ಪ್ರಗತಿವಾಹಿನಿ ಸುದ್ದಿ, ಲಕ್ನೋ:
ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣೆ ಆಯೋಗ ತೀರ್ಮಾನಿಸಿದೆ.
ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಲು ರಾಹುಲ್ ಗಾಂಧಿ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಬೇಕು. ಅವರು ಈ ಹಿಂದೆ ಬ್ರಿಟನ್ ಪ್ರಜೆ ಎಂದು ಅಫಿಡವಿಟ್ ಒಂದರಲ್ಲಿ ಉಲ್ಲೇಖಿಸಿದ್ದರು ಎಂದು ಅಮೇಥಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಧ್ರುವ್ ಲಾಲ್ ಆಕ್ಷೇಪಣೆ ಸಲ್ಲಿಸಿದ್ದರು.
ಈ ಆಕ್ಷೇಪಣೆಗೆ ರಾಹುಲ್ ಗಾಂಧಿ ಅವರ ವಕೀಲ ನೀಡಿರುವ ಉತ್ತರ ಸಮರ್ಪಕವಾಗಿದ್ದು, ಅಫಿಡವಿಟ್ ನಲ್ಲಿ ಯಾವುದೇ ಲೋಪ ದೋಷ ಕಂಡು ಬಂದಿಲ್ಲ. ನಾಮಪತ್ರ ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಅಮೇಥಿಯ ಚುನಾವಣಾಧಿಕಾರಿ ಹೇಳಿದ್ದಾರೆ.
ರಾಹುಲ್ ಗಾಂಧಿ ಭಾರತ ನಾಗರಿಕರೋ ಅಲ್ಲವೋ? ಯಾವಾಗಲಾದರೂ ಬ್ರಿಟಿಷ್ ನಾಗರಿಕರಾಗಿದ್ದರಾ? ಅವರು ಸತ್ಯ ಹೇಳಬೇಕಿದೆ. ರಾಹುಲ್ ಗಾಂಧಿ ಅವರು 2004ರಿಂದ ಸಲ್ಲಿಸುತ್ತಾ ಬಂದಿರುವ ಚುನಾವಣೆ ಅಫಿಡವಿಟ್ ನಲ್ಲಿ ರೌಲ್ ವಿನ್ಸಿ ಎಂಬ ಹೆಸರಿನಲ್ಲೇ ಪದವಿ ಪ್ರಮಾಣ ಪತ್ರ ಇದೆ. ರಾಹುಲ್ ಗಾಂಧಿ ಅವರಿಗೆ ಬೇರೆ ದೇಶಗಳಲ್ಲಿ ಬೇರೆ ಹೆಸರುಗಳಿವೆಯಾ ಅಂತ ನಾವು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ಪ್ರತಿಕ್ರಿಯಿಸಿದ್ದರು.
ಧ್ರುವ್ ಲಾಲ್ ಸಲ್ಲಿಸಿದ ಆಕ್ಷೇಪದಲ್ಲಿ ಕೇಂಬ್ರಿಡ್ಜ್ ವಿ.ವಿ. ನೀಡಿದ ಪ್ರಮಾಣ ಪತ್ರವನ್ನು ಲಗತ್ತಿಸಲಾಗಿತ್ತು. ಅದರಲ್ಲಿ ಮಿಸ್ಟರ್ ರೌಲ್ ವಿನ್ಸಿ ಅವರು ಡೆವಲಪ್ ಮೆಂಟ್ ಸ್ಟಡೀಸ್ ನಲ್ಲಿ ಎಂ.ಫಿಲ್., ಅನ್ನು 2004-05ರಲ್ಲಿ ಸರಾಸರಿ 62.88% ಪಡೆದು, ಅಂದರೆ ತೇರ್ಗಡೆ ಆಗಲು ಬೇಕಾದ ಶೇ 60ಕ್ಕಿಂತ ಹೆಚ್ಚು ಅಂಕದೊಂದಿಗೆ 2004-05ರ ಶೈಕ್ಷಣಿಕ ವರ್ಷದಲ್ಲಿ ಪಾಸಾಗಿದ್ದಾರೆ ಅಂತಿದೆ. ರಾಹುಲ್ ಅವರ ಹೆಸರು ಪ್ರಮಾಣ ಪತ್ರದಲ್ಲಿ ರೌಲ್ ವಿನ್ಸಿ ಎಂದು ಮುದ್ರಿತವಾಗಿದೆ. ಉಮೇದುವಾರಿಕೆ ಪತ್ರದಲ್ಲಿ ರಾಹುಲ್ ಗಾಂಧಿ ಎಂದಿದೆ. ಈ ಬಗ್ಗೆ ಸ್ಪಷ್ಟನೆ ಬೇಕು ಎಂದು ಆಕ್ಷೇಪ ಎತ್ತಲಾಗಿತ್ತು.
ರಾಹುಲ್ ಗಾಂಧಿ ಅವರ ಜೀವಕ್ಕೆ ಭಯವಿದ್ದ ಕಾರಣ ಗೌಪ್ಯವಾಗಿ ವ್ಯಾಸಂಗ ಮಾಡಬೇಕಾಯಿತು. ಅವರು ಬ್ರಿಟಿಷ್ ಪೌರತ್ವ ಹೊಂದಿಲ್ಲ. ರೌಲ್ ವಿನ್ಸಿ ಹಾಗೂ ರಾಹುಲ್ ಗಾಂಧಿ ಹೆಸರಿನ ಗೊಂದಲದ ಬಗ್ಗೆ ಈ ಹಿಂದೆಯೇ ಆಯೋಗಕ್ಕೆ ಸ್ಪಷ್ಟನೆ ನೀಡಲಾಗಿದೆ ಎಂದು ರಾಹುಲ್ ಗಾಂಧಿ ಪರ ವಕೀಲರು ನೀಡಿದ ವಾದವನ್ನು ಆಯೋಗ ಪುರಸ್ಕರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ