ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹಾರಾಷ್ಟ್ರದ ನೀರು ವಿನಿಮಯ ಒತ್ತಡಕ್ಕೆ ಕರ್ನಾಟಕ ಒಪ್ಪಬಾರದು, ತಕ್ಷಣ ಕರ್ನಾಟಕಕ್ಕೆ ನೀರು ಬಿಡುವಂತೆ ಕ್ರಮ ಕೈಗೊಳ್ಳಬೇಕು. ಈ ಸಂಬಂದ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕು ಎಂದು ಬೆಳಗಾವಿಯ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದೆ.
ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಬರೆದಿರುವ ಪತ್ರದ ಪೂರ್ಣ ಸಾರಾಂಶ ಹೀಗಿದೆ:
“ಕೃಷ್ಣಾ ನದಿಯು ಬತ್ತಿ ಹೋಗಿರುವ ಪರಿಣಾಮವಾಗಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ನೂರಾರು ನಗರ ಹಾಗೂ ಗ್ರಾಮಗಳ ಜನರು ಕುಡಿಯುವ ನೀರಿನ ತೀವ್ರ ಅಭಾವವನ್ನು ಎದರಿಸುತ್ತಿರುವ ಬಿಕ್ಕಟಿನ ಪ್ರಸಂಗ ತಮ್ಮ ಗಮನಕ್ಕೂ ಬಂದಿದೆ ಎಂದು ನಾವು ಭಾವಿಸಿದ್ದೇವೆ.
ಬೆಳಗಾವಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮಹಾರಾಷ್ಟ್ರದ ಮೇಲೆ ತೀವ್ರವಾದ ಒತ್ತಡ ತಂದರೂ ಸಹ ಮಹಾರಾಷ್ಟ್ರವು ನೀರು ಬಿಡುಗಡೆ ಮಾಡುತ್ತಿಲ್ಲ. ಕಳೆದ ಮಾರ್ಚ ೨೦ ರಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಕೋಯ್ನಾ ಅಥವಾ ವಾರಣಾ ಜಲಾಶಯಗಳಿಂದ ೨ ಟಿ.ಎಂ.ಸಿ. ನೀರನ್ನು ಮಾನವಿಯತೆ ದೃಷ್ಟಿಯಿಂದ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ. ಕಳೆದ ಮಾರ್ಚ ೩೦ ರಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೋಯ್ನಾ ಜಲಾಶಯದಿಂದ ೪ ಟಿ.ಎಂ.ಸಿ. ನೀರನ್ನು ಕೃಷ್ಣೆಗೆ ಹರಿಸುವ ಮೂಲಕ ಉತ್ತರ ಕರ್ನಾಟಕದ ಜನತೆಗೆ ನೆರವಾಗಬೇಕೆಂದು ಕೋರಿದ್ದಾರೆ. ಅಲ್ಲದೇ ಈ ಸಂಬಂಧ ಚರ್ಚಿಸಲು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ನೇತೃತ್ವದ ಬಿಜೆಪಿ ನಿಯೋಗಕ್ಕೆ ಸಮಯ ನಿಗದಿ ಮಾಡಬೇಕೆಂದು ಸಹ ಯಡಿಯೂರಪ್ಪ ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬೆಳಗಾವಿಗೆ ಆಗಮಿಸಿದ್ದರು. ಅವರೂ ಸಹ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ನೀರು ಬಿಡುಗಡೆ ಮಾಡುವಂತೆ ಸೂಚಿಸಿದರು.
ಇಷ್ಟೆಲ್ಲ ಮನವಿ, ಒತ್ತಾಯ ಮಾಡಿದರೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಯಾವುದೇ ರೀತಿಯ ಸ್ಪಂದನೆ ಮಾಡುತ್ತಿಲ್ಲ. ನೀರು ಬಿಡುಗಡೆಯ ಬಗ್ಗೆ ನಿರ್ಧಾರ ಕೈಕೊಳ್ಳುತ್ತಿಲ್ಲ. ನಮಗೆ ಬಂದ ಮಾಹಿತಿಯ ಪ್ರಕಾರ ಮಹಾರಾಷ್ಟ್ರವು ಕರ್ನಾಟಕದ ಜೊತಗೆ ನೀರು ವಿನಿಮಯ ಒಪ್ಪಂದಕ್ಕೆ ಪಟ್ಟು ಹಿಡಿದಿದೆ. ತಾನು ಬಿಡುಗಡೆ ಮಾಡುವ ನೀರಿನ ಬದಲಾಗಿ ವಿಜಯಪುರ ಜಿಲ್ಲೆಯ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಗೆ ನೀರು ಬಿಡುಗಡೆ ಮಾಡಬೇಕೆಂದು, ಮಹಾರಾಷ್ಟ್ರ ಸರಕಾರದ ಸೂಚನೆ ಮೇರೆಗೆ, ಅಲ್ಲಿಯ ನೀರಾವರಿ ಅಧಿಕಾರಿಗಳು ನಮ್ಮ ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಪ್ರಾಸ್ತಾವನೆಯೊಂದನ್ನು ಕಳಿಸಿದ್ದಾರೆ. ಈ ಸಂಬಂಧ ಕಳೆದ ತಿಂಗಳು ಪುಣೆಯಲ್ಲಿ ನಡೆದ ಉಭಯ ರಾಜ್ಯಗಳ ನೀರಾವರಿ ಅಧಿಕಾರಿಗಳ ಸಭೆಯಲ್ಲಿ ಚರ್ಚೆಯಾಗಿದೆ.
ಇಂತಹ ಪ್ರಸ್ತಾವನೆಗೆ ನಮ್ಮ ರಾಜ್ಯ ಸರಕಾರ ಸಮ್ಮತಿಸಿದಲ್ಲಿ ರಾಜ್ಯದ ಹಿತಾಸಕ್ತಿಗೆ ಮುಂಬ ರುವ ದಿನಗಳಲ್ಲಿ ತೀವ್ರ ಧಕ್ಕೆಯಾಗಲಿದೆ. ನೀರಿಗೆ ನೀರು ತತ್ವವನ್ನು ಆಧರಿಸಿ ಒಪ್ಪಂದ ಮಾಡಿಕೊಳ್ಳಬೇಕೆಂಬ ಮಹಾರಾಷ್ಟ್ರದ ವಾದವು ಕುತಂತ್ರದಿಂದ ಕೂಡಿದೆ. ಇಂತಹ ಒಪ್ಪಂದವನ್ನು ರಾಜ್ಯ ಸರಕಾರ ಸಾರಾಸಗಟಾಗಿ ತಿರಸ್ಕರಿಸಬೇಕು. ಕೋಯ್ನಾ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದು ಮಳೆಗಾಲದ ಮುನ್ನವೇ ಬೇಸಿಗೆ ಕಾಲದಲ್ಲಿ ಮಹಾರಾಷ್ಟ್ರವು ನೀರು ಬಿಡುಗಡೆ ಮಾಡಲೇ ಬೇಕಾಗುತ್ತದೆ. ಹೀಗಿದ್ದರೂ ಸಹ ಮಹಾರಾಷ್ಟ್ರವು ಹಟಮಾರಿತನದ ಧೋರಣೆಯನ್ನು ಅನುಸರಿಸುತ್ತಿರುವುದು. ಅತ್ಯಂತ ಖಂಡನಾರ್ಹವಾಗಿದೆ.
ಮಹಾರಾಷ್ಟ್ರವು ನೀರು ಕೇಳುತ್ತಿರುವ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಗೆ ಆಲಮಟ್ಟಿ ಯೋಜನೆಯಿಂದ ೬.೫ ಟಿ.ಎಂ.ಸಿ. ನೀರು ಹಂಚಿಕೆಯಾಗಿದೆ. ಈ ನೀರಿನಿಂದ ೫೨ ಸಾವಿರ ಹೆಕ್ಟರ್ ಜಮೀನು ನೀರಾವರಿಗೆ ಒಳಪಡಲಿದೆ. ಒಂದು ವೇಳೆ ಸಾಂಗ್ಲಿ ಜಿಲ್ಲೆಯ ಜತ್ತ ಮತ್ತು ಇತರ ಪ್ರದೇಶಗಳಿಗೆ ನೀರು ಪೂರೈಕೆ ಮಾಡಬೇಕಾದರೆ ತಿಕೋಟಾ ನೀರು ವಿತರಣಾ ಕೇಂದ್ರದಿಂದ ೨೦ ಕೀ.ಮಿ. ಕೊಳವೆ ಮಾರ್ಗ ಹಾಕಬೇಕಾಗುತ್ತದೆ. ಅಲ್ಲದೇ ೬.೫ಟಿ.ಎಂ.ಸಿ. ನೀರು ಹಂಚಿಕೆಯನ್ನು ಕಡಿತಗೊಳಿಸಬೇಕಾಗುತ್ತದೆ.
ತಾವು ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ಜೊತೆಗೆ ತುರ್ತಾಗಿ ಮಾತುಕತೆ ನಡೆಸಬೇಕು. ರಾಜ್ಯ ಸರಕಾರ ಕೇವಲ ಪತ್ರ ಬರೆದು ಕೈ ತೊಳದುಕೊಳ್ಳಬಾರದು. ಮಹಾರಾಷ್ಟ್ರದ ಮೇಲೆ ಈ ಸಂಬಂಧ ಒತ್ತಡ ತರಲು ರಾಜ್ಯ ಬಿಜೆಪಿ ನಾಯಕರಿಗೆ ಸೂಚಿಸಬೇಕು. ಚುನಾವಣೆಯ ಫಲಿತಾಂಶದವರಗೆ ಕಾಯದೇ ಉತ್ತರ ಕರ್ನಾಟಕದ ಜನತೆಯ ಕುಡಿಯುವ ನೀರಿನ ಅಭಾವವನ್ನು ನೀಗಿಸುವ ದಿಕ್ಕಿನಲ್ಲಿ ತಾವು ಸರ್ವ ಪಕ್ಷಿಯ ಸಭೆಯನ್ನು ತುರ್ತಾಗಿ ಕರೆಯಬೇಕು”
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ