Latest

ಲೋಕಸೇವಾ ಆಯೋಗದ ಖಾಲಿ ಇರುವ ಎಲ್ಲ 3 ಸ್ಥಾನ ಉಕಕ್ಕಿರಲಿ -ಹೊರಟ್ಟಿ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸದ್ಯ ಖಾಲಿ ಇರುವ ಎಲ್ಲ 3 ಸ್ಥಾನಗಳಿಗೂ ಉತ್ತರ ಕರ್ನಾಟಕದವರನ್ನೇ ನೇಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

Related Articles

ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ಕರ್ನಾಟಕ ಲೋಕಸೇವಾ ಆಯೋಗ ಆರಂಭವಾದಾಗಿನಿಂದ ಸದಸ್ಯರ ನೇಮಕಾತಿಯಲ್ಲಿ ಉತ್ತರ
ಕರ್ನಾಟಕ್ಕೆ ಅನ್ಯಾಯವಾಗುತ್ತಿದೆ. ೧೮-೫-೧೯೫೧ರಂದು ಪ್ರಾರಂಭವಾದ ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೇಮಕವಾದ ಸದಸ್ಯರ ಪಟ್ಟಿಯನ್ನು ಅವಲೋಕಿಸಿದಾಗ ಆಗಿನಿಂದ ಇಲ್ಲಿಯವರೆಗೆ ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ ಕರ್ನಾಟಕದವರನ್ನು ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಿಸುವಲ್ಲಿ ಆಡಳಿತ ನಡೆಸಿದ ಎಲ್ಲ ಸರಕಾರಗಳು ಅನ್ಯಾಯ ಮಾಡುತ್ತಾ ಬಂದಿದೆ ಎಂದು ಹೇಳಿದ್ದಾರೆ.

ಇಲ್ಲಿಯವರು ಮುಖ್ಯಮಂತ್ರಿಯಾದಾಗಲೂ ಕೂಡ ಈ ಪದ್ಧತಿ ಮುಂದುವರಿದು ಬಂದಿರುವುದು ವಿಷಾದನೀಯ. ಈ ವಿಷಯವನ್ನು ಕಳೆದ ೩೮ ವರ್ಷಗಳಿಂದ ಅವಕಾಶ ಸಿಕ್ಕಾಗಲೆಲ್ಲಾ ನಾನು ವಿಧಾನಪರಿಷತ್ತಿನಲ್ಲಿ ಮಂಡಿಸುವುದರ ಮೂಲಕ ಸರಕಾರದ ಗಮನಕ್ಕೆ ತಂದಿದ್ದೇನೆ. ಇಲ್ಲಿಯವರೆಗೆ ನೇಮಕವಾದ ಸದಸ್ಯರ ಶೇಕಡಾವಾರು ಮಾಹಿತಿಯನ್ನು ಲೆಕ್ಕ ಹಾಕಿದಾಗ ಶೇಕಡಾ ೮೫ರಷ್ಟು ದಕ್ಷಿಣ ಕರ್ನಾಟಕದವರು ಅದರಲ್ಲಿಯೂ ಬೆಂಗಳೂರು ಹಾಗೂ ಮೈಸೂರಿನವರೇ ಹೆಚ್ಚಿನವರಾಗಿದ್ದಾರೆ. ಅಲ್ಲದೇ ಶೇಕಡಾ ೧೦ ರಷ್ಟು ಹೈದ್ರಾಬಾದ ಕರ್ನಾಟಕದವರು ಹಾಗೂ ಶೇಕಡಾ ೫ ರಷ್ಟು ಮುಂಬೈ ಕರ್ನಾಟಕದವರು ಎಂಬುದನ್ನು ಪರಿಗಣಿಸಿದಾಗ ಉತ್ತರ ಕರ್ನಾಟಕಕ್ಕೆ ಆದ ಅನ್ಯಾಯದ ಗಂಭೀರತೆ ತಮಗೆ ಅರ್ಥವಾಗುವುದು ಎಂದು ಹೊರಟ್ಟಿ ಹೇಳಿದ್ದಾರೆ.

ತಾವು ಮುಖ್ಯಮಂತ್ರಿಯಾದಾಗ ಬೆಳಗಾವಿಗೆ ವಿಧಾನಮಂಡಲ ಅಧಿವೇಶನ ನಡೆಸಿ ಉತ್ತರ ಕರ್ನಾಟಕಕ್ಕೆ ನಿಮ್ಮಿಂದ ಆದ ಕೊಡುಗೆಯನ್ನು ಕೊಟ್ಟಿರುವುದು ಐತಿಹಾಸಿಕ. ಅನೇಕ ಜನ ಉತ್ತರ ಕರ್ನಾಟಕಕ್ಕೆ ವಿಧಾನಮಂಡಲ ಅಧಿವೇಶನ ನಡೆಸುವುದಕ್ಕೆ ಕುಮಾರಸ್ವಾಮಿಯೇ ಬರಬೇಕಾಯಿತು ಎಂಬ ಮಾತನ್ನು ಹೇಳಿದ್ದು ತಮ್ಮ ಗಮನಕ್ಕೆ ಬಂದಿರಬಹುದು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿದ ಸಮ್ಮೀಶ್ರ ಸರಕಾರದ ಅವಧಿಯಲ್ಲಿ ಮೊಟ್ಟ ಮೊದಲ ಬಾರಿಗೆ ಉತ್ತರ ಕರ್ನಾಟಕದ ಹೆಬ್ಬಾಗಿಲಾದ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನವನ್ನು ನಡೆಸಿ ಹಿರಿಮೆ ಗರಿಮೆಗಳು ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಸಲುತ್ತದೆ. ಅಲ್ಲದೇ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ತಾವು ಮುಖ್ಯಮಂತ್ರಿಯಾದರೆ ಮಾತ್ರ ಸಾಧ್ಯ ಎಂಬ ಆಶಯವನ್ನು ಲಿಂಗೈಕ್ಯೆ ಗದಗಿನ ತೋಂಟದಾರ್ಯ ಸಿದ್ಧಲಿಂಗಮಹಾಸ್ವಾಮಿಗಳು ಹೊಂದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದು ಪತ್ರದಲ್ಲಿ ಹೊರಟ್ಟಿ ಉಲ್ಲಖಿಸಿದ್ದಾರೆ.

ಈ ಎಲ್ಲ ರಂಗಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಉತ್ತರ ಕರ್ನಾಟಕದ ಜನತೆ ಈ ಅನ್ಯಾಯದಿಂದ ನೇಮಕಾತಿಗಳಲ್ಲಿ ವಂಚನೆಗೊಳಗಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಈ ಅನ್ಯಾಯಕ್ಕೆ ಅಂತ್ಯ ಹಾಡುವ ಅಧಿಕಾರ ಹಾಗೂ ಇಚ್ಛಾಶಕ್ತಿಯು ತಮಗೆ ಇದ್ದು, ಈಗ ಖಾಲಿ ಇರುವ ೩ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರುಗಳನ್ನು ನೇಮಖಾತಿ ಮಾಡುವಾಗ ಮೂರೂ (೩) ಸ್ಥಾನಗಳನ್ನು ಉತ್ತರ ಕರ್ನಾಟಕದ ಅರ್ಹ ಶಿಕ್ಷಣವೇತ್ತರು ಹಾಗೂ ತಜ್ಞರನ್ನು ನೇಮಿಸುವುದರ ಮೂಲಕ ತಲೆ ತಲಾಂತರದಿಂದ ನಡೆದಿರುವ ಅನ್ಯಾಯಕ್ಕೆ ಇತಿಶ್ರೀ ಹಾಡಲು ಕೋರುತ್ತೇನೆ. ತಾವು ಮನಸ್ಸು ಮಾಡಿದರೆ ಈ ಹಿಂದಿನವರು ಮಾಡಿದ ಕಳಕಂವನ್ನು ಸರಿ ಮಾಡಿದಂತಾಗುತ್ತದೆ ಎನ್ನುವದು ನನ್ನ ಹಂಬಲ. ಇಲ್ಲಿ ಕಲಿತಂತಹ ಬಡವರ ಪಾಲಿಗೆ ನೀವೊಬ್ಬರು ಆಶಾಕಿರಣರಾಗುತ್ತಿರಿ ಎಂಬುದನ್ನು ನನ್ನ ಮನದಾಳದಿಂದ ಹೇಳುತ್ತೇನೆ ಎಂದು ಹೊರಟ್ಟಿ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button