Latest

ಮಹಿಳಾ ಶೋಷಣೆ ಇಂದಿಗೂ ನಿಂತಿಲ್ಲ -ಡಾ.ಪ್ರಭಾಕರ ಕೋರೆ ವಿಷಾದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಜಗಜ್ಯೋತಿ ಬಸವೇಶ್ವರರು ೧೨ನೇ ಶತಮಾನದಲ್ಲಿಯೇ ಸ್ತ್ರೀಯರಿಗೆ ಅತ್ಯಧಿಕ ಸ್ವಾತಂತ್ರ್ಯ ನೀಡಿದ್ದರು. ಪ್ರಥಮ ಅನುಭವ ಮಂಟಪ ಎಂಬ ಸಂಸತ್ತು ಸ್ಥಾಪಿಸಿ ಮಹಿಳೆಯರಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿತ್ತು. ಸಾಮಾಜಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಬೇಧಭಾವವನ್ನು ಹೋಗಲಾಡಿಸಲು ಸಾಕಷ್ಟು ಶ್ರಮವಹಿಸಲಾಗಿತ್ತು. ಮಹಿಳಾ ದಿನಾಚರಣೆ ಪ್ರಾರಂಭವಾಗಿ ಹಲವಾರು ವರ್ಷ ಕಳೆದರೂ ಇಂದಿಗೂ ಕೂಡ ಮಹಿಳೆಯರ ಮೇಲಿನ ಶೋಷಣೆ ನಿಂತಿಲ್ಲ ಎಂದು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ವಿಷಾದ ವ್ಯಕ್ತಪಡಿಸಿದರು.

ಕೆಎಲ್‌ಇ ಸ್ತ್ರೀ ಶಕ್ತಿ ಸಂಘವು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇವತೆಗಳನ್ನು ಪೂಜಿಸುವ ನಮ್ಮ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳು ಕೊನೆಗೊಳ್ಳುತ್ತಿಲ್ಲ. ಭಾರತದಲ್ಲಿಯೇ ಅತೀ ಹೆಚ್ಚ ಅತ್ಯಾಚಾರಗಳಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಅತ್ಯಾಚಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು. ಇತರ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತ್ಯಾಚಾರಗಳಾಗುವುದು ಕಡಿಮೆ. ಇದಕ್ಕೆಲ್ಲ ಕಾರಣ ಇಲ್ಲಿನ ಸಮಾಜ ಸುಧಾರಕರು. ಬಸವಣ್ಣನವರ ಸಮಾನತೆಯ ತತ್ವವನ್ನು ಸಂಸ್ಥೆಯಲ್ಲಿ ಪಾಲಿಸುತ್ತಿದ್ದೇವೆ. ಪುರುಷ ಪ್ರಧಾನ ಅನೇಕ ರಾಷ್ಟ್ರಗಳಲ್ಲಿ ಇನ್ನೂ ಮಹಿಳೆಯರಿಗೆ ಮತದಾನದ ಹಕ್ಕು ಲಭಿಸಿಲ್ಲ. ಮಹಿಳೆಯರು ಯಾವುದರಲ್ಲಿಯೂ ಹಿಂದೆ ಬಿದ್ದಿಲ್ಲ ಎಂದರು.

Home add -Advt

ವೈದ್ಯಕೀಯ, ಮಿಲಟರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಇದ್ದಾರೆ. ಪೈಲಟ್ ಕೂಡ ಆಗಿ ಯುದ್ದದಲ್ಲಿ ಮುಂದೆ ನಿಂತು ಹೋರಾಟ ಮಾಡುತ್ತಾರೆ. ಸ್ವಾಭಿಮಾನದಿಂದ ದುಡಿದು ಹಣ ಗಳಿಸಿದರೆ ಹೆದರಿಕೆ ಇರುವುದಿಲ್ಲ. ಪುರುಷ ಪ್ರಧಾನ ಸಮಾಜ ತಾನಾಗಿಯೇ ಕೊನೆಗಾಣುತ್ತದೆ. ಕೆಎಲ್‌ಇ ಸಂಸ್ಥೆಯಲ್ಲಿ ಕಾರ‍್ಯನಿರ್ವಹಿಸುವ ಮಹಿಳಾ ನೌಕರರ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದರು.

ಉತ್ತರ ಪ್ರದೇಶ ಬುಂದೇಲಖಂಡದ ಗುಲಾಬಿ ಗ್ಯಾಂಗ್ ಸಂಸ್ಥಾಪಕಿ ಸಂಪತ್ ಪಾಲ ಮಾತನಾಡಿ, ಈ ಭಾಗದ ಮಹಿಳೆಯರು ಸಶಕ್ತರಿದ್ದಾರೆ. ದೇಶಸೇವೆಯಲ್ಲಿ ನಿರತರಾದ ಸೈನಿಕರಿಗೆ ತಾಯಂದಿರ ಆಶೀರ್ವಾದವಿದೆ. ಅನ್ಯಾಯಕ್ಕೆ ತಲೆಬಾಗದೇ ಅದರ ವಿರುದ್ದ ಹೋರಾಟ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸ್ವಾವಲಂಬಿ ಜೀವನ ಮಹಿಳೆರದ್ದಾಗಬೇಕು. ಉತ್ತರ ಭಾರತವನ್ನು ಈ ಭಾಗಕ್ಕೆ ಹೋಲಿಸಿದರೆ ಇಲ್ಲಿ ಹೆಚ್ಚು ಸುಶಿಕ್ಷಿತರು ಸಿಗುತ್ತಾರೆ. ಅದರಂತೆ ಇಲ್ಲಿನವರು ಹೆಚ್ಚು ಸಶಕ್ತರಾಗಿದ್ದಾರೆ. ಸಮಾಜ ಮತ್ತು ಸರಕಾರವನ್ನು ರಚಿಸುವಲ್ಲಿ ಮಹಿಳೆ ಪ್ರಮುಖ ಪಾತ್ರವನ್ನು ವಹಿಸುತ್ತಾಳೆ. ಜನ್ಮ ನೀಡಿದ ಮಗುವಿಗೆ ಸಂಸ್ಕಾರ ಕಲಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಯನ್ನಾಗಿ ಮಾಡುವಲ್ಲಿ ಅವಳ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಮಹಿಳೆಗೆ ಮಹಿಳೆಯೇ ವೈರಿಯಾಗಿದ್ದಾಳೆ. ಅತ್ತೆಯು ತನ್ನ ಸೊಸೆಯನ್ನು ಮಗಳಂತೆ ಕಾಣುವುದಿಲ್ಲ, ಸೊಸೆ ಅತ್ತೆಯನ್ನು ತಾಯಿಯಂತೆ ಕಾಣುವುದಿಲ್ಲ. ಇದರಿಂದ ಅವರಿಬ್ಬರ ನಡುವೆ ವೈರತ್ವ ಬೆಳೆಯುತ್ತದೆ ಎಂದರು.

ಬಾಲ್ಯವಿವಾಹದಿಂದ ಗುಲಾಮಿ ಪದ್ದತಿ ಹೆಚ್ಚಿತ್ತು. ಆದರೆ ಇಂದು ಅದು ಕಡಿಮೆಯಾಗಿದ್ದರೂ, ಅಲ್ಲಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದು, ಮಹಿಳೆ ಶೊಷಣೆಗೊಳಗಾಗುತ್ತಿದ್ದಾಳೆ ಎಂದು ವಿಷಾಧ ವ್ಯಕ್ತಪಡಿಸಿದ ಅವರು, ನಾನು ಯಾವುದೇ ಪಕ್ಷ ಕಟ್ಟಲು ಗುಲಾಬಿ ಗ್ಯಾಂಗ್ ಕಟ್ಟಿಲ್ಲ. ಮಹಿಳೆಯ ಶೋಷೆಣೆ ವಿರುದ್ದ ಹಾಗೂ ಅವರ ಹಕ್ಕಿನ ಅರಿವು ಮುಡಿಸುವ ಕಾರ‍್ಯ ಮಾಡಲಾಗುತ್ತಿದೆ. ಲಖೌನದಲ್ಲಿ ಮಹಿಳೆಗೆ ಅನ್ಯಾಯವಾದಾಗ ಗುಲಾಬಿ ಸೀರೆ ಹಾಕಿಕೊಂಡು ಹೋರಾಟ ನಡೆಸಿದ ಪರಿಣಾಮ, ಸದ್ಯಕ್ಕೆ ಎಲ್ಲ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ನ್ಯಾಯಾಧೀಶರು ನನ್ನ ಮಾತು ಕೇಳುತ್ತಾರೆ. ಎಲ್ಲ ಕ್ಷೇತ್ರಗ ಳಲ್ಲಿ ಶೇ. ೫೦ರಷ್ಟು ಮೀಸಲಾತಿ ನೀಡಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ ಆ ಹಕ್ಕಿಗಾಗಿ ಮಹಿಳೆಯರೇಕೆ ಭಿಕ್ಷೆ ಬೇಡಬೇಕು ಎಂದು ಪ್ರಶ್ನಿಸಿದರು.

ಗ್ರಾಮೀಣ ಮಹಿಳೆಯರ ಬ್ಯಾಂಕ್ ಪಾಸ್‌ಬುಕ್ ತನ್ನ ಪತಿಯ ಹತ್ತಿರ ಇರುತ್ತದೆ. ಮೀಸಲಾತಿ ಎಲ್ಲಿಂದ ಬಂತು. ಮಹಿಳೆ ಅದನ್ನು ಹೋರಾಡಿ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಧಾನ ಹೊರಹಾಕಿದರು.

ವೇದಿಕೆಯ ಮೇಲೆ ಕೆಎಲ್‌ಇ ಸಂಸ್ಥೆಯ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಆಶಾತಾಯಿ ಕೋರೆ, ಡಾ. ಪ್ರೀತಿ ದೊಡವಾಡ, ಜೆಎನ್‌ಎಂಸಿ ಪ್ರಾಚಾರ‍್ಯೆ ಎನ್ ಎಸ್ ಮಹಾಂತಶೆಟ್ಟಿ, ಡಾ. ವಿ ಡಿ ಪಾಟೀಲ, ಅಲ್ಕಾ ಕಾಳೆ, ಡಾ ರೇಣುಕಾ ಮೆಟಗುಡ್ ಮುಂತಾದವರು ಉಪಸ್ಥಿತರಿದ್ದರು.

(ಪ್ರಗತಿವಾಹಿನಿ ಸುದ್ದಿಗಳನ್ನು ಗ್ರುಪ್ ಗಳಿಗೆ ಶೇರ್ ಮಾಡಿ)

Related Articles

Back to top button