Latest

ಹಸಿರಿನ ಮಧ್ಯೆ ನಿಂತ ಈ ಸುಂದರ ಚರ್ಚ್ ಗೆ ಈಗ 150 ವರ್ಷ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಲೆನಾಡಿನ ಸೆರಗಿನಲ್ಲಿರುವ ಬೆಳಗಾವಿಯ ನಿಸರ್ಗ ಸಂಪತ್ತನ್ನು ಸರಿಯಾಗಿ ಬಳಸಿಕೊಂಡಿದ್ದರೆ ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುವ ಎಲ್ಲ ಅವಕಾಶಗಳಿದ್ದವು. ಜಿಲ್ಲೆಯ ಯಾವ ಮೂಲೆಗೆ ಹೋದರೂ ಒಂದೊಂದು ಅತ್ಯಪರೂಪವಾದ ನಿಸರ್ಗ ನಿರ್ಮಿತ ತಾಣಗಳು, ಜಲಪಾತಗಳು, ಕಲ್ಲು ಗುಡ್ಡಗಳು, ಹಚ್ಚಹಸಿರಿನ ದಟ್ಟ ಕಾಡುಗಳು, ಹಳ್ಳ ಕೊಳ್ಳಗಳು ಕಾಣಸಿಗುತ್ತವೆ. ಆದರೆ ಇವನ್ನೆಲ್ಲ ಪ್ರವಾಸಿ ದೃಷ್ಟಿಯಿಂದ ನೋಡುವ ಯೋಚಿಸುವ, ಕಾರ್ಯಯೋಜನೆ ರೂಪಿಸುವ ಯಾವ ಕೆಲಸವೂ ಆಗಿಲ್ಲ.

ಬೆಳಗಾವಿ ನಗರ ಮಧ್ಯದಲ್ಲಿರುವ ಕ್ಯಾಂಪ್ ಪ್ರದೇಶ ಕೂಡ ಒಂದು ಅಪರೂಪದ ತಾಣ. ಹಾಗೆ ಸುಮ್ಮನೆ ಸುತ್ತಾಡಿದರೂ ಮನಸ್ಸಿಗೆ ಮುದ ನೀಡುವ ನಿಸರ್ಗ ಇಲ್ಲಿಯದು. ಹಸಿರಿನ ಜೊತೆಗೆ ಇಲ್ಲಿರುವ ಒಂದೊಂದು ಕಟ್ಟಡವೂ ಐತಿಹಾಸಿಕವಾದದ್ದು, ವಿಶೇಷ ವಿನ್ಯಾಸಗಳಿಂದ ಕೂಡಿದ್ದು. ಇಲ್ಲಿರುವ ಒಂದೊಂದು ಕಟ್ಟಡವೂ ಪ್ರವಾಸಿ ತಾಣವಾಗುವ ಅರ್ಹತೆ ಹೊಂದಿವೆ.

ಇಂತಹ ಕ್ಯಾಂಪ್ ನ ಹಸಿರಿನ ಮಧ್ಯೆ ಸುಂದರವಾಗಿ ನಿರ್ಮಿತ ಕಟ್ಟಡವೊಂದು ಬಹುಪಾಲು ಬೆಳಗಾವಿಗರಿಗೇ ಅಪರಿಚಿತ.

ಅಕ್ಷರಶಃ ಮತ್ತೆ ಮತ್ತೆ ನೋಡಬೇಕೆನ್ನುವಷ್ಟು ಸುಂದರವಾಗಿ ನಿರ್ಮಾಣಗೊಂಡಿರುವ ಈ ಚರ್ಚ್ ಗೆ ಗ 150 ವರ್ಷ. ಹೊರಗಿನಿಂದ ಸುಮಾರು 225 ಅಡಿ ಎತ್ತರವಿರುವ, ಅಪರೂಪದ ವಿನ್ಯಾಸದ ಚರ್ಚ್ ಒಳಗಡೆ ಸುಮಾರು 180 ಅಡಿ ಎತ್ತರವಾಗಿದೆ. ಒಳಗೆ ಪ್ರವೇಶಿಸಿದ ತಕ್ಷಣ ಮನಸ್ಸಿಗೆ ಆಧ್ಯಾತ್ಮಿಕ ಭಾವನೆಯನ್ನು ತುಂಬುವಂತೆ ವಿನ್ಯಾಸಗೊಳಿಸಲಾಗಿರುವ ಇಲ್ಲಿಯ ಕೆತ್ತನೆಯ ಕಲಾಕೃತಿಗಳು, ಪುರಾತನ ಗೋಡೆಗಳು, ಸಾಗವಾನಿ ಕಟ್ಟಿಗೆಯಿಂದ ಮಾಡಲ್ಪಟ್ಟಿರುವ ಪೀಠೋಪಕರಣಗಳು, ಪುರಾತನ ಕಲಾತ್ಮಕ ವಿನ್ಯಾಸ ಮನಸೂರೆಗೊಳ್ಳುತ್ತದೆ.

1800ನೇ ಇಸ್ವಿಯ ಆರಂಭದಲ್ಲಿ ಬ್ರಿಟೀಶ್ ಸೇನೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅವರಿಗೆ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಸಣ್ಣದಾದ ಚರ್ಚ್ ನಿರ್ಮಾಣ ಮಾಡಲಾಯಿತು. ಈ ಚರ್ಚ್ ಗೆ ಆಲ್ ಸೇಂಟ್ಸ್ ಕ್ರೈಸ್ಟ್ ಚರ್ಚ್ ಛಾಪೇಲ್ ಎಂದು ನಾಮಕರಣ ಮಾಡಲಾಗಿತ್ತು.

ನಂತರದ ದಿನಗಳಲ್ಲಿ ಬ್ರಿಟೀಶ್ ಸೇನೆ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ಸೇನೆಯ ಎಂಜಿನಿಯರ್ ಗಳು 1863-64ರಲ್ಲಿ ನೂತನ ಚರ್ಚ್ ನಿರ್ಮಾಣ ಕಾರ್ಯ ಆರಂಭಿಸಿದರು. 1869 ಏಪ್ರಿಲ್ 15ರಂದು ಅಂದಿನ ಬಾಂಬೆ ಪ್ರೆಸಿಡೆನ್ಸಿ ಬಿಷಪ್ ಮತ್ತು ಬಾಂಬೆ ಪ್ರೆಸಿಡೆನ್ಸಿಯ ಗವರ್ನರ್ ಚರ್ಚ್ ಉದ್ಘಾಟಿಸಿದರು. ಚರ್ಚ್ ನ ಹೆಸರನ್ನು ದ ಚರ್ಚ್ ಆಫ್ ಸೇಂಟ್ ಮೇರಿ ದ ವರ್ಜಿನ್ ಎಂದು ಮರು ನಾಮಕರಣ ಮಾಡಲಾಯಿತು.

1930ರಲ್ಲಿ ಈ ಚರ್ಚ್ ನ ಹೆಸರನ್ನು ಸೇಂಟ್ ಮೇರೀಸ್ ಚರ್ಚ್ ಎಂದು ಪುನರ್ ನಾಮಕರಣ ಮಾಡಲಾಯಿತು. ಸ್ಥಳೀಯರು ಇಂದಿಗೂ ಕೂಡ ಚರ್ಚ್ ಆಫ್ ಇಂಗ್ಲಂಡ್ ಅಥವಾ ಹೈ ಚರ್ಚ್ ಎಂದೇ ಕರೆಯುತ್ತಾರೆ.

ಈ ಚರ್ಚ್ ನ್ನು ಸ್ಥಳೀಯವಾಗಿ ಲಭ್ಯವಿರುವ ಸಾಮಗ್ರಿಗಳನ್ನು ಬಳಸಿ ಗೋಥಿಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗೋಕಾಕದಿಂದ ಪಿಂಕ್ ಸ್ಟೋನ್ ಗಳನ್ನು, ದಾಂಡೇಲಿಯಿಂದ ಸಾಗವಾನಿ ಮತ್ತು ಬೀಟೆಯ ಕಟ್ಟಿಗೆಗಳನ್ನು ತರಿಸಿ ಬಳಸಲಾಗಿದೆ.

ಬೆಲ್ಜಿಯಂನಿಂದ ತರಿಸಲಾಗಿರುವ ಕ್ರೈಸ್ತನ ಜೀವನ ಸಂದೇಶ ಸಾರುವ 12 ವಿವಿಧ ರೀತಿಯ ಚಿತ್ರಗಳನ್ನು ಹೊಂದಿರುವ ಗಾಜಿನ ಕಿಟಕಿ ಮೋಲ್ಬಾಗದಲ್ಲಿ ಗಮನ ಸೆಲೆಯುತ್ತಿದೆ. ಈ ಚರ್ಚಿನ ಒಳಗೆ ಪ್ರವೇಶಿಸಿದರೆ ಮನಸ್ಸಿನಲ್ಲಿ ಆಧ್ಯಾತ್ಮಿಕತೆ ಮತ್ತು ಅಗಾಧವಾದ ಇತಿಹಾಸದ ಕಲ್ಪನೆ ಮೂಡುತ್ತದೆ.

ಬ್ರಿಟೀಶರು ಭಾರತ ಬಿಟ್ಟು ತೆರಳುವಾಗ ಚರ್ಚನ್ನು ಭಾರತೀಯ ಸೇನೆಗೆ ವಹಿಸಲಾಯಿತು. 1958ರಲ್ಲಿ ನಾಗರಿಕ ಆಡಳಿತಕ್ಕೆ ಹಸ್ತಾಂತರಿಸಲಾಯಿತು. ಸೇಂಟ್ ಮೇರಿ ಚರ್ಚ್ ನ ಆಡಳಿತವನ್ನು ಈಗ ಬಾಂಬೆ ಡೈಯೋಸಿಸನ್ ಟ್ರಸ್ಟ್ ಅಸೋಸಿಯೇಶನ್ ಪ್ರೈವೇಟ್ ಲಿಮಿಟೆಡ್ ನೋಡಿಕೊಳ್ಳುತ್ತಿದೆ. ಪಶ್ಚಿಮ ಭಾರತದ ಎಲ್ಲಾ ಆಂಗ್ಲಿಕನ್ ಚರ್ಚ್ ಗಳ ಆಡಳಿತವನ್ನೂ ಇದೇ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಸೇಂಟ್ ಮೇರಿ ಚರ್ಚ್ ಆಂಗ್ಲಿಕನ್ ಪದ್ಧತಿಯ ಪೂಜಾವಿಧಾನವನ್ನು ಮುಂದುವರಿಸಿಕೊಂಡು ಬಂದಿದೆ.

ಬೆಳಗಾವಿಯ ಕೇಂದ್ರ ಪ್ರದೇಶದಲ್ಲಿರುವ ಈ ಸುಂದರವಾದ ಚರ್ಚ್ ಬರುವ ಏಪ್ರಿಲ್ 14ರಂದು 150 ವರ್ಷಕ್ಕೆ ಅಡಿ ಇಡುತ್ತಿದ್ದು, ಅಂದು ವಿಶೇಷವಾದ ಪ್ರಾರ್ಥನೆಯ ಮೂಲಕ ಸಂಭ್ರಮಾಚರಣೆ ಮಾಡಲಾಗುತ್ತಿದೆ.

ಚರ್ಚ್ ಕಾರ್ಯದರ್ಶಿ ಎ.ಎನ್.ಜ್ಞಾನಕನ್ ಮತ್ತು ಟಿ.ಎಸ್.ಆಸಂಗಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button