Kannada NewsKarnataka NewsLatest

*ಮೃತ ಪರಶುರಾಮ್‌ ಕುಟುಂಬದ ಜೊತೆ ನಿಂತು ಹೋರಾಡುವುದಾಗಿ ಧೈರ್ಯ ತುಂಬಿದ ಆರ್‌.ಅಶೋಕ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದಿಂದ ನೊಂದು ಮೃತರಾದ ಪಿಎಸ್‌ಐ ಪರಶುರಾಮ್‌ ಮನೆಗೆ ಭಾನುವಾರ ಭೇಟಿ ನೀಡಿದ ಪ್ರತಿಪಕ್ಷ ನಾಯಕ ಆರ್‌.ಅಶೋಕ, ಸರ್ಕಾರದ ಈ ಅನ್ಯಾಯದ ವಿರುದ್ಧ ಬಿಜೆಪಿ ತೀವ್ರವಾಗಿ ಹೋರಾಟ ಮಾಡಲಿದೆ, ಈಗಾಗಲೇ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಈ ಹೋರಾಟವನ್ನೂ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ. 

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಪರಶುರಾಮ್‌ ಅವರ ಕುಟುಂಬ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಮೃತ ಪರಶುರಾಮ್‌ ಅವರ ಪತ್ನಿ 9 ತಿಂಗಳ ಗರ್ಭಿಣಿಯಾಗಿದ್ದರೂ ಪೊಲೀಸರು ಎಫ್‌ಐಆರ್‌ ದಾಖಲಿಸದೆ 12-13 ಗಂಟೆಗಳ ಕಾಲ ಕಾಯಿಸಿದ್ದಾರೆ. ದಲಿತ ಕುಟುಂಬದಿಂದ ಬಂದ ಹೆಣ್ಣುಮಗಳನ್ನು ಈ ಸರ್ಕಾರ ಕೆಟ್ಟದಾಗಿ ನಡೆಸಿಕೊಂಡಿದೆ. ಅನ್ಯಾಯ ನೋಡಿಕೊಂಡು ಸುಮ್ಮನಿರುವ ಅಧಿಕಾರಿ ವರ್ಗವನ್ನು ನೋಡಿದರೆ ಇನ್ನೂ ಯಾವ ಯುಗದಲ್ಲಿದ್ದೇವೆ ಎಂದು ಅಚ್ಚರಿಯಾಗುತ್ತದೆ ಎಂದರು. 

ಶಾಸಕ ಚನ್ನಾರೆಡ್ಡಿ ಪಾಟೀಲ್‌ ದಲಿತರು ಇಲ್ಲಿರಬಾರದು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ದಲಿತರು ತಮ್ಮ ಪ್ರದೇಶದಲ್ಲಿ ಇರಬಾರದು ಎನ್ನುವುದು ದೊಡ್ಡ ಅಪರಾಧ ಹಾಗೂ ಸಂವಿಧಾನ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ಗೆ ಮಾಡಿದ ಅಪಮಾನ. ಎಲ್ಲ ಜನಾಂಗಗಳು ಸಂವಿಧಾನ ಅಡಿಯಲ್ಲಿದೆ. ಇಂತಹ ನೀಚತನವನ್ನು ಯಾರೂ ಸಹಿಸುವುದಿಲ್ಲ. ದಲಿತ ಎಂಬ ಪದ ಬಳಸಿದ್ದಕ್ಕೆ ಸದನದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಇಲ್ಲಿ ದಲಿತರನ್ನು ನಿಂದಿಸಲಾಗಿದೆ ಎಂದರು. 

ಈ ಪ್ರಕರಣದಲ್ಲಿ ಮಿತಿ ಮೀರಿದ ಲಂಚಾವತಾರ ಕಂಡುಬಂದಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎಂಬಂತೆ, ಹಿರಿಯರೇ ಭ್ರಷ್ಟಾಚಾರದಲ್ಲಿ ತೊಡಗಿರುವಾಗ ಶಾಸಕರೂ ಅದನ್ನೇ ಅನುಸರಿಸಿದ್ದಾರೆ. ಈ ಸರ್ಕಾರ ಬಂದ ನಂತರ ದಲಿತರೇ ಗುರಿಯಾಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಪಿ.ಚಂದ್ರಶೇಖರನ್‌ ಉತ್ತಮ ಅಧಿಕಾರಿ ಎಂಬ ಬಹುಮಾನ ಪಡೆದಿದ್ದಾರೆ. ಅವರು ಭ್ರಷ್ಟಾಚಾರಕ್ಕೆ ಸಹಕಾರ ನೀಡಿಲ್ಲವೆಂದು ಒತ್ತಡ ಹೇರಲಾಗಿದೆ. ಈಗ ಪರಶುರಾಮ್‌ ಮೇಲೆ ಲಂಚಕ್ಕಾಗಿ ಒತ್ತಡ ಹೇರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹಣ ಕೊಟ್ಟಿಲ್ಲವೆಂದರೆ ಪ್ರತಿ ಇಲಾಖೆಯಲ್ಲೂ ಪೋಸ್ಟಿಂಗ್‌ ಸಿಗುವುದಿಲ್ಲ. ನಮ್ಮ ಸರ್ಕಾರವಿದ್ದಾಗ ಪಿಎಸ್‌ಐ ನೇಮಕಾತಿ ಹಗರಣವನ್ನು ತನಿಖೆಗೆ ವಹಿಸಲಾಯಿತು. ನಂತರ ಹಿರಿಯ ಅಧಿಕಾರಿಗಳನ್ನೂ ಬಿಡದೆ ಬಂಧಿಸಲಾಯಿತು. ಇದರಲ್ಲಿ ನಾವು ಲಂಚ ಹೊಡೆದಿದ್ದೇವೆಂದು ಕಾಂಗ್ರೆಸ್‌ ಅಪಪ್ರಚಾರ ಮಾಡಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ 30 ಲಕ್ಷ ರೂ. ಫಿಕ್ಸ್‌ ಮಾಡಿ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು. 

ಕುಟುಂಬಕ್ಕೆ ಸಾಂತ್ವನ

ಮೃತ ಪರಶುರಾಮ್‌ ಕುಟುಂಬದವರೊಂದಿಗೆ ಮಾತನಾಡಿದ ಆರ್‌.ಅಶೋಕ, ನಾನು ಕಂದಾಯ ಸಚಿವನಾಗಿದ್ದಾಗ ದಲಿತ ಅಧಿಕಾರಿಯೇ ನನ್ನ ವಿಶೇಷ ಅಧಿಕಾರಿಯಾಗಿದ್ದರು. ದಲಿತರನ್ನು ಅಪಮಾನಿಸುವುದು ದೊಡ್ಡ ಅಪರಾಧ. ನಾನು ನಿಮ್ಮ ಜೊತೆ ನಿಂತು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ. ಈ ಕುರಿತು ಗೃಹ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಉತ್ತರಕೊಡಿ ಸಿದ್ದರಾಮಯ್ಯ: ಆರ್. ಅಶೋಕ ಡಬಲ್ ಟ್ವೀಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button