
ಪ್ರಗತಿವಾಹಿನಿ ಸುದ್ದಿ: ರಸಗೊಬ್ಬರ ವಿಚಾರದಲ್ಲಿ ರಾಜ್ಯ ಸರ್ಕಾರವು ಪೂರ್ವತಯಾರಿ ನಡೆಸಿಲ್ಲ. ತೊಗರಿ ಬೆಳೆಯುವ ಗುಲ್ಬರ್ಗ, ಬೇರೆ ಬೇರೆ ಬೆಳೆ ಬೆಳೆಯುವ ಗದಗ, ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ರಸಗೊಬ್ಬರ ಬೇಕೆಂಬ ಪೂರ್ವಾಪರ ಲೆಕ್ಕಾಚಾರ ಇಲ್ಲದೇ ರೈತರಿಗೆ ಆತಂಕದ ಸ್ಥಿತಿ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದುಪ್ಪಟ್ಟು ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟವಾಗುತ್ತಿದೆ. ಕಳ್ಳದಂಧೆಯೂ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಲ್ಲೆಲ್ಲ ದಲ್ಲಾಳಿಗಳ ಕಾಟವನ್ನು ಹಿಂದಿನಿಂದಲೂ ನೋಡುತ್ತ ಬಂದಿದ್ದೇವೆ. ರಸಗೊಬ್ಬರದ ವಿಷಯದಲ್ಲಿ ಕೃತಕ ಅಭಾವ ಸೃಷ್ಟಿ ಆಗಿದೆ ಎಂದು ದೂರಿದರು. ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದ್ದು ಈ ಬಗ್ಗೆ ಬಿಜೆಪಿ ಹೋರಾಟ ಮಾಡಲಿದೆ ಎಂದರು.
ರಸಗೊಬ್ಬರ ದಾಸ್ತಾನಿದೆ; ಕೊರತೆ ಇಲ್ಲ ಎಂದು ಕೃಷಿ ಸಚಿವರು ಮೊನ್ನೆ ಹೇಳಿದ್ದಾರೆ. ಹಾಗಿದ್ದೂ ರೈತರ ಹೋರಾಟ ಮುಂದುವರೆದಿದ್ದರೆ, ಇದರ ಹಿಂದೆ ರಾಜ್ಯ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ತಿಳಿಸಿದರು. ರೈತರಿಗೆ ತೊಂದರೆ ಆಗದ ರೀತಿಯಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.