ಪ್ರಗತಿವಾಹಿನಿ ಸುದ್ದಿ, ಮೂಡಲಗಿ :
ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಉತ್ತಮ ಬೆಳೆ ಬರಲಿದೆ. ಗಾಳಿಯೂ ಸಹ ಅಧಿಕವಾಗಿ ಬೀಸಲಿದ್ದು, ಇದರಿಂದ ರೋಗ-ಋಜಿನಗಳು ಜಾಸ್ತಿಯಾಗಲಿವೆ ಎಂದು ಹಾರನಹಳ್ಳಿ ಕೋಡಿಮಠ ಮಹಾಸಂಸ್ಥಾನ ಪೀಠದ ಜಗದ್ಗುರು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದರು.
ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಇಲ್ಲಿಯ ಬಲಭೀಮ ರಂಗಮಂದಿರದ ಆವರಣದಲ್ಲಿ ಜರುಗಿದ ಮಹಾಲಕ್ಷ್ಮೀ ಮೈಕ್ರೋ ಫೈನಾನ್ಸ್ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ರೋಗಗಳಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.
ಹೊಂದಾಣಿಕೆಯೇ ಸಹಕಾರಿ ಗುಣವಾಗಿದ್ದು, ಆಡಳಿತ-ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಚೆನ್ನಾಗಿದ್ದರೆ ಸಂಸ್ಥೆಗಳು ಬೆಳೆಯಲಿಕ್ಕೆ ಸಹಕಾರಿಯಾಗುತ್ತವೆ. ಸಂಘ-ಸಂಸ್ಥೆಗಳ ಆರ್ಥಿಕ ಪ್ರಗತಿಯಲ್ಲಿ ಸಾರ್ವಜನಿಕರ ಕೂಡುವಿಕೆ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧಿಸಬಹುದೆಂದು ಹೇಳಿದರು.
ಮನುಷ್ಯನು ಪ್ರಾಣಿಗಳಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಕಾಗೆ-ಕೋಳಿಗಳು ಸಹ ಮನುಷ್ಯನಿಗೆ ಆದರ್ಶಪ್ರಾಯವಾಗಿವೆ. ಪ್ರಾಣಿ-ಪಕ್ಷಿಗಳಲ್ಲಿನ ಒಗ್ಗಟ್ಟು ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಮಾಯವಾಗುತ್ತಿದೆ. ಅವುಗಳಲ್ಲಿರುವ ಬಾಂಧವ್ಯವನ್ನು ಮನುಷ್ಯನು ಅನುಸರಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಯಾರು ಪ್ರಾಂಜಲ ಮನಸ್ಸಿನಿಂದ ಭಗವಂತನ ನಾಮಸ್ಮರಣೆ ಮಾಡಿ ದಿನನಿತ್ಯ ಪೂಜೆ-ಪುನಸ್ಕಾರ ಮಾಡುತ್ತಾರೋ ಅವರಿಗೆ ಭಗವಂತನು ಆಶೀರ್ವದಿಸಿ ಹರಿಸುತ್ತಾನೆಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಕಾರದೊಂದಿಗೆ ಮಹಾಲಕ್ಷ್ಮೀ ಮೈಕ್ರೋ-ಫೈನಾನ್ಸ್ ಉತ್ತಮ ವ್ಯವಹಾರ ನಡೆಸಿ ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಲಿ. ಸಂಸ್ಥೆಯು ಉತ್ತರೋತ್ತರವಾಗಿ ಆರ್ಥಿಕವಾಗಿ ಪ್ರಗತಿಯ ಸಾಧಿಸಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳು ಮಾತನಾಡಿ, ಆಡಳಿತ ಮಂಡಳಿಯ ಗಟ್ಟಿತನ, ಸಿಬ್ಬಂದಿಯವರ ಪ್ರಾಮಾಣಿಕತೆ ಹಾಗೂ ಗ್ರಾಹಕರ ಸಹಕಾರವಿದ್ದರೆ ಮಾತ್ರ ಸಂಸ್ಥೆಯು ಹೆಮ್ಮರವಾಗಿ ಬೆಳೆಯುತ್ತದೆ. ರೈತರು ಆರ್ಥಿಕವಾಗಿ ಸಬಲರಾಗಲು ಹನಿ ನೀರಾವರಿ ವ್ಯವಸ್ಥೆಯನ್ನು ರೂಢಿಸಿಕೊಳ್ಳಬೇಕು. ಅಮೇರಿಕಾ ಹಾಗೂ ದೇಶದ ಗುಜರಾತ ರಾಜ್ಯದ ಮಾದರಿಯಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಬೇಕು ಎಂದು ಕಿವಿಮಾತು ಹೇಳಿದ ಅವರು, ಗುಡ್ಡದ ಮೇಲೆ ಕಬ್ಬು ಬೆಳೆಯುವ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ರೈತರನ್ನು ನಾವಿಂದು ನೋಡುತ್ತಿದ್ದೇವೆ. ರೈತ ಬದುಕಬೇಕು. ರೈತನ ಆದಾಯ ದ್ವಿಗುಣವಾಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಅವರು ಕೋರಿದರು.
ರಾಜಕೀಯದಲ್ಲಿ ತಪ್ಪು ನಡೆದಾಗ ಅದನ್ನು ಪ್ರಶ್ನಿಸುವ ಗಟ್ಟಿತನವನ್ನು ಗೋಕಾಕದ ಜಾರಕಿಹೊಳಿ ಸಹೋದರರು ಹೊಂದಿದ್ದಾರೆ. ಮುಂದೊಂದು ದಿನ ಸಹೋದರರು ರಾಜ್ಯದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆಯಲಿದ್ದಾರೆ ಎಂದು ಕೋಡಿಮಠದ ಶ್ರೀಗಳು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ರೈತನು ದೇಶದ ಬೆನ್ನೆಲುಬು. ರೈತನು ಸುಖವಾಗಿದ್ದರೆ ಇಡೀ ರಾಷ್ಟ್ರವೇ ಸುಖ ಮತ್ತು ಸಮೃದ್ಧಿಯಿಂದ ಇರುತ್ತದೆ. ಯಾವುದೇ ಸಂಘ-ಸಂಸ್ಥೆಗಳು ಬೆಳೆಯಬೇಕಾದರೆ ಸಾರ್ವಜನಿಕ ಸಹಭಾಗಿತ್ವ ಅಗತ್ಯವಾಗಿದೆ. ಕಲ್ಲೋಳಿಯಲ್ಲಿ ಕೋಡಿಮಠ ಹಾಗೂ ನಿಡಸೋಸಿ ಮಠ ಸ್ವಾಮೀಜಿಗಳ ಆಶೀರ್ವಾದದಿಂದ ಆರಂಭಗೊಂಡಿರುವ ಮಹಾಲಕ್ಷ್ಮೀ ಮೈಕ್ರೋ-ಫೈನಾನ್ಸ್ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹೇಳಿದರು.
ರಾಷ್ಟ್ರ ಹಾಗೂ ರಾಜ್ಯ ವಿದ್ಯಮಾನಗಳ ಬಗ್ಗೆ ಭವಿಷ್ಯವಾಣಿ ನುಡಿಯುತ್ತಿರುವ ಕೋಡಿಮಠದ ಸ್ವಾಮೀಜಿಗಳ ವಾಣಿಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಅವರು, ಕೋಡಿಮಠದ ವಾಣಿಯಂತೆಯೇ ಈ ಜಗತ್ತು, ದೇಶ ನಡೆಯುತ್ತಿದೆ. ಶ್ರೀಗಳು ನುಡಿದಂತೆ ಎಲ್ಲವೂ ನಡೆಯುತ್ತಿದೆ. ದೇಶದ ವಿದ್ಯಮಾನಗಳ ಬಗ್ಗೆ ಅಪಾರ ಪಾಂಡಿತ್ಯ ಕೋಡಿಮಠ ಹೊಂದಿದೆ ಎಂದು ಹೇಳಿದರು.
ಹಿಂದೊಮ್ಮೆ ನೀರಾವರಿ ತಜ್ಞರೊಬ್ಬರನ್ನು ಭೇಟಿಯಾದಾಗ, ೨೦೩೦ರಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ ಎಂದು ಹೇಳಿದ್ದರು. ಅವರು ಹೇಳಿದಂತೆಯೇ ಇಂದು ಕುಡಿಯುವ ನೀರಿಗಾಗಿ ಎಲ್ಲೆಡೆ ಸಮಸ್ಯೆ ಉಂಟಾಗುತ್ತಿದೆ. ಚಿನ್ನಕ್ಕಿಂತಲೂ ನೀರಿಗೆ ಬೇಡಿಕೆಯಾಗುತ್ತಿದೆ ಎಂದು ಹೇಳಿದರು. ಅಧಿಕ ಇಳುವರಿ ಪಡೆಯಲು ಕಡಿಮೆ ಖರ್ಚಿನಲ್ಲಿ ಸಮಯ ಹಾಗೂ ನೀರು ಉಳಿಸಲು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸುವಂತೆ ರೈತರಲ್ಲಿ ಮನವಿ ಮಾಡಿದರು.
ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಬಸಗೌಡ ಪಾಟೀಲ, ಬಾಬಾಸಾಹೇಬ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ರಾಯಣಗೌಡ ಪಾಟೀಲ, ಮೈಕ್ರೋ-ಫೈನಾನ್ಸ್ ಅಧ್ಯಕ್ಷ ರಾವಸಾಬ ಬೆಳಕೂಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಭೀಮಪ್ಪ ಕಡಾಡಿ, ಸುಭಾಸ ಕುರಬೇಟ, ಶಂಕರ ಬೆಳಕೂಡ, ಬಿ.ಬಿ. ದಾಸನವರ, ಅಶೋಕ ಮಕ್ಕಳಗೇರಿ, ಮಲ್ಲಪ್ಪ ಹೆಬ್ಬಾಳ, ಅಜೀತ ಬೆಳಕೂಡ, ವಸಂತ ತಹಶೀಲ್ದಾರ, ಬಸು ಯಾದಗೂಡ, ಭೀಮಶಿ ಗೊರೋಶಿ, ಪ್ರಭು ಕಡಾಡಿ, ಸಿದ್ದಪ್ಪ ಮುಗಳಿ, ಬಸು ಕಂಕಣವಾಡಿ, ಸಿದ್ದಪ್ಪ ಮಾಯನ್ನವರ, ಉಮೇಶ ಪಾಟೀಲ, ಭಗವಂತ ಪತ್ತಾರ, ಮೈಕ್ರೋ-ಫೈನಾನ್ಸ್ನ ಪಾಲುದಾರರಾದ ವಿಶ್ವನಾಥ ಕಲಾಲ, ಹನಮಂತಗೌಡ ಪಾಟೀಲ, ಪ್ರಕಾಶ ಅಕ್ಕಿ, ಮಾರುತಿ ಅಂಗಡಿ, ಶಶಿಕಾಂತ ಕಡಲಗಿ, ಮಲ್ಲಪ್ಪ ಪಾಶ್ಚಾಪೂರ, ಮಂಜುನಾಥ ಉಳ್ಳಾಗಡ್ಡಿ, ಮಹಾಂತೇಶ ಕೊಳಗಿ, ಗಂಗಪ್ಪ ಸನದಿ, ಹನಮಂತಗೌಡ ಪಾಟೀಲ, ಬಸವರಾಜ ಕೌಜಲಗಿ, ಹನಮಂತ ಬಿ.ಪಾಟೀಲ, ಮುಂತಾದವರು ವೇದಿಕೆಯಲ್ಲಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಮಳೆ, ಬೆಳೆ ಬಗ್ಗೆ ಭವಿಷ್ಯ ಹೇಳಿದ ಕೋಡಿಮಠ ಶ್ರೀ
ಕೋಡಿಮಠದ ಶ್ರೀಗಳಿಗೆ ಬೆಳಗಾವಿ ಹುಕ್ಕೇರಿ ಮಠದಲ್ಲಿ ನಾಳೆ ಸನ್ಮಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ