Latest

ಸಂಕಷ್ಟದಲ್ಲಿ ಭೀಮಗಡ ಅಭಯಾರಣ್ಯದವಾಸಿಗಳು

 

     ಪುನರ್ವಸತಿ ಕಾರ್ಯಕ್ರಮ ಜಾರಿಗೊಳಿಸಲುಬೇಕು ಇಚ್ಛಾಶಕ್ತಿ

  ಪ್ರಗತಿವಾಹಿನಿ ವಿಶೇಷ

ಪಶ್ಚಿಮ ಘಟ್ಟಗಳ ಅತಿ ಸೂಕ್ಷ್ಮ ಜೀವ ವೈವಿಧ್ಯವನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯ 190 ಚಕಿಮೀ ವ್ಯಾಪ್ತಿಯನ್ನು ಹೊಂದಿದ್ದು 13 ಗ್ರಾಮಗಳ 564 ಕುಟುಂಬಗಳು ಅಭಯಾರಣ್ಯದ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು ಸುಮಾರು 2900 ಜನಸಂಖ್ಯೆ ಇದೆ. ಇದರ ಜೊತೆಗೆ ಜಾನುವಾರುಗಳ ಸಂಖ್ಯೆ ಅಂದಾಜು 1500 ರಷ್ಟಿದೆ. ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಭೀಮಗಡ ಅಭಯಾರಣ್ಯ ಕೂಡಒಂದಾಗಿದೆ. ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಇಲ್ಲಿನ ಜನ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಕಾಯ್ದೆಗಳ ಕಾರಣಗಳಿಂದ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದು ವರ್ಷವಿಡೀ ಅದರಲ್ಲೂ ವಿಶೇಷವಾಗಿ ಮಳೆಗಾಲದಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಯಾವುದಾದರೂ ಕಾಯಿಲೆ ಬಂದರೆ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಹಳ್ಳಕೊಳ್ಳ ದಾಟಿ ಹಲವಾರು ಕಿಮೀ ಕಾಡಿನಲ್ಲಿ ನಡೆದುಕೊಂಡು ಹೆಮ್ಮಡಗಾ ಅಥವಾ ನೆರ್ಸಾ ಗ್ರಾಮದ ತನಕ ಬರುವುದು ಅನಿವಾರ್ಯವಾಗಿದೆ. ಜೊತೆಗೆ ತಮ್ಮ ಜಾನುವಾರುಗಳು ಹುಲಿ, ಚಿರತೆ ಮತ್ತಿತರ ವನ್ಯಜೀವಿಗಳಿಗೆ ಆಹಾರವಾಗುತ್ತಿರುವುದು ಗ್ರಾಮಸ್ಥರಿಗೆ ಚಿಂತೆಯಾಗಿದೆ. ಇದರಜೊತೆಗೆ ತಾವು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡುಹಂದಿ, ಕಾಡುಕೋಣ ಮತ್ತಿತರ ಪ್ರಾಣಿಗಳು ಹಾಳು ಮಾಡುತ್ತಿರುವುದು ಇವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇದರ ಜೊತೆಯಲ್ಲಿ ಕರಡಿ ಮುಂತಾದ ಪ್ರಾಣಿಗಳ ದಾಳಿಯಲ್ಲಿ ಸ್ಥಳೀಯರು ಜೀವ ಕಳೆದುಕೊಂಡಿರುವ ಹಾಗೂ ಗಂಭೀರವಾಗಿ ಗಾಯಗೊಂಡಿರುವ ಹಲವಾರು ನಿದರ್ಶನಗಳು ಇವೆ. ಇವೆಲ್ಲ ಸಮಸ್ಯೆಗಳು ವನ್ಯಜೀವಿ ಸಂರಕ್ಷಣೆ ಕಾರ್ಯದಲ್ಲಿ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿವೆ. ಅಭಯಾರಣ್ಯ ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಖಾನಾಪುರ ಮುಂತಾದೆಡೆ ಸಂಬಂಧಿಕರ ಮನೆಯಲ್ಲೋ, ಹಾಸ್ಟೆಲ್‌ನಲ್ಲೋ ಇಟ್ಟು ಓದಿಸುತ್ತಿದ್ದಾರೆ. ಬೆಳೆಹಾನಿ, ಪ್ರಾಣಹಾನಿ, ಜಾನುವಾರು ಹತ್ಯೆಗಳಿಗೆಪರಿಹಾರ ನೀಡುವುದರ ಜೊತೆಗೆ ಮೂಲ ಸೌಲಭ್ಯಗಳನ್ನು ಕಾನೂನಿನಡಿಯಲ್ಲಿ ಒದಗಿಸುವುದು ಅರಣ್ಯ ಇಲಾಖೆಗೆ ಸುಲಭದ ಕೆಲಸವಲ್ಲ.

ಈ ಸಮಸ್ಯೆ ಹಾಗೂ ಸವಾಲುಗಳು ರಾಜ್ಯದ ಬಹುತೇಕ ಎಲ್ಲ ಸಂರಕ್ಷಿತ ಪ್ರದೇಶಗಳಲ್ಲಿ ಇದ್ದೇ ಇವೆ. ಆದ್ದರಿಂದ ರಾಜ್ಯದ ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯಉದ್ಯಾನವನಹಾಗೂ ಅಭಯಾರಣ್ಯದ ವ್ಯಾಪ್ತಿಯಲ್ಲಿ ವಾಸಿಸುವ ಜನರು ಸ್ವಇಚ್ಛೆಯಿಂದ ಕಾಡಿನಿಂದ ಹೊರಬಂದು ಸರ್ಕಾರದ ಪುನರ್ವಸತಿ ಯೋಜನೆಯ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಪುನರ್ವಸತಿ ಕಾರ್ಯಕ್ರಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳಲು ” ಪುನರ್ವಸತಿಘಟಕ ” ಸ್ಥಾಪಿಸಲು ಸರ್ಕಾರವು 2015-16 ನೇಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಣೆ ಮಾಡಿದೆ. ಹಾಗೂ ಈ ಕುರಿತಂತೆ ಜುಲೈ 15, 2015 ರಂದುಆದೇಶ ಹೊರಡಿಸಿರುವ ಸರ್ಕಾರ ಬೆಳಗಾವಿ ಸೇರಿದಂತೆ ರಾಜ್ಯದ ನಾಲ್ಕು ಕಡೆ ಪುನರ್ವಸತಿ ಘಟಕ ಸ್ಥಾಪಿಸಲು ಅನುಮೋದನೆ ನೀಡಿದೆ.  ಹಾಗೂ ಈಗಾಗಲೇ ಪುನರ್ವಸತಿ ಘಟಕ ಸ್ಥಾಪನೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲು ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಫೆಬ್ರವರಿ 2016 ರಲ್ಲೇ ಪತ್ರ ಬರೆದಿದ್ದರು. ಈ ಪತ್ರದ ಮೇರೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮಾರ್ಚ್ 2016 ರಲ್ಲೇಪತ್ರ ಬರೆದು ಪುನರ್ವಸತಿ ಘಟಕ ಸ್ಥಾಪನೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿಕೊಂಡಿದ್ದರು.  ಆದರೆ ಒಂದು ವರ್ಷ ಕಳೆದರೂ ಕಂದಾಯ ಇಲಾಖೆಯಿಂದ ಈ ಕುರಿತು ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಏಪ್ರಿಲ್ 24, 2017 ರಂದುಜಿಲ್ಲಾಧಿಕಾರಿಗಳಿಗೆ ಮತ್ತೊಂದು ಪತ್ರ ಬರೆದ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಕುರಿತು ಸರ್ಕಾರದ ಮಟ್ಟದಲ್ಲಿ ಕ್ರಮ ಜರುಗಿಸಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಇವರನ್ನು ಕೋರುವಂತೆ ಗಮನ ಸೆಳೆದಿದ್ದಾರೆ. ತಾಳೆವಾಡಿ ಗ್ರಾಮಸ್ಥರು ತಾವು ಸ್ವ ಇಚ್ಛೆಯಿಂದ ಹೊರಬರಲು ತಯಾರಿದ್ದು ಈ ಕುರಿತು ತಮ್ಮ ಪುನರ್ವಸತಿಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.

ಪುನರ್ವಸತಿಯಿಂದ ಜನರು ಹಾಗೂ ವನ್ಯಜೀವಿಗಳಿಬ್ಬರಿಗೂ ಅನುಕೂಲವೇ. ಹಲವಾರು ದಶಕಗಳಿಂದ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದು ಮೂಲಸೌಲಭ್ಯಗಳಿಂದ ವಂಚಿತರಾಗಿರುವ ಜನರೂ ಕೂಡ ಪ್ರತಿನಿತ್ಯ ವನ್ಯಜೀವಿಗಳ ಜೊತೆ ಜಟಾಪಟಿ ನಡೆಸುವುದು ತಪ್ಪುತ್ತದೆ ಹಾಗೂ ತಮ್ಮ ಮುಂದಿನ ಪೀಳಿಗೆಗೆ ಒಂದು ಸುಭದ್ರ ಭವಿಷ್ಯವನ್ನು ನಿರ್ಮಿಸಲು ಸಹಾಯವಾಗುತ್ತದೆ. ಇನ್ನೊಂದೆಡೆ ಮಾನವನ ಹಸ್ತಕ್ಷೇಪ ಕಡಿಮೆಯಾಗಿ ವನ್ಯಜೀವಿಗಳಿಗೂ ನಿರಾತಂಕವಾದ ವಾತಾವರಣ ನಿರ್ಮಾಣವಾಗುವುದರ ಜೊತೆಗೆ ಮಾನವ-ವನ್ಯಜೀವಿಸಂಘರ್ಷ ಕಡಿಮೆಯಾಗುತ್ತದೆ. ಈಗಾಗಲೇ ರಾಜ್ಯದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುನರ್ವಸತಿ ಯೋಜನೆ ಅಡಿ ಪ್ಯಾಕೇಜ್ ಪಡೆದು ಕಾಡಿನಿಂದ ಹೊರಬಂದು ಜೀವನ ಕಂಡುಕೊಂಡಿರುವ ಜನರು ಉತ್ತಮ ಗುಣಮಟ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಇನ್ನೊಂದೆಡೆ ಕಾಡಿನೊಳಗೆ ಜನರ ಸಂಚಾರ ವಿರಳವಾಗಿ ವನ್ಯಜೀವಿಗಳ ಸಂತತಿ ಗಣನೀಯವಾಗಿ ಹೆಚ್ಚಿದೆ. ಇದೇ ರೀತಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಕೂಡ ಪುನರ್ವಸತಿ ಯೋಜನೆ ಜಾರಿಯಲ್ಲಿದೆ. ಇನ್ನುಉತ್ತಮ ಹಾಗೂ ದೂರದೃಷ್ಟಿ ಹೊಂದಿದ್ದ ದಕ್ಷ ಅರಣ್ಯಾಧಿಕಾರಿಗಳ ಪ್ರಯತ್ನದಿಂದ ಬಂಡೀಪುರದಲ್ಲಿ ಪುನರ್ವಸತಿ ಕಾರ್ಯವನ್ನು ಬಹುವರ್ಷಗಳ ಹಿಂದೆಯೇ ಕೈಗೊಂಡಿದ್ದರ ಪರಿಣಾಮ ಇಂದು ಬಂಡೀಪುರ ಇಡೀ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಪ್ರದೇಶವಾಗಿದೆ. ಅಷ್ಟೇ ಏಕೆ ನೆರೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಕೂಡ ಪುನರ್ವಸತಿ ಕಾರ್ಯ ನಡೆಯುತ್ತಿದೆ.

ಆದರೆ ಪುನರ್ವಸತಿ ಕಾರ್ಯ ಜಾರಿಗೊಳಿಸುವಾಗ ಅರಣ್ಯ ಇಲಾಖೆ, ಕಂದಾಯಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮಧ್ಯೆ ಸಮನ್ವಯತೆ ಬಹು ಮುಖ್ಯ. ಹಾಗೂ ಪ್ಯಾಕೇಜಿನ ಪರಿಹಾರ ಮೊತ್ತ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ತಲುಪಿಸುವುದು ಅತಿ ಮುಖ್ಯ. ಹಾಗೆಯೇ ಅವರಿಗೆ ಒದಗಿಸಿಕೊಡುವ ಮೂಲ ಸೌಲಭ್ಯಗಳ ಗುಣಮಟ್ಟವೂ ಕೂಡ ಒಳ್ಳೆಯದಾಗಿರಬೇಕು. ಅಂದಾಗ ಮಾತ್ರ ಪುನರ್ವಸತಿ ಯೋಜನೆ ಸಾರ್ಥಕವಾಗಲು ಸಾಧ್ಯ. ಇವೆಲ್ಲದಕ್ಕಿಂತ ಹೆಚ್ಚಾಗಿ ರಾಜಕೀಯ ಇಚ್ಛಾ ಶಕ್ತಿ ಕೂಡ ಪುನರ್ವಸತಿ ಯೋಜನೆಗೆ ಅತೀ ಮುಖ್ಯ.

ಅರಣ್ಯ ಇಲಾಖೆ ಪುನರ್ವಸತಿ ಕಾರ್ಯಕ್ರಮಕ್ಕೆ ಪ್ರಯತ್ನಿಸುತ್ತಿದ್ದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬೆಳಗಾವಿಯಲ್ಲಿ ಪುನರ್ವಸತಿ ಘಟಕ ಸ್ಥಾಪಿಸಲು ಈ ಕೂಡಲೇ ಕ್ರಮ ಕೈಗೊಳ್ಳುವುದು ಅತ್ಯವಶ್ಯವಾಗಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button