https://youtu.be/pV7CYX17zx8
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಹೇಳಿದ್ದ ಬುದ್ದಿವಾದ ಇದೀಗ ವೈರಲ್ ಆಗಿದೆ.
ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪ ಅವರ ಅಂದಿನ ಮಾತುಗಳು ಹರಿದಾಡುತ್ತಿವೆ.
ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬಂದ ಸಂದರ್ಭದಲ್ಲಿ ಕಲಾಪದ ವೇಳೆ ಮಾತನಾಡಿದ್ದ ಬಿಎಸ್‍ವೈ, ಶಿವಕುಮಾರ್ ಅವರೇ ನೀವು ನಾಳೆ ಪಶ್ಚಾತ್ತಾಪ ಪಡುವವರಿದ್ದೀರಿ. ಈ ನಾಡಿನ ಜನರ ನಂಬಿಕೆ ವಿಶ್ವಾಸಕ್ಕೆ ದ್ರೋಹ ಮಾಡಿದಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಕೂರಿಸಲು ನೀವು ರಕ್ಷಣೆ ಕೊಟ್ಟಿದ್ದೀರಿ. ಇದರ ನೇತೃತ್ವವನ್ನು ವಹಿಸಿದಂತಹ ಖಳನಾಯಕ ನೀವೇ ಆಗಿದ್ದರಿಂದ ನಾನು ಹೇಳುತ್ತಿದ್ದೇನೆ. ನಿಮ್ಮ ಬಗ್ಗೆ ಗೌರವವಿದೆ. ಇಂದು ನಾನು ಯಾವುದೇ ಮಾತನ್ನು ಹೇಳುವುದಿಲ್ಲ. ಕಾಲವೇ ಎಲ್ಲ ಹೇಳುತ್ತದೆ ಎಂದು ಹೇಳಿದ್ದರು.
ನಂತರ ಯಡಿಯೂರಪ್ಪ ಬಳಸಿದ್ದ ಖಳನಾಯಕ ಪದಕ್ಕೆ ಡಿಕೆಶಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಯಡಿಯೂರಪ್ಪ ಅದನ್ನು ವಾಪಸ್ ಪಡೆದಿದ್ದರು.
ವೈರಲ್ ಆದ ವಿಡಿಯೋ ಕುರಿತು ಬಿ.ಎಸ್. ಯಡಿಯೂರಪ್ಪ ಇದೀಗ ಪ್ರತಿಕ್ರಿಯಿಸಿ, ನಾನು 40 ವರ್ಷದ ರಾಜಕಾರಣದ ಅನುಭವದ ಮೇಲೆ ನಾನು ಆ ಮಾತನ್ನು ಹೇಳಿದ್ದೆ ಎಂದಿದ್ದಾರೆ.
ರಾಷ್ಟ್ರೀಯ ನಾಯಕರ ಜತೆ ಸಂಪರ್ಕಿಸಿ ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಮೇ 29ರಂದು ದೆಹಲಿಗೆ ತೆರಳುತ್ತೇನೆ. ರಾಜ್ಯದ ಸಂಸದರೆಲ್ಲ ಅಂದು ದೆಹಲಿಗೆ ತೆರಳುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ನಿರ್ಧಾರದ ಮೇಲೆ ರಾಜಕಾರಣ ನಿಂತಿದೆ. ಈಗ ನಾನು ಏನೂ ಹೇಳುವುದಿಲ್ಲ. ಜನರ ತೀರ್ಮಾನದಂತೆ ನಡೆದುಕೊಳ್ತಾರೆಂಬ ನಂಬಿಕೆಯಿದೆ. ನಾವಾಗಿಯೇ ಸುಮಲತಾ ಅಂಬರೀಷ್ರನ್ನು ಕರೆಯಲ್ಲ. ಅವರಾಗಿಯೇ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ ಎಂದೂ ಯಡಿಯೂರಪ್ಪ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ