ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬ್ರಿಟಿಷ್ ಕಾಲದ 1200 ಹಳೆ ಕಾನೂನುಗಳನ್ನು ಗುರುತಿಸಿ ಕಳೆದ 5 ವರ್ಷದಲ್ಲಿ ರದ್ದುಪಡಿಸಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ, ನ್ಯಾಯವಾದಿ ಎಂ.ಬಿ. ಜಿರಲಿ ತಿಳಿಸಿದರು.
ಪತ್ರಿಕಾಗಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಸರಕಾರದ ಆಡಳಿತಾವಧಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಸುದೀರ್ಘ ಅವಧಿ ಆಡಳಿತ ನಡೆಸಿದರೂ ಬ್ರಿಟಿಷರ್ ಕಾಲದ 1300 ಕಾನೂನುಗಳನ್ನು ಮಾತ್ರ ರದ್ದು ಮಾಡಿತ್ತು. ಆದರೆ, ಮೋದಿ ಸರಕಾರ ಕೇವಲ ಐದು ವರ್ಷದಲ್ಲಿ ಅಭಿವೃದ್ಧಿಗೆ ತೊಡಕಾಗುವ 1200 ಕಾನೂನುಗಳನ್ನು ರದ್ದು ಪಡಿಸಿದ್ದು, ಇನ್ನೂ 1800 ಕಾನೂನುಗಳನ್ನು ರದ್ದು ಮಾಡಲು ಗುರುತಿಸಲಾಗಿದೆ. ಇದರಿಂದ ನ್ಯಾಯಾಂಗ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದರು.
ನ್ಯಾಯಾಲಯದಲ್ಲಿ ಹತ್ತಾರು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ಕೇಸ್‍ಗಳನ್ನು ಪರಿಹರಿಸಲು ನರೇಂದ್ರ ಮೋದಿ ಸರಕಾರ ನ್ಯಾಯಾಂಗ ವಲಯದಲ್ಲಿ ಖಾಲಿ ಇರುವ ಎಲ್ಲ ಹಂತದ ಹುದ್ದೆಗಳು, ನ್ಯಾಯಾಧೀಶರ ನೇಮಕಾತಿಗಳಿಗೆ ಚಾಲನೆ ನೀಡಿದೆ. ಎನ್‍ಡಿಎ ಸರಕಾರ ನ್ಯಾಯಾಂಗ ವ್ಯವಸ್ಥೆ ಬಲಿಷ್ಠಗೊಳಿಸಲು ಎಲ್ಲ ರೀತಿ ಕ್ರಮಕೈಗೊಂಡಿದೆ ಎಂದರು.
ಮುಸ್ಲಿಂ ಧರ್ಮದ ಮಹಿಳೆಯರ ಹಿತದೃಷ್ಟಿಯಿಂದ ತಲಾಕ್ ರದ್ದುಪಡಿಸಲು ಮೋದಿ ಸರಕಾರ ಐತಿಹಾಸಿಕ ಹೆಜ್ಜೆಯಿಟ್ಟು ಲೋಕಸಭೆಯಲ್ಲಿ ಮಸೂದೆ ಪಾಸು ಮಾಡಿತ್ತು. ಆದರೆ, ರಾಜ್ಯಸಭೆಯಲ್ಲಿ ಬಹುಮತದ ಕೊರತೆಯಿಂದ ಮಸೂದೆ ಪಾಸಾಗಲಿಲ್ಲ. ಇದನ್ನು ರಾಷ್ಟ್ರಪತಿ ಮೂಲಕ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಬಾಂಗ್ಲಾದೇಶದ ಗಡಿ ಪ್ರದೇಶದಿಂದ ಅಕ್ರಮ ನುಸುಳುಕೋರರ ದೇಶದಲ್ಲಿ ಪ್ರವೇಶ ಮಾಡುತ್ತಿದ್ದರು. ಇದನ್ನು ಮೋದಿ ಸರಕಾರ ದಿಟ್ಟ ಕ್ರಮಕೈಗೊಂಡು ನುಸುಳುಕೋರರ ಅಕ್ರಮಕ್ಕೆ ತಡೆಹಾಕಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ದೇಶದ 30 ಕೋಟಿ ಮುಸ್ಲಿಂ ಸಮುದಾಯದ ಮೇಲೆ ದೇಶದ ಭವಿಷ್ಯ ಅವಲಂಬನೆಯಾಗಿದೆ ಎಂಬ ಹೇಳಿಕೆ ನೀಡಿ ಹಿಂದೂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ದೇಶ ವಿಭಜನೆ ಮಾಡುವ, ಸಂವಿಧಾನಕ್ಕೆ ಅಗೌರವ ತೋರಿಸುವ ಹೇಳಿಕೆ ನೀಡಿದ್ದಾರೆ. ಕೂಡಲೇ ದೇವೇಗೌಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮಹಾನಗರದ ಘಟಕ ಅಧ್ಯಕ್ಷ ರಾಜೇಂದ್ರ ಹರಕುಣಿ ಮಾತನಾಡಿ, ರಾಜಸ್ಥಾನದ ಮಾಜಿ ಸಚಿವೆ ಕಿರಣ ಮಹೇಶ್ವರಿ ಅವರು ಏ.13 ರಂದು ಬೆಳಗ್ಗೆ 9 ಗಂಟೆಗೆ ಶಹಾಪುರದ ರಾಜಸ್ಥಾನಿ ಸಮುದಾಯ ಭವನದಲ್ಲಿ ರಾಜಸ್ಥಾನಿ ಜನರ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಬಸವರಾಜ ರೊಟ್ಟಿ, ಹನುಮಂತ ಎಚ್. ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ