ಎಲ್ಲಾ ಗ್ರಾಮಗಳಿಗೆ ನದಿ ಮೂಲದ ನೀರು ಪೂರೈಕೆಗೆ ಜಲಧಾರೆ ಯೋಜನೆ: ಕೃಷ್ಣ ಭೈರೇಗೌಡ
ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ವರ್ಷವಿಡೀ ನದಿ ನೀರು ಪೂರೈಸುವ ಉದ್ದೇಶದಿಂದ ಜಲಧಾರೆ ಯೋಜನೆ ರೂಪಿಸಲಾಗುತ್ತಿದೆ. ಸುಮಾರು ಎಪ್ಪತ್ತು ಸಾವಿರ ಕೋಟಿ ರೂ. ವೆಚ್ಚದಲ್ಲಿ ಮುಂಬರುವ ಆರೇಳು ವರ್ಷಗಳ ಅವಧಿಯಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು ರಾಜ್ಯ ವಿಧಾನ ಪರಿಷತ್ನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ಡಾ ತೇಜಸ್ವಿನಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಗದಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಲಧಾರೆ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಸಮೀಪದ ಯಾವುದಾದರೂ ನದಿ ಮೂಲದಿಂದ ಶುದ್ಧೀಕರಿಸಿದ ನೀರನ್ನು ಕುಡಿಯಲು ಪೂರೈಸುವ ಮಹತ್ವಾಕಾಂಕ್ಷೆ ಸರ್ಕಾರಕ್ಕೆ ಇದೆ. ಇದಕ್ಕಾಗಿ ವಿಸ್ತೃತ ಯೋಜನೆ ಹಾಗೂ ರೂಪು-ರೇಷೆಗಳನ್ನು ರಚಿಸಲಾಗುತ್ತಿದೆ. ಆರರಿಂದ ಏಳು ವರ್ಷಗಳ ದೀರ್ಘಾವಧಿಯಲ್ಲಿ ಯೋಜನೆ ಜಾರಿಗೊಳ್ಳಲಿದೆ ಎಂದರು.
ಗ್ರಾಮೀಣ ಪ್ರದೇಶಗಳಿಗೆ ಕೊಳವೆ ನೀರು ಸರಬರಾಜು ಯೋಜನೆ, ಕೈ-ಪಂಪು, ಕೊಳವೆ ಬಾವಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಪ್ರಸ್ತುತ ಎಲ್ಲಾ ಗ್ರಾಮದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ೨೦೧೮-೧೯ ನೇ ಸಾಲಿನಲ್ಲಿ ಒಟ್ಟು ೨೪.೨೯೪ ಜನ ವಸತಿಗಳಿಗೆ ನೀರು ಸರಬರಾಜು ಮಾಡಲು ೪೨೩೯೩ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ನವೆಂಬರ್ ಅಂತ್ಯಕ್ಕೆ ೬೧೩೫ ಕಾಮಗಾರಿಗಳು ಪೂರ್ಣಗೊಂಡಿವೆ. ಮಳೆ ನೀರು ಸಂಗ್ರಹಿಸಿ ಅಂತರ್ಜಲವನ್ನು ಹೆಚ್ಚಿಸಲು ಅನೇಕ ಕಾರ್ಯಕ್ರಮಗಳನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು ೨೬೬.೨೨ ಲಕ್ಷ ಜಾನುವಾರುಗಳಿವೆ. ಕುಡಿಯುವ ನೀರು ಪ್ರಮಾಣ ಲೆಕ್ಕ ಹಾಕುವಾಗ ಜಾನುವಾರು ಸಂಖ್ಯೆಯನ್ನೂ ಕೂಡಾ ಪರಿಗಣಿಸಲಾಗುತ್ತ್ತದೆ ಎಂದು ಸಚಿವರು ವಿವರಿಸಿದರು.
ಗ್ರಾಮೀಣ ಮುಖ್ಯ ರಸ್ತೆಗಳ ಯೋಜನೆ : ಲೋಕೋಪಯೋಗಿ ಇಲಾಖೆಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳನ್ನು ನಿರ್ವಹಿಸುವ ಮಾದರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಮುಖ್ಯ ರಸ್ತೆಗಳನ್ನು ಗುರುತಿಸಿ ಅವುಗಳನ್ನು ವರ್ಷವಿಡೀ ಸುಸ್ಥಿತಿಯಲ್ಲಿ ಇರುವಂತೆ ನಿರ್ವಹಿಸಲು ಹೊಸ ಯೋಜನೆಯನ್ನು ಹಾಕಿಕೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಅವರು ರಾಜ್ಯ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ತಿಳಿಸಿದರು.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ವರೆಗೆ ೭೬೬೫.೯೪ ಕೋಟಿ. ರೂ. ವೆಚ್ಚದಲ್ಲಿ ೧೬,೦೮೭ ಕಿ. ಮೀ. ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ ವಾಣಿಜ್ಯ ಸಂಪರ್ಕ ಹೊಂದಿರುವ ಕೆಲವು ಗ್ರಾಮೀಣ ರಸ್ತೆಗಳಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಭಾರದ ಸರಕು ಸಾಗಣೆ ವಾಹನಗಳು ಸಂಚರಿಸುವುದರಿಂದ ಈ ರಸ್ತೆಗಳು ನಿಯಮಿತವಾಗಿ ದುರಸ್ತಿ ಮಾಡಬೇಕಾಗುತ್ತದೆ. ಇದಕ್ಕಾಗಿ ಗ್ರಾಮೀಣ ಮುಖ್ಯ ರಸ್ತೆಗಳ ಯೋಜನೆ ಜಾರಿಗೊಂಡರೆ ನಿರ್ವಹಣಾ ಕಾರ್ಯ ಸುಲಭವಾಗುತ್ತದೆ. ಯೋಜನೆಯು ಇನ್ನೂ ಇಲಾಖಾ ಹಂತದಲ್ಲಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ.
ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿಯಲ್ಲಿ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದಲ್ಲಿ ರಸ್ತೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈವರೆಗೆ ೪೯೬೧.೦೩ ಕೋಟಿ ವೆಚ್ಚದಲ್ಲಿ ೧೮,೫೪೮ ಕಿ.ಮೀ. ರಸ್ತೆಯನ್ನು ದುರಸ್ತಿಪಡಿಸಲಾಗಿದೆ. ೨೦೧೩-೧೪ನೇ ಸಾಲಿನಿಂದ ಕೇಂದ್ರ ಮತ್ತು ರಾಜ್ಯದ ಪಾಲು ಶೇಕಡಾ ೭೫ ಹಾಗೂ ಶೇಕಡಾ ೨೫ ರ ಅನುಪಾತದಲ್ಲಿ ಇತ್ತು. ೨೦೧೫-೧೬ ನೇ ಸಾಲಿನಿಂದ ಶೇಕಡಾ ೬೦ ಹಾಗೂ ಶೇಕಡಾ ೪೦ ರ ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಕಳೆದ ಸುಮಾರು ಐದು ವರ್ಷಗಳಿಂದ ಈ ಅನುದಾನ ಬಿಡುಗಡೆಯಾಗಿಲ್ಲ. ಕೇಂದ್ರದ ಆದೇಶಕ್ಕಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಸಚಿವರು ವಿವರಿಸಿದರು.
ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ೫೬೧೩ ಹಳ್ಳಿಗಳನ್ನು, ಗ್ರಾಮವಿಕಾಸ ಯೋಜನೆಯಡಿಯಲ್ಲಿ ೯೩೯ ಹಳ್ಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ೯೬೩ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೃಷ್ಣಭೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ತುರ್ತು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ
ರಾಜ್ಯ ಸರ್ಕಾರದ ಆರೋಗ್ಯ ಕರ್ನಾಟಕ ಮತ್ತು ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಗಳನ್ನು ಜಂಟಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್. ಪಾಟೀಲ್ ಅವರು ಮೇಲ್ಮನೆಯಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಪಿ. ಆರ್. ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ರಾಜೀವ್ ಆರೋಗ್ಯ ಭಾಗ್ಯ, ಇಂದಿರಾ ಸುರಕ್ಷಾ, ರಾಷ್ಟ್ರೀಯ ಸ್ವಾಸ್ಥ್ಯಬಿಮಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಮಿಳಿತಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಕಳೆದ ಮಾರ್ಚ್ ೧ ರಿಂದ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ ಪ್ರಾಥಮಿಕ, ಸಾಮಾನ್ಯ ದ್ವಿತೀಯ, ಕ್ಲಿಷ್ಟಕರ ದ್ವಿತೀಯ, ತೃತೀಯ ಮತ್ತು ತುರ್ತು ಖಾಯಿಲೆಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಯೋಜನೆಯಡಿ ವಿವಿಧ ೧೬೦೦ ಪ್ರಕಾರಗಳ ಚಿಕಿತ್ಸೆಗಳನ್ನು ಪಡೆಯಬಹುದು.
ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಶಿಫಾರಸ್ಸು ಪತ್ರ ಪಡೆಯಬೇಕು ಎಂಬುದು ಸಾಮಾನ್ಯ ತಿಳುವಳಿಕೆಯಾಗಿದೆ. ಹೃದಯಾಘಾತ, ರಸ್ತೆ ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆದು ನಂತರ ಘಟನೋತ್ತರವಾಗಿ ಸರ್ಕಾರಿ ವೈದ್ಯಾಧಿಕಾರಿಗಳಿಂದ ಶಿಫಾರಸ್ಸು ಪತ್ರ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೊಡಗು ಮೂಲಸೌಕರ್ಯ ಅಭಿವೃದ್ಧಿಗೆ ೭೭ ಕೋಟಿ ರೂ.
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಅತೀವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸರಿಪಡಿಸಲು ರಾಜ್ಯ ಮತ್ತು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ ಹಾಗೂ ವಿವಿಧ ಮೂಲಗಳಿಂದ ಒಟ್ಟು ೭೭ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ರಾಜ್ಯ ವಿಧಾನ ಪರಿಷತ್ನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ಎಸ್. ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಸರಿಪಡಿಸಲು ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಕೋಶದಿಂದ ೩೩.೧೫ ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಜಿಲ್ಲಾ ಪಂಚಾಯತ್ ಇಂಜಿನೀಯರಿಂಗ್ ವಿಭಾಗದ ಮೂಲಕ ತಯಾರಿಸಿದ ಕ್ರಿಯಾ ಯೋಜನೆ ಅನುಮೋದಿಸಿ ಅನುದಾನ ಬಿಡುಗಡೆಗೊಳಿಸಲಾಗಿದೆ.
ಮಳೆಯಿಂದ ಹಾನಿಯಾಗಿರುವ ರಸ್ತೆಗಳ ತುರ್ತು ದುರಸ್ತಿಗಾಗಿ ಪ್ರತ್ಯೇಕವಾಗಿ ೮.೨೧ ಕೋಟಿ ರೂ. ಅನುದಾನದಲ್ಲಿ ೧೨೨ ರಸ್ತೆಗಳನ್ನು ತುರ್ತು ಹಾಗೂ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ. ೨ನೇ ಹಂತದಲ್ಲಿ ೫.೧೫ ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಕಾಫಿ ತೋಟಗಳ ರಸ್ತೆಗಳು ಕೂಡಾ ಹಾನಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೆಚ್ಚು ಪರಿಹಾರ ಒದಗಿಸಿ ದುರಸ್ತಿಪಡಿಸಲಾಗುವುದು ಎಂದರು.
ಶೌಚಾಲಯ ಬಳಕೆ ಫಲಾನುಭವಿಗಳ ಜಾಗೃತಿ ಮುಖ್ಯ
೨೦೧೨-೧೩ ರ ಆಧಾರ ರೇಖೆ (ಬೇಸ್ಲೈನ್) ಸಮೀಕ್ಷೆಯಂತೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಇದುವರೆಗೆ ೭೨ ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಿಗದಿತ ಗುರಿಗಿಂತ ಒಂದು ವರ್ಷ ಮೊದಲೇ ಶೌಚಾಲಯಗಳ ನಿರ್ಮಾಣ ಪೂರ್ಣಗೊಳಿಸಿ ಗ್ರಾಮೀಣ ಪ್ರದೇಶದಲ್ಲಿ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂದು ಘೋಷಿಸಲಾಗಿದೆ. ಆದರೆ, ಶೌಚಾಲಯಗಳ ಬಳಕೆಗೆ ಫಲಾನುಭವಿಗಳ ಜಾಗೃತಿ ಮತ್ತು ಜವಾಬ್ದಾರಿಯೇ ಮುಖ್ಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ರಾಜ್ಯ ವಿಧಾನ ಪರಿಷತ್ನಲ್ಲಿ ಮಂಗಳವಾರ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎನ್. ಅಪ್ಪಾಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿರ್ಮಲ ಭಾರತ ಅಭಿಯಾನ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಶೇಕಡಾ ೬೦ ಹಾಗೂ ಶೇಕಡಾ ೪೦ ರ ಅನುಪಾತದಲ್ಲಿ ೪೨೦೭.೬೫ ಕೋಟಿ ರೂ. ಚ್ಚದಲ್ಲಿ ೪೫.೪೨ ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ರಾಜ್ಯದಲ್ಲಿ ೨೦೧೨-೧೩ ರಿಂದ ಇಲ್ಲಿಯವರೆಗೆ ಒಟ್ಟು ೭೨ ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಬಳಸುವುದು ಫಲಾನುಭವಿಗಳ ಜವಾಬ್ದಾರಿಯೂ ಕೂಡಾ ಆಗಿದೆ. ಹೊಸದಾಗಿ ೪.೬೦ ಲಕ್ಷ ಕುಟುಂಬಗಳಿಗೆ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಮುಂದಿನ ಜನವರಿ ಅಂತ್ಯದೊಳಗೆ ಇವು ಪೂರ್ಣಗೊಳ್ಳಲಿವೆ ಎಂದು ಸಚಿವರು ತಿಳಿಸಿದರು.
ಸರ್ಕಾರಿ ವೈದ್ಯಕೀಯ ಸೀಟು ಶುಲ್ಕ ಏರಿಕೆಗೆ ಚಿಂತನೆ
ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಶುಲ್ಕವನ್ನು ಏರಿಕೆ ಮಾಡಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು ಆರ್ಥಿಕವಾಗಿ ಸ್ವಾಯತ್ತವಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಅವರು ರಾಜ್ಯ ವಿಧಾನಪರಿಷತ್ನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಸ್. ವಿ. ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ೨೦೦೬ ರ ನಂತರ ನೇಮಕಗೊಂಡ ಸಿಬ್ಬಂದಿಗಳಿಗೆ ನೂತನ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಹೆಚ್ಚುವರಿ ಅನುದಾನ ಒದಗಿಸಲು ಆರ್ಥಿಕ ಇಲಾಖೆಯನ್ನು ಕೋರಲಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಬೇಡಿಕೆ ಇರುವುದರಿಂದ ಈ ಸಂಸ್ಥೆಗಳನ್ನು ಆರ್ಥಿಕ ಸ್ವಾವಲಂಬನೆ ಆಧಾರದಲ್ಲಿ ನಿರ್ಮಿಸುವ ಗುರಿ ಇದೆ. ಸರ್ಕಾರಿ ವೈದ್ಯಕೀಯ ಕಾಲೇಜ್ಗಳಲ್ಲಿ ಪ್ರಸ್ತುತ ಪದವಿ ಪ್ರವೇಶಕ್ಕೆ ೧೭ ಸಾವಿರ ಶುಲ್ಕ ಇದೆ. ಇದನ್ನು ೫೦ ಸಾವಿರ ರೂ.ಗಳಿಗೆ ಮತ್ತು ಸ್ನಾತಕೋತ್ತರ ಪದವಿ ಪ್ರವೇಶದ ಶುಲ್ಕವನ್ನು ಮೂರು ಲಕ್ಷ ರೂ.ಗಳಿಗೆ ಹೆಚ್ಚಿಸುವುದು.
ಜೊತೆಗೆ ಅನಿವಾಸಿ ಭಾರತೀಯರಿಗೆ ಸ್ಥಾನಗಳನ್ನು ಒದಗಿಸಲು ಚಿಂತನೆ ಇದೆ. ಇದರಿಂದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಆರ್ಥಿಕವಾಗಿ ಸಶಕ್ತವಾಗಲು ಸಾಧ್ಯ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಹುತೇಕ ಎಲ್ಲ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಸಚಿವರು ವಿವರಿಸಿದರು.
ಸದಸ್ಯರಾದ ಡಾ ವೈ. ಎ. ನಾರಾಯಣಸ್ವಾಮಿ, ಆಯನೂರು ಮಂಜುನಾಥ ಅವರೂ ಚರ್ಚೆಯಲ್ಲಿ ಭಾಗವಹಿಸಿದ್ದರು.
ಕೆರೆ ಒತ್ತುವರಿ ತೆರವಿಗೆ ಕಾರ್ಯಾಚರಣೆ
ಯಾವುದೇ ಮುಲಾಜು ಅಥವಾ ಒತ್ತಡಗಳಿಗೆ ಒಳಗಾಗದೆ ರಾಜ್ಯದ ಎಲ್ಲಾ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿರುಸಿನಿಂದ ಕೈಗೊಳ್ಳಲಾಗುತ್ತಿದೆ ಎಂದು ಸಣ್ಣ ನೀರಾವರಿ ಸಚಿವ ಸಿ. ಎಸ್. ಪುಟ್ಟರಾಜು ಅವರು ರಾಜ್ಯ ವಿಧಾನಪರಿಷತ್ನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಹೆಚ್. ಎಂ. ರೇವಣ್ಣ ಅವರ ಪರವಾಗಿ ಎಸ್.ಎಲ್ ರವಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೆರೆಗಳಲ್ಲಿನ ಹೂಳನ್ನು ತೆಗೆದು ನೀರು ಸಂಗ್ರಹಿಸಲು ಕೆರೆ ಸಂಜೀವಿನಿ ಯೋಜನೆಯನ್ನು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಅಂತೆಯೇ, ೨೦೧೭-೧೮ ರಲ್ಲಿ ಈ ಯೋಜನೆ ಅನುಷ್ಠಾನಕ್ಕೆ ೩೫ ಕೋಟಿ ರೂ. ಬಿಡುಗಡೆಯಾಗಿದೆ. ಈ ಅನುದಾನವನ್ನು ೧೨೯೪ ಕೆರೆಗಳಲ್ಲಿನ ಹೂಳೆತ್ತಲು ಬಳಸಲು ಉದ್ದೇಶಿಸಲಾಗಿದೆ. ಯೋಜನೆ ಅನುಮೋದನೆಗೊಂಡ ಕೆರೆಗಳಲ್ಲಿ ಕೆರೆ ಬಳಕೆದಾರರ ಸಂಘಗಳು ಇದ್ದರೆ ಆ ಕೆರೆಗಳನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅಭಿವೃದ್ಧಿ ಪಡಿಸಲಾಗುವುದು. ಉಳಿದ ಕೆರೆಗಳನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮೂಲಕ ಅಭಿವೃದ್ಧಿಪಡಿಸಲಾಗುವುದು. ಕಳೆದ ನವೆಂಬರ್ ಅಂತ್ಯದವರೆಗೆ ೧೩೬ ಕೆರೆಗಳನ್ನು ಈ ಯೋಜನೆಯಡಿ ಅಭಿವೃದ್ಧಿ ಮಾಡಲಾಗಿದೆ. ಪ್ರಸಕ್ತ ವಿಧಾನ ಮಂಡಲ ಅಧಿವೇಶನ ಮುಗಿದ ತಕ್ಷಣ ರಾಜ್ಯಾದ್ಯಂತ ಕೆರೆಗಳ ಹೂಳು ಮತ್ತು ಮುಳ್ಳು ತಂತಿಗಳನ್ನು ತೆರವುಗೊಳಿಸುವ ಕಾರ್ಯ ಚುರುಕುಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
೨೦೧೮-೧೯ನೇ ಪೂರಕ ಅಂದಾಜುಗಳ ಪಟ್ಟಿಗೆ ವಿಧಾನಸಭೆಯಲ್ಲಿ ಅನುಮೋದನೆ
೨೦೧೮-೧೯ ನೇ ಸಾಲಿನ ಪೂರಕ ಅಂದಾಜುಗಳ ಒಟ್ಟು ೬೯೮೦ ಕೋಟಿ ರೂ ಮೊದಲನೇ ಕಂತು ಪಟ್ಟಿಗೆ ರಾಜ್ಯ ವಿಧಾನಸಭೆ ಮಂಗಳವಾರ ಅನುಮೋದನೆ ನೀಡಿದೆ.
ಹಣಕಾಸು ಖಾತೆಯನ್ನೂ ಹೊತ್ತ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಮಂಡಿಸಿದ ಈ ಪೂರಕ ಅಂದಾಜುಗಳ ಪಟ್ಟಿಯ ವಿವರಣೆಯ ನಂತರ ವಿಧಾನ ಸಭೆಯಲ್ಲಿ ಸಭಾಧ್ಯಕ್ಷ ಕೆ. ಆರ್. ರಮೇಶ್ಕುಮಾರ್ ಅವರು ಮತಕ್ಕೆ ಹಾಕಿದಾಗ ೨೦೧೮-೧೯ ನೇ ಸಾಲಿನ ಮೊದಲ ಕಂತಿನ ಪೂರಕ ಅಂದಾಜುಗಳ ಪಟ್ಟಿಗೆ ವಿಧಾನಸಭೆಯ ಅನುಮೋದನೆ ದೊರೆಯಿತು.
ಈ ಮುನ್ನ, ಮುಖ್ಯಮಂತ್ರಿಯವರು ಅಂದಾಜು ಪಟ್ಟಿಯ ಕುರಿತು ಇಲಾಖಾವಾರು ೨೦೧೯ ಮಾರ್ಚ್ ೩೧ ರವರೆಗೆ ಅಗತ್ಯವಿರುವ ಅನುದಾನದ ವಿವರಣೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರು ಈ ಹಿಂದಿನ ಬಜೆಟ್ನಲ್ಲಿ ವೆಚ್ಚ ಮಾಡಲಾದ ವಿವರವನ್ನು ನೀಡುವಂತೆ ಆಗ್ರಹಿಸಿ ಸಭಾತ್ಯಾಗ ಮಾಡಿದರು.
ನಂತರ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಮಂಡಿಸಿದ ೨೦೧೮ ನೇ ಸಾಲಿನ ಧನವಿನಿಯೋಗ ಸಂಖ್ಯೆ-೩ ವಿಧೇಯಕಕ್ಕೂ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು.
ನೀಟ್ ಪರೀಕ್ಷೆ ವಂಚನೆಯಾಗಿದ್ದಲ್ಲಿ ತನಿಖೆ : ಡಿ.ಕೆ.ಶಿವಕುಮಾರ್
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ( ನೀಟ್) ಬರೆದ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳು ಸೋರಿಕೆಯಾಗಿದ್ದರೆ ಆ ಕುರಿತು ಮಾಹಿತಿ ಪಡೆದು ತನಿಖೆ ನಡೆಸುವುದಾಗಿ ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು.
ಪ್ರಶ್ನೋತ್ತರ ಕಲಾಪ ವೇಳೆ ಶಾಸಕ ವಿ. ಸೋಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕೇಂದ್ರ ಸರ್ಕಾರವು ನೀಟ್ ಪರೀಕೆಯನ್ನು ನಡೆಸುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳ ಮಾಹಿತಿ ಸೋರಿಕೆ ಆಗಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇರುವುದಿಲ್ಲ. ಒಂದು ವೇಳೆ ಸೋರಿಕೆಯಾಗಿದೆ ಎಂಬ ಅಂಶ ಮೇಲ್ನೋಟಕ್ಕೆ ಕಂಡು ಬಂದಲ್ಲಿ ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿ ಸೋರಿಕೆ ಆಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಿಸಿರುವ ಕುರಿತು ಸರ್ಕಾರಕ್ಕೆ ಮಾಹಿತಿ ಇಲ್ಲದಿರುವುದರಿಂದ ವಂಚಕರು ವಿದ್ಯಾರ್ಥಿ ಹಾಗೂ ಪೋಷಕರಿಗೆ ವೈದ್ಯಕೀಯ ಸೀಟು ಕೊಡಿಸುವುದಾಗಿ ಆಮಿಷ ಒಡ್ಡುತ್ತಿರುವ ಬಗ್ಗೆ ಮಾಹಿತಿ ಇಲ್ಲದಿರುವುದರಿಂದ ವಂಚಕರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ