ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ ಇದ್ದರೂ ಹಲವರು ಅನಗತ್ಯವಾಗಿ ರಸ್ತೆಗಿಳಿಯುತ್ತಿದ್ದಾರೆ. ಇಂಥವರ ಮೇಲೆ ಲಾಠಿ ಪ್ರಹಾರ ನಡೆಸಿ ಪಾಠ ಕಾಲಿಸಿದ್ದ ಪೊಲಿಸರ ನಡೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೀಗ ಕೆಲ ಪೊಲೀಸರು ಲಾಕ್ ಡೌನ್ ನೆಪದಲ್ಲಿ ಅಗತ್ಯವಸ್ತುಗಳನ್ನು, ಔಷಧಿಗಳನ್ನು ಖರೀದಿಸಲು ಬಂದ ಜನರಿಗೂ ರಕ್ತ ಸುರಿಯುಂತೆ ಮನಬಂದಂತೆ ಲಾಠಿ ಬೀಸಿರುವುದು ತೀವ್ರ ಖಂಡನೆಗೆ ಗುರಿಯಾಗಿದೆ.
ಬಾಗಲಕೋಟೆ ನವನಗರದ 61ನೇ ಸೆಕ್ಟರ್ ನಿವಾಸಿ ಮಹೇಶ್ ಬಾಡಂಗಡಿ ಇಂದು ಹಾಲು ಮತ್ತು ಔಷಧಿ ತರಲು ಮನೆಯಿಂದ ಹೊರ ಬಂದಿದ್ದಾರೆ. ಆದರೆ, ಹೀಗೆ ಮನೆಯಿಂದ ಹೊರಬಂದ ವ್ಯಕ್ತಿಯ ಮೇಲೆ ಬಾಗಲಕೋಟೆ ಪಿಎಸ್‌ಐ ಕಲ್ಮೇಶ್ ಬನ್ನೂರು ಮನಬಂದಂತೆ ಲಾಠಿ ಬೀಸಿದ್ದಾರೆ. ಔಷಧಿ ತರಲು ಬಂದಿದ್ಧೇನೆ ಎಂದರೂ ಕೇಳದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಮಹೇಶ್ ತಲೆ ಮತ್ತು ಕೈ ಕಾಲಿಗೆ ತೀವ್ರ ಪೆಟ್ಟಾಗಿದ್ದು, ತಲೆಯಲ್ಲಿ 12 ಹೊಲಿಗೆ ಹಾಕಲಾಗಿದೆ. ಅಲ್ಲದೆ, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮಹೇಶ್ ಅವರನ್ನು ಒತ್ತಾಯಪೂರ್ವಕವಾಗಿ ಡಿಸ್ಜಾರ್ಜ್ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಇನ್ನು ರಾಜ್ಯದ ಕೆಲವೆಡೆ ಪೊಲೀಸರು ಲಾಕ್ ಡೌನ್ ನೆಪವನ್ನೇ ಇಟ್ಟುಕೊಂಡು ಅಗತ್ಯವಸ್ತುಗಳನ್ನು ಖರೀದಿಸಲು ಬಂದ ಹಾಲವರ ಮೇಲೆ ದರ್ಪ ಮೆರೆದಿದ್ದು, ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ