ಸಕಲ ಚರಾಚರ ವಸ್ತುಗಳಲ್ಲಿ ಭಗವಂತನಿದ್ದಾನೆ ಎಂಬ ನಂಬಿಕೆ ಆಸ್ತಿಕರದ್ದು, ಕಲ್ಲು, ಮಣ್ಣು, ಮರಗಳಲ್ಲಿಯೂ ಭಗವಂತನನ್ನು ಕಾಣುವ ಭಕ್ತರ ನಂಬಿಕೆಯನ್ನು ಹೆಚ್ಚಿಸುವ ತಾಣಗಳು ಸಾಕಷ್ಟಿವೆ. ಅಂತಹ ಕ್ಷೇತ್ರಗಳಲ್ಲಿ ಒಂದಾದ ನಮ್ಮ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಕ್ಷೇತ್ರ ಖಿಳೇಗಾಂವಿ ಬಸವಣ್ಣನ ಉದ್ಭವ ಮೂರ್ತಿಯು ಕೂಡಾ ಒಂದು.
ಈ ಪವಿತ್ರ ಕ್ಷೇತ್ರದಲ್ಲಿ ಕಲ್ಲು ಕೂಡಾ ಕಾರುಣ್ಯದ ಕಥೆ ಹೇಳುತ್ತದೆ. ಮಣ್ಣು ಕೂಡಾ ಮಹಾತ್ಮರ ಮಹಿಮೆಯನ್ನು ಸಾರುತ್ತದೆ, ನೀರು ಕೂಡಾ ಎಲ್ಲರೊಳು ನೀನಿರು ಎಂಬ ನೀರವ ಸಂದೇಶ ನೀಡುತ್ತದೆ. ಕಾರಣ ಇದು ಶರಣ ಸಂತ ಮಹಾಂತರ ಧರ್ಮದ ಪುಣ್ಯಕ್ಷೇತ್ರ ಶ್ರೀ ಖಿಳೇಗಾಂವಿ ಬಸವೇಶ್ವರ.
ಇತಿಹಾಸ: ಖಿಳೇಗಾಂವಿ ಬಸವೇಶ್ವರ ದೇವಸ್ಥಾನದ ಮೂಲ ಪುರುಷ ಮತ್ತು ದೇವಾಲಯವನ್ನು ನಿರ್ಮಾಣ ಮಾಡಿದವರು ಢವಳಪ್ಪ ಅಜ್ಜ. ಈತನ ಹೆಂಡತಿ ಶಿವಮ್ಮ. ಢವಳಪ್ಪ ಹೊಲದಲ್ಲಿ ಕೆಲಸ ಮಾಡಿಕೊಂಡು ದನಕರು ಮೇಯಿಸಿಕೊಂಡು ಇರುವಂತಹ ಸಾಮಾನ್ಯ ಮನುಷ್ಯ ಆದರೆ ಅವನಿಗೆ ಅರಿವಿಲ್ಲದ ಹಾಗೆ ಅವನ ಜಾನುವಾರುಗಳಲ್ಲಿ ಒಂದು ಹಸು ಪ್ರತಿನಿತ್ಯ ರಾತ್ರಿ ಹುತ್ತಕ್ಕೆ ಹೋಗಿ ಹಾಲುಣಿಸಿ ಬರುತಿತ್ತು. ಅದನ್ನು ಅರಿತ ಢವಳಪ್ಪ ಅಜ್ಜ ಚಿಂತಾಜನಕನಾಗಿದ್ದ. ಒಂದು ದಿನ ಸ್ವಪ್ನದಲ್ಲಿ ಅಶರೀರ ವಾಣಿಯೊಂದು ಕೇಳಿಸಿತು. ಅದು ನಿನ್ನ ಒಂದು ಹಸು ನನ್ನ ಹುತ್ತಕ್ಕೆ ಹಾಲು ಎರೆಯುತ್ತದೆ. ಆ ಹಸು ಸಾಮಾನ್ಯ ಹಸು ಅಲ್ಲ ಸಾಕ್ಷಾತ್ ಕಾಮಧೇನು ಸ್ವರೂಪಿ ಮತ್ತು ನಿನ್ನ ಹಸು ಹಾಲೆರೆಯುವ ಹುತ್ತದ ಕವಚವನ್ನು ಬಿಚ್ಚು ಅಲ್ಲಿ ನಾನು ನಿನಗೆ ಸಿಗುತ್ತೇನೆ ಎಂದು ಹೇಳಿ ಮಾಯವಾಯಿತು.
ಮರುದಿನ ಢವಳಪ್ಪ ಅಜ್ಜ ತನ್ನ ಪತ್ನಿಯ ಜೊತೆಗೆ ಈ ವಿಷಯವನ್ನು ಪ್ರಸ್ಥಾಪಿಸಿದ ಆಗ ಅವನ ಪತ್ನಿ ಹಾಗೂ ಢವಳಪ್ಪ ಅಜ್ಜ ಹುತ್ತನ್ನು ಸ್ವಚ್ಛಗೊಳಿಸಲು ಹೋದಾಗ ಅವರಿಗೊಂದು ಆಶ್ಚರ್ಯ ಕಾದಿತ್ತು ಅದೇನೆಂದರೆ ಉದ್ಭವ ಮೂರ್ತಿ ಶ್ರೀ ಬಸವಣ್ಣ. ಆಗ ಈ ದಂಪತಿಗಳ ಆನಂದಕ್ಕೆ ಪಾರವೆ ಇಲ್ಲದಂತಾಯಿತು. ಸುತ್ತ ಮುತ್ತಲಿನ ಊರಲೆಲ್ಲಾ ಸುದ್ದಿ ಪಸರಿಸಿತು. ಎಲ್ಲರಿಗೂ ಮೂರ್ತಿಯ ದರ್ಶನವಾಯಿತು ಮತ್ತು ಇಲ್ಲಿಯವರೆಗೆ ಯಾರೂ ಅರಿಯದ ಹುತ್ತದ ಉದ್ಭವ ಮೂರ್ತಿಗೆ ಢವಳಪ್ಪನೆ ಪೂಜಾರಿಯಾದನು.
ದಿನದಿಂದ ದಿನಕ್ಕೆ ಭಕ್ತರು ಬರುವುದು ಹೆಚ್ಚಾಯಿತು ದರ್ಶನ ಪಡೆದು ಭಕ್ತಿಯಿಂದ ಕಾಣಿಕೆ ಸಲ್ಲಿಸಿ ಹೋಗುತ್ತಿದ್ದರು. ಬಂದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಮಾಡಲು ಆರಂಭಿಸಿದರು. ಬಸವಣ್ಣನ ಪವಾಡಗಳು ಆಗಿನ ವಿಜಯಪುರದ ಸುಲ್ತಾನನಿಗೆ ತಿಳಿಯಿತು. ಸುಲ್ತಾನನು ಬಸವಣ್ಣನ ಮಹಿಮೆಯನ್ನು ತಿಳಿಯಲು ಖಿಳೇಗಾಂವಿ ಗ್ರಾಮಕ್ಕೆ ತನ್ನ ಸೈನ್ಯದ ಜೊತೆ ಬಂದನು. ಆಗ ಬಸವಣ್ಣನ ಪರೀಕ್ಷೆ ಮಾಡಲು ಮಾಂಸದ ಮುದ್ದೆಯನ್ನು ನೈವೇದ್ಯ ಮಾಡಿದ. ಅದು ದಾಸವಾಳದ ಹೂವುಗಳಾಗಿ ಬದಲಾಯಿತು. ಅದನ್ನು ಕಂಡು ಸುಲ್ತಾನ ಆಶ್ಚರ್ಯ ಚಕಿತನಾಗಿ ಢವಳಪ್ಪ ಅಜ್ಜನನ್ನು ಕರೆದು ನೀನು ದಿನಾಲು ಮಾಡಿದ ನೈವೇದ್ಯವನ್ನು ತಿನ್ನಲಿ ಎಂದು ಹೇಳಿ ನೈವೇದ್ಯವನ್ನು ಗರ್ಭ ಗುಡಿಯಲ್ಲಿ ಇರಿಸಿದ. ಮರುದಿನ ಬಾಗಿಲು ತೆಗೆದು ನೋಡಿದಾಗ ಅವು ಜೇನು ಹುಳುಗಳಾಗಿ ಸುಲ್ತಾನನ ಮತ್ತು ಅವನ ಸೈನಿಕರನ್ನು ಕಚ್ಚತೊಡಗಿದವು. ಆಗ ಸುಲ್ತಾನನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಿದನು. ಅಷ್ಟೇ ಅಲ್ಲದೆ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡನೆಂದು ಮತ್ತು ಇದೇ ಕಾರಣಕ್ಕಾಗಿ ದೇವಸ್ಥಾನದ ಗರ್ಭ ಗುಡಿಯು ಮಸೀದಿ ಆಕಾರದಲ್ಲಿದೆ ಎಂದು ಬಸವಣ್ಣನ ಚರಿತ್ರೆಯಿಂದ ತಿಳಿದು ಬರುತ್ತದೆ.
ವೈಶಿಷ್ಟ್ಯತೆ: ಭಾರತದ ಎಲ್ಲಾ ದೇವಸ್ಥಾನಗಳನ್ನು ನೋಡಿದಾಗ ಬಸವಣ್ಣನ ಮೂರ್ತಿಯ ಮುಂದೆ ಲಿಂಗ ಇರುವುದನ್ನು ನಾವು ನೋಡಿದ್ದೇವೆ. ಆದರೆ ಖಿಳೇಗಾಂವಿ ಬಸವೇಶ್ವರ ದೇವಾಲಯದ ಒಂದು ವಿಶಿಷ್ಟವೇನೆಂದರೆ ಇಲ್ಲಿ ಬಸವಣ್ಣನ ಮೂರ್ತಿಯ ಮುಂದೆ ಶಿವಲಿಂಗ ಇಲ್ಲದಿರುವುದು ಹಾಗೂ ಇದಕ್ಕೆ ಕಾರಣವನ್ನು ಹುಡುಕಿದಾಗ ಇಲ್ಲಿ ಶಿವನೆ ಬಸವಣ್ಣನ ಸ್ವರೂಪದಲ್ಲಿ ಉದ್ಭವ ಮೂರ್ತಿಯಾಗಿ ಕಾಣಿಸಿಕೊಂಡಿರುವುದು ಈ ದೇವಸ್ಥಾನದ ವೈಶಿಷ್ಟ್ಯತೆಯಾಗಿದೆ.
ಜಾತ್ರಾ ಮಹೋತ್ಸವ:
ಪ್ರತಿ ವರ್ಷದಂತೆ ಈ ವರ್ಷವೂ ಇದೇ ಶ್ರೀ ಶಕೆ ೧೯೪೧ ವಿಕಾರಿನಾಮ ಸಂವತ್ಸರ ಮಿತಿ ಚೈತ್ರ ಶು|| ಪ್ರತಿಪದ (ಪಾಡ್ಯ) ಶನಿವಾರ ದಿನಾಂಕ ೦೬/೦೪/೨೦೧೯ ರಂದು ಶ್ರೀ ಬಸವಣ್ಣನ ಬೆಳ್ಳಿಯ ಪಲ್ಲಕ್ಕಿಯು ಸಕಲ ವಾದ್ಯ ಮೇಳದೊಂದಿಗೆ ಖಿಳೇಗಾಂವ ಗೌಡರ ವಾಡೆಗೆ ತೆರಳಿ ಪ್ರತಿ ವರ್ಷದಂತೆ ಅಲ್ಲಿ ವಿಶೇಷ ಪೂಜಾ ವಿಧಾನಗಳು ಜರುಗುವವು ಮತ್ತು ಶ್ರೀ ಬಸವಣ್ಣನ ಪೂಜಾರಿಗಳಿಂದ ಈ ಜಾತ್ರೆಗೆ ಬರುವ ಎಲ್ಲರಿಗೂ ಸಕ್ಕರೆಯ ಪ್ರಸಾದವನ್ನು ಹಂಚಲಾಗುತ್ತದೆ. ಮುಂಜಾನೆ ೧೧.೦೦ ಘಂಟೆಯಿಂದ ಮರುದಿನ ನಸುಕಿನ ೪:೦೦ ಘಂಟೆಯವರೆಗೆ ವಿವಿಧ ಕಲಾ ತಂಡಗಳಿಂದ ವಿಶೇಷ ಕಾರ್ಯಕ್ರಮಗಳು ಜರುಗಿದ ನಂತರ ಪಲ್ಲಕ್ಕಿಯನ್ನು ದೇವಸ್ಥಾನಕ್ಕೆ ತರಲಾಗುತ್ತದೆ. ಜಾತ್ರೆಯ ಅಂಗವಾಗಿ ಪ್ರತಿನಿತ್ಯ ಮುಂಜಾನೆ ೧೦:೦೦ ಘಂಟೆಗೆ ಪಲ್ಲಕ್ಕಿಯನ್ನು ಅಗ್ರಾಣಿಯ ಸಂಗಮನಾಥನ ದರ್ಶನಕ್ಕೆ ಸಕಲ ವಾದ್ಯ ಮೇಳಗಳೊಂದಿಗೆ ಒಯ್ದು ತರಲಾಗುತ್ತದೆ. ಬುಧವಾರ ದಿನಾಂಕ ೧೦/೦೪/೨೦೧೯ ರ ವರೆಗೆ ಜಾತ್ರೆಯು ವೈಭವದಿಂದ ಜರುಗುವುದು ಮತ್ತು ಪ್ರತಿನಿತ್ಯ ಮುಂಜಾನೆ ೮:೦೦ ಗಂಟೆಯಿಂದ ೧೦:೦೦ ಗಂಟೆ ವರೆಗೆ ಮಹಾ ರುದ್ರಾಭಿಷೇಕ ತದನಂತರ ನಿರಂತರ ದಾಸೋಹ ಇರುತ್ತದೆ. ಬುಧವಾರ ದಂದು ಮಹಾ ನೈವೇದ್ಯ ಮತ್ತು ರಾತ್ರಿ ಪಲ್ಲಕ್ಕಿ ಉತ್ಸವವು ಜರುಗುವುದು ಮತ್ತು ಆಶೀರ್ವಾದ ಫಲಗಳ ಲಿಲಾವು ಮಾಡಲಾಗುತ್ತದೆ.
-ಮುರಿಗೆಪ್ಪ ಮಾಲಗಾರ, ಹಳ್ಳೂರು
(ಈ ಲೇಖನವನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ