ಹಾಗೇ ಸುಮ್ಮನೆ…
ಸುಮನ್ ಸುಬ್ಬರಾವ್
ಕ್ಲಾಸ್ ಮುಗಿಸಿ ಮನೆಗೆ ಮರಳುತ್ತಿದ್ದೆ. ಮಧ್ಯಾಹ್ನ 12.30, ಸುಡು ಸುಡು ಬಿಸಲು. ನೆತ್ತಿ ಕಾದು ದೇಹದ ನೀರೆಲ್ಲ ಬಸಿದು ಹೋಗಿ ಕುಸಿದು ಬೀಳುತ್ತೀನೇನೋ ಅನಿಸುತ್ತಿತ್ತು. ಅಯ್ಯೋ, ಈ ಬುದ್ದಿವಂತ ಮನುಷ್ಯರು ಕಾಡನ್ನು ಕಡಿದು ಕಾಂಕ್ರೀಟ್ ನಾಡು ಮಾಡುತ್ತಿದ್ದಾರೆ. ಮಳೆ ಸರಿಯಾಗಿ ಇಲ್ಲ. ಅಂತರ್ಜಲ ಮಟ್ಟ ಕುಸಿದಿದೆ. ಹಳ್ಳಿಯ ಹೊಲದಲ್ಲಿ ಕಷ್ಟಪಟ್ಟು ದುಡಿಯುವುದು ಯಾರಿಗೂ ಬೇಡವಾಗುತ್ತಿದೆ. ಎಲ್ಲರೂ ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ಬರುತ್ತಿದ್ದಾರೆ. ಮುಂದಿನ ಜನರೇಶನ್ ಗೆ ನಾವು ಏನನ್ನೂ ಉಳಿಸುವುದಿಲ್ಲವೇನೋ… ನೀರು, ಉಸಿರಾಡುವ ಗಾಳಿಗೂ ಅವರು ಪರದಾಡಬೇಕಾಗಬಹುದು. ತಂತ್ರಜ್ಞಾನದ ನೆಪದಲ್ಲಿ ನಾವು ಅದೇನೇನು ಅನಾಹುತ ಮಾಡುತ್ತಿದ್ದೇವೆ. ಕಲುಷಿತ ನೀರು, ಕಲುಷಿತ ಗಾಳಿ, ಕಲುಷಿತ ಆಹಾರ ಸೇವಿಸಿ ನಾವೂ ಕಲುಷಿತರಾಗಿಬಿಟ್ಟಿದ್ದೇವೆ. ಇನ್ನೊಂದು ಹತ್ತು ವರ್ಷದಲ್ಲಿ ದೇಶದ ಪರಿಸ್ಥಿತಿ ಏನಾಗಬಹುದು? ಹೀಗೇ ಸಾಗಿತ್ತು ನನ್ನ ಯೋಚನಾ ಲಹರಿ….
ಅಷ್ಟರಲ್ಲಿ ಒಬ್ಬಳು ಹಣ್ಣು ಹಣ್ಣು ಮುಂದುಕಿ, 80-85ರ ಆಸುಪಾಸಿನಲ್ಲಿರಬಹುದು. ಬಾಳೆ ಹಣ್ರೀ ಎಂದು ಕೂಗುತ್ತಲೇ ಕುಸಿದು ಬಿದ್ದಳು. ದಾರಿಯಲ್ಲಿದ್ದವರೆಲ್ಲ ತಕ್ಷಣ ಓಡೋಡಿ ಬಂದು ಅವಳನ್ನೆತ್ತಿ ಪಕ್ಕಕ್ಕೆ ಕೂರಿಸಿದರು. ನಾನೂ ನನ್ನಲ್ಲಿರುವ ಬಾಟಲಿಯಿಂದ ನೀರು ಕುಡಿಸಿದೆ. ಆಕೆ ಸ್ವಲ್ಪ ಸುಧಾರಿಸಿಕೊಂಡ ನಂತರ, ಯಾಕಜ್ಜಿ, ಈ ವಯಸ್ಸಿನಲ್ಲಿ ಇಷ್ಟು ಭಾರವಾದ ಬಾಳೆಹಣ್ಣು ಬುಟ್ಟಿ ಎತ್ತಿಕೊಂಡು ಮಾರೋಕೆ ಬರ್ತೀಯಾ? ಆರಾಮವಾಗಿ ಮನೆಯಲ್ಲಿರಬಾರದಾ? ಎಂದೆ.
ಅದಕ್ಕವಳು, ಅಯ್ಯೋ ನನ್ನವ್ವ ಮನ್ಯಾಗ ಕೂತ್ಕೊಂಡ್ರೆ ನನ್ನ ಔಷಧಿ ಖರ್ಚು ಯಾರು ಕೊಡ್ತಾರೆ? ನನ್ನ ಮಗ -ಸೊಸೆ ನನ್ನ ಹೊಟ್ಟೆಗೆ ಹಾಕೋವಾಗ್ಲೆ ಗೊಣಗಾಡ್ತಾ ಹಾಕ್ತಾರೆ ಎಂದಳು ನಿಟ್ಟುಸಿರು ಬಿಡುತ್ತ. ನನಗೆ ಅಯ್ಯೋ ಎನಿಸಿತು. ಏನ್ಮಾಡ್ತಾನಜ್ಜಿ ಮಗಾ? ಎಂದೆ. ತನ್ನ ಕಥೆಯನ್ನೆಲ್ಲ ಹೇಳಿದಳು. ಮಗ ಗಾರೆ ಕೆಲಸ ಮಾಡ್ತಾನಂತೆ. ಸೊಸೆ ಯಾರದ್ದೋ ಮನೆಕೆಲಸಕ್ಕೆ ಹೋಗ್ತಾಳಂತೆ. ಮೊಮ್ಮಕ್ಕಳು ಶಾಲೆಗೆ ಹೋಗ್ತಾರಂತೆ…
ಆಗ ನಾನು, ಅಜ್ಜೀ ನಾನು ಒಂದು ಕಡೆ ಕರ್ಕೊಂಡು ಹೋಗ್ತೀನಿ. ಅಲ್ಲಿ ನಿನ್ನ ಹಾಗೆ ವಯಸ್ಸಾಗಿರೋರು ತುಂಬಾ ಜನ ಇದಾರೆ. ಅಲ್ಲಿ ವಾರಕ್ಕೊಮ್ಮ ಡಾಕ್ಟರ್ ಬಂದು ನಿನ್ನ ಆರೋಗ್ಯ ತಪಾಸಣೆ ಮಾಡ್ತಾರೆ. ಊಟ, ಬಟ್ಟೆ ಎಲ್ಲಾ ಕೊಟ್ಟು ನಿನ್ನ ಚೆನ್ನಾಗಿ ನೋಡ್ಕೋತಾರೆ. ನೀನು ಆರಾಮಾಗಿ ಇರಬಹುದು. ನಾನು ದುಡ್ಡು ಕೊಡ್ತೀನಿ, ಇರ್ತೀಯಾ ಅಲ್ಲಿ ಎಂದೆ.
ಈ ವಯಸ್ಸಿನಲ್ಲಿ ಮಗ, ಮೊಮ್ಮಕ್ಕಳನ್ನು ಬಿಟ್ಟು ಎಲ್ಲೋಗ್ಲಿ ತಾಯಿ? ಇರೋವಷ್ಟು ದಿವಸ ಹೇಗೋ ಮಗನ ಜೊತೆ ಇರ್ತೀನಿ. ಆಗೋವಷ್ಟು ದಿನ ಹಣ್ಣು ಮಾರ್ತೀನಿ. ಮಗನ್ನ ಬಿಟ್ಟು ನಾನೆಲ್ಲೂ ಹೋಗಲ್ಲ ಎಂದಳು ಕಡ್ಡಿ ಮುರಿದಂತೆ.
ಅಬ್ಬಾ, ದಂಗಾದೆ, ತಾಯಿ ವಾತ್ಸಲ್ಯಕ್ಕೆ. ಮುಂದಿನ ಜನರೇಶನ್ ಮಕ್ಕಳು ಏನು ಮಾಡಬಹುದು? ತಂದೆ, ತಾಯಿಯರು ತಾವಾಗಿಯೇ ವೃದ್ದಾಶ್ರಮ ಸೇರಿಬಿಡುತ್ತಾರೇನೋ ಬಹುಷಃ… ಮತ್ತೆ ಯೋಚನಾ ಲಹರಿ ಮುಂದುವರಿಯಿತು…
ಇದನ್ನೂ ಓದಿ-
ಅವರೆಲ್ಲರಿಗೂ ಇಂತಹ ರಾಜಕುಮಾರ ಸಿಗುವಂತಿದ್ದರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ