ಹೋಂ ಕ್ವಾರಂಟೈನ್ ನಲ್ಲಿರುವವರಿಗೆ ಗಂಟೆಗೊಂದು ಸೆಲ್ಫಿಗೆ ಸೂಚನೆ

ಪ್ರಗತಿವಾಹಿನಿ ಸುದ್ದಿ; ರಾಮನಗರ: ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದು ವಿವಿಧ ಜಿಲ್ಲೆಗಳಲ್ಲಿ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಡುವೆ ರಾಮನಗರ ಜಿಲ್ಲೆಯಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿರುವವರಿಗೆ ಸೆಲ್ಫಿ ತೆಗೆದು ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಷನ್‍ನಲ್ಲಿ ಅಪ್‍ಲೋಡ್ ಮಾಡುವಂತೆ ಸೂಚಿಸಲಾಗಿದೆ.

ರಾಮನಗರ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿರಲು ಸೂಚಿಸಿರುವ ವ್ಯಕ್ತಿಗಳು ಕಡ್ಡಾಯವಾಗಿ ಪ್ರತಿ ಗಂಟೆಗೊಂದು ಸೆಲ್ಫಿ ಮತ್ತು ಲೊಕೇಶನ್ ಮೊಬೈಲ್ ಆಪ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸೂಚಿಸಿದ್ದಾರೆ.

ಬೆಳಿಗ್ಗೆ 7ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ಗಂಟೆಗೊಂದು ಸೆಲ್ಫಿ ಕಳುಹಿಸಬೇಕು. ರಾತ್ರಿ 9ರಿಂದ ಬೆಳಗ್ಗೆ 7 ಗಂಟೆಗೆಯವರೆಗಿನ ಅವಧಿಯನ್ನು ನಿದ್ರಾ ಅವಧಿಯೆಂದು ಪರಿಗಣಿಸಿದೆ. ಈ ಅವಧಿಯನ್ನು ಹೊರತು ಪಡಿಸಿ ಇನ್ನುಳಿದ ಅವಧಿಯಲ್ಲಿ ಪ್ರತಿ ಗಂಟೆಗೆ ಒಂದರಂತೆ ಒಟ್ಟು 14 ಸೆಲ್ಫಿಗಳನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಹೀಗೆ ಬಂದ ಸೆಲ್ಫಿಗಳನ್ನು ಯಾವುದೇ ರೀತಿಯಲ್ಲಿ ಸರ್ಕಾರ ಬಳಸಿಕೊಳ್ಳುವುದಿಲ್ಲ. ಸೆಲ್ಫಿಗಳ ಖಾಸಗಿತನವನ್ನು ಕಾಪಾಡಲಾಗುವುದು. ಅವುಗಳು ಸೋರಿಕೆಯಾಗದಂತೆ ಕ್ರಮವಹಿಸುತ್ತದೆ. ಒಂದುವೇಳೆ ಸೆಲ್ಫಿ ತೆಗೆದು ಅಪ್‍ಲೋಡ್ ಮಾಡದಿದ್ದಲ್ಲಿ ಅಂತವರನ್ನು ಸರ್ಕಾರಿ ಸಮೂಹ ನಿರ್ಬಂಧನಕ್ಕೆ (ಮಾಸ್ ಕ್ವಾರಂಟೈನ್) ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button