ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮೊದ ಮೊದಲು ಭಾಷಣಕ್ಕೆ ಯಾರೂ ಹಣಕೊಟ್ಟು ಬರುತ್ತಿರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಮಾತು ಕೇಳಲು ಹಣಕೊಟ್ಟು ಸಾವಿರಾರು ಜನ ಬರುತ್ತಿದ್ದಾರೆ. ಮಾತುಗಾರಿಕೆ ಇಂದು ಉದ್ದಿಮೆಯಾಗುತ್ತಲಿದೆ. ಭಾಷಣವನ್ನು ಹಣಕೊಟ್ಟು ಕೇಳುವ ಹಂತಕ್ಕೆ ಏರಿಸಿದ ಶ್ರೇಯಸ್ಸು ಹಾಸ್ಯ ಭಾಷಣಕಾರರಿಗೆ ಸಲ್ಲುತ್ತದೆ ಎಂದು ಖ್ಯಾತ ನಗೆಮಾತುಗಾರ ಗಂಗಾವತಿ ಬಿ. ಪ್ರಾಣೇಶ ಹೇಳಿದರು.
ನೆಹರು ನಗರದ ಜೀರಗೆ ಸಭಾಭವನದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿ ಮಿಡ್ಟೌನ್ ವತಿಯಿಂದ ಹಮ್ಮಿಕೊಳ್ಳಲಾದ ’ಯುಗದ ನಗೆ’ ಹಾಸ್ಯ ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು.
ರಾಜಹಾಸ್ಯವೆಂದರೆ ಸುಮ್ಮನೆ ನಕ್ಕು ಮರೆಯುವಂತಹದ್ದಲ್ಲ. ಚಿಂತನೆಗೆ ಹಚ್ಚುವಂಥದ್ದು. ನನ್ನ ಗುರುಗಳಾದ ಬೀಚಿ, ಟಿ.ಪಿ. ಕೈಲಾಸಂ ಅವರ ಸಾಹಿತ್ಯದಲ್ಲಿ ನಾವು ರಾಜಹಾಸ್ಯವನ್ನು ಕಾಣಬಹುದು. ನನ್ನನ್ನು ಒಬ್ಬ ಹಾಸ್ಯ ಭಾಷಣಕಾರನನ್ನಾಗಿ ರೂಪಿಸಿದ್ದೇ ಬೀಚಿಯವರ ಸಾಹಿತ್ಯ ಎಂದು ಹೇಳಿದರು.
ಮಾತೃಭಾಷೆ ಸ್ವಂತ ಶಬ್ದಸೃಷ್ಟಿ ಮಾಡುವ ಶಕ್ತಿಯನ್ನು ಹೊಂದಿದೆ. ಮಾತೃಭಾಷೆ ಭಾಷಾ ಸಂಸ್ಕೃತಿಯನ್ನು ಕಲಿಸುತ್ತದೆ. ಕನ್ನಡ ಶಾಲೆಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ಕೊಡುತ್ತವೆ. ಪಾಲಕರು ಅದರಲ್ಲಿಯೂ ತಾಯಂದಿರು ಇಂಗ್ಲಿಷ್ ಭಾಷಾ ವ್ಯಾಮೋಹದಿಂದ ಹೊರಬಂದು ಮಕ್ಕಳನ್ನು ಕನ್ನಡ ಶಾಲೆಗಳಲ್ಲಿ ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಹೇಳಿದರು.
ನಗೆಮಾತುಗಾರ ಬಸವರಾಜ ಮಹಾಮನಿ ಮಾತನಾಡಿ, ಕನ್ನಡ ಭಾಷೆಯೊಂದನ್ನೇ ಬಲ್ಲ ನಾನು ಹಲವಾರು ದೇಶಗಳನ್ನು ಸುತ್ತಿ ಬಂದೆ. ಉತ್ತರ ಕರ್ನಾಟಕದ ಭಾಷೆ ಅತ್ಯದ್ಭುತ. ಈ ಭಾಷೆಯ ಸೊಗಡೇ ನನ್ನನ್ನು ಹಲವಾರು ದೇಶಗಳನ್ನು ಸುತ್ತಾಡಿಸಿತು. ಮಂಗಳೂರು, ಉಡುಪಿ, ಬೆಂಗಳೂರು ಹೀಗೆ ಬೇರೆ ಬೇರೆ ಕನ್ನಡ ಮಾತುಗಳನ್ನು ಕೇಳುತ್ತೇವೆ. ಭಾಷೆಗಿಂತ ಹಿಂದಿರುವ ಭಾವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಹಾಸ್ಯ ಗಾರುಡಿಗ ರವಿ ಭಜಂತ್ರಿ ಮಾತನಾಡಿ, ಸಹನೆಗೆ ಮತ್ತೊಂದು ಹೆಸರು ಭಾರತೀಯ ನಾರಿ. ಎಲ್ಲವನ್ನೂ ಸಹಿಸಿಕೊಳ್ಳುತ್ತಲೇ ಹೋಗುತ್ತಾಳೆ. ತನಗೆ ಬೇಕಾದ ಸೀರೆಯನ್ನಾರಿಸುವಾಗ ಮೀನ ಮೇಷ ಎಣಿಸುವ ಹೆಣ್ಣು ಹಿರಿಯರು ನಿರ್ಧರಿಸಿದ ಗಂಡನನ್ನೇ ತನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಾಳೆ. ಇದು ನಮ್ಮ ದೇಶದ ಸಂಸ್ಕೃತಿ. ಗಂಡನ ಆಯ್ಕೆಯನ್ನು ಹೆಣ್ಣಿಗೇ ಬಿಟ್ಟಿದ್ದರೆ ನಮ್ಮದಾರದ್ದೂ ಮದುವೆಯಾಗುತ್ತಿರಲಿಲ್ಲ ಎಂದು ತಮ್ಮ ನವಿರಾದ ಹಾಸ್ಯದೊಂದಿಗೆ ಹೆಣ್ಣಿನ ಸಹನಾಗುಣದ ಗುಣಗಾನ ಮಾಡಿದರು.
ಇಂದೂಮತಿ ಸಾಲಿಮಠ ಮಾತನಾಡಿ, ವಾಟ್ಸಾಪ್, ಫೇಸ್ ಬುಕ್ನಿಂದಾಗಿ ಯುವಕ, ಯುವತಿಯರು ದಾರಿತಪ್ಪುತ್ತಿದ್ದಾರೆ. ಇದರಿಂದ ಪಾಲಕರು ಎಚ್ಚರಿಕೆಯಿಂದಿರಬೇಕಾದುದು ಅತ್ಯವಶ್ಯ ಎಂದರು.
ಇವೆಂಟ್ ಚೇರಮನ್ ಅಶೋಕ ಮಳಗಲಿ, ರೋಟರಿ ಕ್ಲಬ್ ಆಫ್ ಬೆಳಗಾವಿ ಮಿಡ್ ಟೌನ್ನ ಸಮಾಜಮುಖಿ ಕೆಲಸಗಳ ಕುರಿತು ವಿವರಿಸಿದರು. ಅಶೋಕ ಬದಾಮಿ, ರವಿ ಇಂಚಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ