ಸದಾ ದುಡಿಯುವ ಇಂತಹ ನಾಯಕರ ಸೇವೆ ಮತ್ತಷ್ಟು ಪಸರಿಸಬೇಕಾಗಿದೆ. ನಿಸ್ವಾರ್ಥ ಬದುಕಿನೊಂದಿಗೆ ಹಲವಾರು ಜನರ ಬದುಕಿಗೆ ದಾರಿ ದೀಪವಾದ ಇವರುಗಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಚನ್ನಮ್ಮ ವೃತ್ತದಿಂದ ಪ್ರತಿಭಟನೆ ಮುಖಾಂತರ ಕ್ಲಬ್ ರೋಡ್ ಕಾಂಗ್ರೆಸ್ ಕಚೇರಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಮುಖಾಂತರ ರಾಷ್ಟ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರಡ್ಡಿ ಸಂಘದ ಉಪಾಧ್ಯಕ್ಷ
ಬಿ.ಎನ್.ನಾಡಗೌಡ, ನಾರಾಯಣ ಕೆಂಚರೆಡ್ಡಿ, ಮಂಜುನಾಥ ಪಾಟೀಲ, ಪ್ರಕಾಶ ಸೋನ್ವಾಲಕರ, ಪಿ.ಆರ್.ರಡ್ಡಿ, ಸಂಜು ಸೊನ್ನದ, ರವಿ ಜುಗನ್ನವರ ಸೇರಿದಂತೆ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button