ವಿಶ್ವಾಸ ಸೋಹೋನಿ
ಇಂದಿನ ಜಗತ್ತಿನಲ್ಲಿ ನಿಜವಾದ ಸ್ನೇಹ-ಪ್ರೀತಿಯ ಕೊರತೆಯು ಎದ್ದು ಕಾಣುತ್ತಿದೆ. ಸಂಬಂಧಗಳಲ್ಲಿ ಆತ್ಮೀಯತೆ ದೂರವಾಗಿದೆ. ಮೊಬೈಲ್‍ಗಳಲ್ಲಿ ಮಾತನಾಡುವವರು ಪಕ್ಕದಲ್ಲಿ ಕುಳಿತವರ ಜೊತೆಗೆ ಮಾತನಾಡುವುದು ಕಡಿಮೆಯಾಗಿದೆ. ಫೇಸ್‍ಬುಕ್ ಮತ್ತು ವಾಟ್ಸಪ್ ಗಳಲ್ಲಿ ತಲ್ಲೀನರಾಗಿದ್ದಾರೆ. ಕಥೆ-ಕಾದಂಬರಿ, ಕವನಗಳು ಹಾಗೂ ಸಾಹಿತ್ಯದ ಅಧ್ಯಯನ ಮಾಡುತ್ತಿಲ್ಲ. ಟಿವಿ ಪರದೆಯ ಮೇಲೆ ಬರುವ ನೆಚ್ಚಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಮಯ ನೀಡಲಾಗುತ್ತದೆಯೇ ಹೊರತು ಮನೆಗೆ ಬಂದ ಅತಿಥಿಗಳೊಂದಿಗೆ ಪ್ರೀತಿಯಿಂದ ಮಾತನಾಡಲು ಸಮಯವಿರುವುದಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಲು ನಮ್ಮಲ್ಲಿ ಆಧ್ಯಾತ್ಮಿಕ ಕ್ರಾಂತಿ ಆಗಬೇಕು.
ಭಾರತದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ ಸಂಕ್ರಾಂತಿಗೆ ತನ್ನದೇ ಆದ ವಿಶೇಷತೆ ಮತ್ತು ಆಧ್ಯಾತ್ಮಿಕ ಹಿನ್ನಲೆ ಇದೆ. ಈ ಹಬ್ಬವು ಪ್ರತಿ ವರ್ಷ ಜನವರಿ ಮಾಸದ 14 ತಾರೀಖಿನಂದು ಬರುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗೋವ, ಸಿಕ್ಕಿಂ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒರಿಸ್ಸಾ, ಉತ್ತರಪ್ರದೇಶ, ಉತ್ತರಾಂಚಲ, ಪಶ್ಚಿಮ ಬಂಗಾಳದಲ್ಲಿ
ಮಕರ ಸಂಕ್ರಾಂತಿ’ ಅಥವಾ ಸಂಕ್ರಾಂತಿ' ಎಂದು; ತಮಿಳುನಾಡಿನಲ್ಲಿ
ಪೊಂಗಲ್'(ಹೊಸ ವರ್ಷದ ಹಬ್ಬ) ಎಂದು; ರಾಜಸ್ಥಾನ, ಗುಜರಾತ್‍ನಲ್ಲಿ ‘ಉತ್ತರಾಯಣ’ ಎಂದು; ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಪಂಜಾಬ್‍ನಲ್ಲಿ ‘ಮಾಘಿ’ ಎಂದು; ಅಸ್ಸಾಂನಲ್ಲಿ ‘ಮಾಘ ಬಿಹು;’ ಕಾಶ್ಮೀರದಲ್ಲಿ ‘ಶಿಶುರ ಸೇಂಕ್ರಾತ’; ಶಬರಿಮಲೈ ಬೆಟ್ಟದಲ್ಲಿ ‘ಮಕರ ವಿಲಕ್ಕು’; ಎಂದು ಸಂಕ್ರಾಂತಿ ಹಬ್ಬವನ್ನು ಭಾರತಾದ್ಯಂತ ಆಚರಿಸಲಾಗುತ್ತದೆ. ನೇಪಾಳದಲ್ಲಿ ‘ಮಾಘಿ’, ಬರ್ಮಾದಲ್ಲಿ ‘ಥಿಂಗ್ಯಾನ’; ಕಾಂಬೋಡಿಯಾದಲ್ಲಿ ‘ಮೊಹಸಂಗ್ರನ’, ಥೈಲ್ಯಾಂಡ್‍ನಲ್ಲಿ ‘ಸಂಗ್ರಾನ’ ಎಂದು ಆಚರಿಸುತ್ತಾರೆ. ಈ ಹಬ್ಬದ ಮೊದಲನೆಯ ದಿನವನ್ನು ಭೋಗಿ' ಎರಡನೇ ದಿನವನ್ನು
ಕರಿ’ ಎಂದು ಹೇಳಲಾಗುತ್ತದೆ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ `ಮಕರ ಸಂಕ್ರಾಂತಿ’. ಭೋಗಿ ಹಬ್ಬದಂದು ಋತುರಾಜ ಇಂದ್ರನನ್ನು ಪೂಜಿಸಿದರೆ, ಸಂಕ್ರಾಂತಿಯಂದು ಸೂರ್ಯನನ್ನು ಪೂಜಿಸಲಾಗುತ್ತದೆ. ಮಕರ-ಸಂಕ್ರಾಂತಿಯು ದೇವತೆಗಳ ದಿನದ ಆರಂಭವಾಗಿದೆ. ಉತ್ತರಾಯಣವೆಂದರೆ ದೇವಾಯಣ, ದಕ್ಷಿಣಾಯಣವೆಂದರೆ ಪಿತ್ರಾಯಣ. ಭಗೀರಥನ ಪ್ರಯತ್ನದಿಂದ ಗಂಗೆ ಧರೆಗೆ ಬಂದು ಸಗರ ಮಹಾರಾಜನ 60,000 ಮಕ್ಕಳಿಗೆ ಮುಕ್ತಿಯನ್ನು ನೀಡಿರುವ ದಿನವು ಇದೇ ಆಗಿದೆ. ಆದ್ದರಿಂದ ತ್ರಿವೇಣಿ ಸಂಗಮ ಪ್ರಯಾಗರಾಜ, ಕುಂಭ ಮೇಳವು ನಡೆಯುತ್ತದೆ. ಇದೇ ದಿನದಂದು ಮಹಾಭಾರತದ ಇಚ್ಛಾ ಮರಣಿ ಭೀಷ್ಮ ಪಿತಾಮಹನು ದೇಹ ತ್ಯಜಿಸಿದನೆಂದು ಹೇಳಲಾಗುತ್ತದೆ. ರಾಜಸ್ಥಾನ ಮತ್ತು ಗುಜರಾತ್‍ಗಳಲ್ಲಿ ವಿಶೇಷವಾಗಿ ಈ ಹಬ್ಬದಂದು ಗಾಳಿಪಟ ಉತ್ಸವ ನಡೆಯತ್ತದೆ. ಕರ್ನಾಟಕದ ಬೆಳಗಾವಿಯಲ್ಲಿ ಅನೇಕ ವರ್ಷಗಳಿಂದ ಗಾಳಿಪಟ ಉತ್ಸವವನ್ನು ಆಚರಿಸಲಾಗುತ್ತದೆ.
ಭೋಗಿ ಹಬ್ಬದಂದು ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಲೆಯನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಸಂಕ್ರಾಂತಿಯ ದಿನದಂದು ಎಳ್ಳು-ಬೆಲ್ಲ ಸೇವಿಸುವ ಪದ್ಧತಿಯಿದೆ. ಕಬ್ಬು, ಎಳ್ಳು, ಬೆಲ್ಲ, ಸಜ್ಜೆ, ಗೆಜ್ಜರಿ, ಕಡಲೆ ಮುಂತಾದ ಆಹಾರ ಪದಾರ್ಥಗಳ ಸೇವನೆಯು ಚಳಿಗಾಲದಲ್ಲಿ ದೈಹಿಕ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಅಂದು ವಿಶೇಷವಾಗಿ ನದಿ, ಕೆರೆ, ಅಥವಾ ಹಳ್ಳಗಳಲ್ಲಿ ಸ್ನಾನವನ್ನು ಮಾಡುತ್ತಾರೆ, ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆ, ದಾನ ಧರ್ಮವನ್ನು ಮಾಡಿದಾಗ `ಸಂಕ್ರಾಂತಿ ಪುರುಷ” ಒಳ್ಳೆಯ ಫಲವನ್ನು ನೀಡುವನು ಎಂದು ನಂಬುತ್ತಾರೆ. ಸಂಕ್ರಾಂತಿಯ ದಿನ ಪರಸ್ಪರ ಭೇಟಿಯಾಗಿ ಎಳ್ಳು-ಬೆಲ್ಲವನ್ನು ಕೊಟ್ಟು, ಒಳ್ಳೆಯದನ್ನೇ ಮಾತನಾಡಿ ಎಂದು ಹೇಳುತ್ತಾರೆ.
ಭಾರತೀಯ ಹಬ್ಬಗಳಲ್ಲಿ ಜಾತಿ, ಮತ, ವರ್ಣ ಭಾಷಾ-ಭೇದ ಮತ್ತು ಇತರೆ ಭೇದ-ಭಾವಗಳನ್ನು ಮರೆತು ಸ್ನೇಹ, ಪ್ರೀತಿ, ಮಧುರತೆ ಮತ್ತು ಭ್ರಾತೃತ್ವದ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಎಳ್ಳು ಸ್ನೇಹ ಮತ್ತು ಪ್ರೀತಿಯ ಸಂಕೇತವಾಗಿದೆ; ಬೆಲ್ಲ ಮಧುರತೆಯ ಪ್ರತೀಕವಾಗಿದೆ. ನಮ್ಮಲ್ಲಿ ಪ್ರೀತಿ, ಸ್ನೇಹ ಬೆಳೆಯಬೇಕೆಂದರೆ, ನಾವು ನಮ್ಮ ದೇಹದ ಧರ್ಮಗಳನ್ನು ಮರೆತು, ವಿಶ್ವಕ್ಕೆ ಒಡೆಯನಾಗಿರುವ ಒಬ್ಬ ನಿರಾಕಾರ ಭಗವಂತನಿಗೆ ನಾವೆಲ್ಲರೂ ಮಕ್ಕಳು ಎಂದು ತಿಳಿದುಕೊಳ್ಳಬೇಕು. ಆ ಭಗವಂತನನ್ನೇ ಅಲ್ಲಾಹ, ಖುದಾ, ಗಾಡ್, ಈಶ್ವರನೆಂದು ಕರೆಯುತ್ತಾರೆ. ನಾವು ಅವನ ಸಂತಾನರು. ನಾವು ಆತ್ಮಜ್ಯೋತಿಗಳಿಗೆ ಯಾವುದೇ ಜಾತಿಯಿಲ್ಲ, ಆ ಪರಂಜ್ಯೋತಿ ಪರಮಾತ್ಮನಿಗೆ ನಾವೆಲ್ಲಾ ಆತ್ಮಜ್ಯೋತಿಗಳು ಮಕ್ಕಳಾಗಿದ್ದೇವೆ. ನಾವೆಲ್ಲರೂ ಆತ್ಮ ಜ್ಯೋತಿಗಳೆಂದು ತಿಳಿದು ವ್ಯವಹರಿಸಬೇಕಾಗಿದೆ. ಬಸವಣ್ಣನವರು ಹೇಳಿದಂತೆ ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ' ಎನ್ನುವಂತೆ ಸರ್ವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕಯ್ಯ, ಎಂಬಂತೆ ನಮ್ಮ ಮಾತುಗಳು ಮುತ್ತಿನಂತೆ ಸ್ಪಷ್ಟ, ಮಿತ ಹಾಗೂ ಮಧುರವಾಗಿರಬೇಕು, ‘ಕಳಬೇಡ ಕೊಲಬೇಡ ಹುಸಿಯು ನುಡಿಯಲು ಬೇಡ’ ಎಂಬಂತೆ ನಮ್ಮ ಆಚಾರ-ವಿಚಾರವಿರಬೇಕು. ಆದ್ದರಿಂದಲೇ ಹಿಂದಿ ಭಾಷೆಯಲ್ಲಿ
ಗುಡ್ ನಹಿ ದೋ, ಲೆಕಿನ್ ಗುಡ್ ಜೈಸಾ ಮೀಠಾ ತೊ ಬೋಲೋ’ ಎಂದು ಹೇಳಲಾಗುತ್ತದೆ. ಅಂದರೆ ಬೆಲ್ಲವನ್ನು ಕೊಡದಿದ್ದರೂ ಚಿಂತೆಯಿಲ್ಲ, ಬೆಲ್ಲದಂತೆ ಸಿಹಿ ಮಾತನಾಡಿ' ಎಂದು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಎಳ್ಳು ಮತ್ತು ಸಕ್ಕರೆ ಕುಸುರಿಕಾಳನ್ನು ಹಂಚುವಾಗ ‘ತಿಳ್ಗುಳ್ ಘ್ಯಾ ಆಣಿ ಗೋಡ್ ಗೋಡ್ ಬೋಲಾ’ ಎಂದು ಹೇಳುತ್ತಾರೆ. ನಮ್ಮಲ್ಲಿ
ವಸುಧೈವ ಕುಟುಂಬಕಂ’ ಎಂಬ ಭಾವನೆ ಜಾಗೃತವಾದಾಗ ಮಾತ್ರ ಸ್ನೇಹ ಪ್ರೀತಿಯು ಸಹಜವಾಗಿ ಬೆಳೆಯುತ್ತದೆ. ಆತ್ಮಿಕ ಭಾವನೆಯಿಂದ ಪರಸ್ಪರರಲ್ಲಿ ಮಧುರತೆ ಕಂಡು ಬರುತ್ತದೆ. ಆಗ ಮಾತ್ರ ನಮ್ಮಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಪರಿವರ್ತನೆ ಉಂಟಾಗುತ್ತದೆ. ಬನ್ನಿ, ಈ ರೀತಿ ನಾವು ಎಲ್ಲರೂ ಭಗವಂತನ ಛತ್ರಛಾಯೆಯಲ್ಲಿದ್ದು, ಮಂಗನ ಕಾಯಿಲೆ, ಎಚ್.ಎಮ್.ಪಿ.ವಿ. ಮುಂತಾದ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗದೇ ಅರ್ಥಗರ್ಭಿತವಾದ ಸಂಕ್ರಾಂತಿ ಹಬ್ಬವನ್ನು ಆಚರಿಸೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ