
ಪ್ರಗತಿವಾಹಿನಿ ಸುದ್ದಿ: ಬೈಕ್ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ ಹಾಗೂ ಮೂರು ವರ್ಷದ ಮಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮನೋಜ್(35), 3 ವರ್ಷ ಧೃತಿ ಮೃತ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಮನೋಜ್ ಪತ್ನಿ ನಂದಿನಿ, ಮತ್ತಿಬ್ಬರು ಮಕ್ಕಳಿಗೆ ಗಾಯಗಳಾಗವೆ. ಮೂವರನ್ನೂ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೀಟೂರ್ ಕ್ರಾಸ್ ಬಳಿ ಈ ದುರಂತ ನಡೆದಿದೆ. ಕುಟುಂಬಸ್ಥರು ಹರಿಹರ ನಗರದ ಆಶ್ರಯ ಕಾಲೋನಿ ನಿವಾಸಿಗಳು ಎಂದು ತಿಳಿದುಬಂದಿದೆ.
ನಂದಿನಿ ಅವರ ತವರಿನಲ್ಲಿನ ಹಬ್ಬ ಮುಗಿಸಿ ಕುಟುಂಬ ಕಲ್ಪನಹಳ್ಳಿಯಿಂದ ಹರಿಹರಕ್ಕೆ ಬೈಕ್ನಲ್ಲಿ ವಾಪಸ್ ಆಗುತ್ತಿತ್ತು. ಮೂವರು ಮಕ್ಕಳು ಸಹಿತ ದಂಪತಿ ಬೈಕ್ನಲ್ಲಿದ್ದರು ಎನ್ನಲಾಗಿದೆ. ಘಟನೆ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




