Latest

ಮೈತ್ರಿ ಮುರಿದು ಬಿದ್ದರೆ ಮುಂದಿನ ದಾರಿ ಏನು?; ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ?

ಪ್ರಗತಿ ಮೀಡಿಯಾ ಹೌಸ್, ಬೆಳಗಾವಿ

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಕರ್ನಾಟಕದ ಮೈತ್ರಿ ಸರಕಾರ ಪತನವಾಗಲಿದೆಯೇ? ಸರಕಾರ ಬಿದ್ದರೆ ಮುಂದಿನ ದಾರಿಗಳೇನು? -ಇದು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಯ ವಿಷಯವಾಗಿದೆ.

ಸರಕಾರ ಬೀಳುವುದಿದ್ದರೆ ಅದಕ್ಕೆ ಲೋಕಸಭಾ ಚುನಾವಣೆಯ ಫಲಿತಂಶ ಕಾರಣವಾಗಲಿದೆಯೇ? ಮಿತ್ರ ಪಕ್ಷಗಳ ನಡುವಿನ ಹೊಂದಾಣಿಕೆ ಕೊರತೆ ಕಾರಣವಾಗಲಿದೆಯೇ? ಆಪರೇಶನ್ ಕಮಲ ಕಾರಣವಾಗಬಹುದೇ? ಕಾಂಗ್ರೆಸ್ ನಲ್ಲಿನ ಅತೃಪ್ತರು ಕಾರಣವಾಗಲಿದ್ದಾರೆಯೇ? ಅಥವಾ ಕಾಂಗ್ರೆಸ್ ನಲ್ಲಿನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಕಾರಣವಾಗಬಹುದೆ? -ಈ ಎಲ್ಲ ಚರ್ಚೆಗಳು ತೀವ್ರ ತರವಾಗಿ ನಡೆಯುತ್ತಿವೆ. 

ಸರಕಾರ ಬಿದ್ದರೆ ಮುಂದಿನ ಆಯ್ಕೆಗಳೇನು? ಮಧ್ಯಂತರ ಚುನಾವಣೆ ನಡೆಯಬಹುದೆ? ಬಿಜೆಪಿ ಸರಕಾರ ರಚಿಸಲಿದೆಯೇ?  ಜೆಡಿಎಸ್-ಬಿಜೆಪಿ ಹೊಸ ಮೈತ್ರಿ ಅಧಿಕಾರಕ್ಕೆ ಬರಲಿದೆಯೇ? ಈ ಎಲ್ಲ ಪ್ರಶ್ನೆಗಳು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತಿವೆ.

ಬಿಜೆಪಿಯನ್ನು ದೂರವಿಡುವ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯ ಮೊದಲಿನಿಂದಲೂ ಸಂಬಂಧ ಅಷ್ಟಕ್ಕಷ್ಟೆ. ಚುನಾವಣೆಗೂ ಮುನ್ನ ಏನು ಬೇಕಾದರೂ ಆರೋಪ-ಪ್ರತ್ಯಾರೋಪ ಮಾಡಿಕೊಡಿದ್ದಾರೆ. ಈಗಲೂ ಒಳಗೊಳಗೆ ಅಸಮಾಧಾನ ತೀವ್ರವಾಗಿದೆ. ಆದರೂ ಅಧಿಕಾರಕ್ಕಾಗಿ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ.

ಪ್ರಸ್ತುತ ಸರಕಾರದಲ್ಲಿ ಅಧಿಕಾರ ಕೇಂದ್ರಗಳು ಬಹಳ ಇವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೀಗೆ ಹಲವರು ಅಧಿಕಾರ ಚಲಾಯಿಸುತ್ತಿದ್ದಾರೆ. ಇದು ಸಹ ಸಮ್ಮಿಶ್ರ ಸರಕಾರದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. 

ಇನ್ನು ನಾಯಕರು ಹೊಂದಿಕೊಂಡರೂ ಅನೇಕ ಕಡೆ ಕಾರ್ಯಕರ್ತರು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತರ ಮಧ್ಯ ಮಾರಾಮಾರಿ ಹಂತದವರೆಗೂ ಹೋಗಿದ್ದಿದೆ. ಇನ್ನು ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಇದು ಇನ್ನಷ್ಟು ಮಿತಿ ಮೀರುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ವೇಳೆ ಅನೇಕ ಕಡೆ ಕಾರ್ಯಕರ್ತರ ಹೊಂದಾಣಿಕೆ ಕೊರತೆ ಕಾಣಿಸಿಕೊಂಡಿದೆ. 

ಹಲವಾರು ಮಂತ್ರಿಗಳಲ್ಲೇ ತೀವ್ರ ಅಸಮಾಧಾನ, ಅತೃಪ್ತಿ ಇದೆ. ನಿಗಮ ಮಂಡಳಿಗಳ ಆಕಾಂಕ್ಷಿಗಳಲ್ಲಿ ಸಹ ಅಸಮಾಧಾನವಿದೆ. ಇದರೊಂದಿಗೆ ಈಗಾಗಲೆ ಕೆಲವರು ಬಿಜೆಪಿ ಜೊತೆಗೆ ಸಂಪರ್ಕದಲ್ಲಿದ್ದಾರೆ. ಹಾಗಾಗಿ ಈ ಎಲ್ಲ ಕಾರಣಗಳಿಂದಾಗಿ ಸರಕಾರ ಬೀಳಬಹುದು ಎನ್ನುವುದು ಲೆಕ್ಕಾಚಾರ. 

ಸರಕಾರ ಬಿದ್ದರೆ ಮುಂದೇನು? ಬಿಜೆಪಿ ಸರಕಾರ ರಚಿಸಲಿದೆಯೇ? ಚುನಾವಣೆ ನಡೆಯಲಿದೆಯೇ? ಎನ್ನುವ ಪರಶ್ನೆಯ ಜೊತೆಗೆ ಇದೀಗ ಹೊಸದೊಂದು ಲೆಕ್ಕಾಚಾರ, ಯೋಜನೆಯ ಕುರಿತು ಚರ್ಚೆ ನಡೆಯುತ್ತಿದೆ. ಅದು ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ. 

ಕಾಂಗ್ರೆಸ್ ಜೊತೆಗಿನ ಮೈತ್ರಿ ಮುರಿದು ಬಿದ್ದರೆ ಜೆಡಿಎಸ್ ಬಿಜೆಪಿ ಜೊತೆಗೆ ಹೊಗಲಿದೆ ಎನ್ನುವ ಚರ್ಚೆ ಈಗ ರಾಜ್ಯದಲ್ಲಿ ತೀವ್ರವಾಗಿದೆ. ಇದಕ್ಕೆ ಈಗಾಗಲೆ ಒಳ ತಯಾರಿ ನಡೆದಿದೆ ಎನ್ನಲಾಗುತ್ತಿದೆ. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಉಪಮುಖ್ಯಮಂತ್ರಿಯಾಗಲಿದ್ದಾರೆ. ಈ ಬಗ್ಗೆ ಒಂದು ಹಂತದಲ್ಲಿ ಮಾತುಕತೆಯೂ ನಡೆದಿದೆ ಎನ್ನುವ ವದಂತಿ ಹರಡಿದೆ. 

ಇವೆಲ್ಲವೂ ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುವವರೆಗೂ ಅಂತೆ ಕಂತೆಗಳೇ ಆಗಲಿವೆ. ಫಲಿತಾಂಶ ಬಂದ ನಂತರ ರಾಜ್ಯದಲ್ಲಿ ರಾಜಕೀಯ ಧೃವೀಕರಣದ ಲಕ್ಷಣವಂತೂ ಈಗಲೇ ಗೋಚರಿಸುತ್ತಿದೆ. ಅದು ಸರಕಾರ ಬೀಳುವ ಮಟ್ಟಕ್ಕೆ ಹೋಗಲಿದೆಯೋ… ಮತ್ತೇನಾದರೂ ಬದಲಾವಣೆಗೆ ಕಾರಣವಾಗಲಿದೆಯೋ  ಕಾದು ನೋಡಬೇಕಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button