*ಸರ್ಕಾರಿ ಜಾಗದ ಮನೆ ಕುಸಿದರೂ 1 ಲಕ್ಷ ರು. ಪರಿಹಾರ: ಕೆ.ಜೆ. ಜಾರ್ಜ್*
ಪ್ರಗತಿವಾಹಿನಿ ಸುದ್ದಿ: ಡೀಮ್ಡ್ ಅರಣ್ಯ ಸೇರಿದಂತೆ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ್ದ ಮನೆಗಳು ಮಳೆಯಿಂದ ಕುಸಿದು ಬಿದ್ದರೂ 1 ಲಕ್ಷ ರು. ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದ್ದು, ಇನ್ನೆರಡು ದಿನಗಳಲ್ಲಿ ಆದೇಶ ಹೊರಡಿಸಲಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಡೀಮ್ಡ್ ಅರಣ್ಯ ಸೇರಿದಂತೆ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ್ದ ಮನೆಗಳು ಮಳೆಯಿಂದ ಕುಸಿದು ಬಿದ್ದರೂ 1 ಲಕ್ಷ ರು. ಪರಿಹಾರ ನೀಡುವ ಬಗ್ಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಪರಿಹಾರ ವಿತರಿಸಲಾಗುವುದು,” ಎಂದರು.
“ಪ್ರಸ್ತುತ ಮಳೆಯಿಂದ ಕುಸಿದ ಮನೆಗಳಿಗೆ ತಕ್ಷಣದ ಪರಿಹಾರವಾಗಿ 1.20 ಲಕ್ಷ ರು. ನೀಡಲಾಗುತ್ತಿದೆ. ಇದರ ಜತೆಗೆ ಇನ್ನೂ 3.80 ಲಕ್ಷ ರೂ. ಪರಿಹಾರ ಒದಗಿಸಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲಾಗುವುದು,” ಎಂದು ತಿಳಿಸಿದರು.
ಮಲೆನಾಡು, ಕರಾವಳಿಗೆ ಹೆಚ್ಚಿನ ಗ್ಯಾಂಗ್ ಮೆನ್
“ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆಯಿಂದ ವಿದ್ಯುತ್ ಮರ ಬಿದ್ದು ವಿದ್ಯುತ್ ತಂತಿಗಳು, ಕಂಬಗಳು, ಟ್ರಾನ್ಸ್ ಫಾರ್ಮರ್ ಗಳು ಹಾನಿಗೊಳಗಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಹೆಚ್ಚಿನ ಗ್ಯಾಂಗ್ ಮೆನ್ ಗಳನ್ನು ಒದಗಿಸಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಗೆ 503 ಗ್ಯಾಂಗ್ ಮೆನ್ ಹುದ್ದೆಗಳು ಮಂಜೂರಾಗಿದ್ದರೂ ಹೆಚ್ಚುವರಿಯಾಗಿ 210 ಗ್ಯಾಂಗ್ ಮೆನ್ ಗಳನ್ನು ಒದಗಿಸಲಾಗಿದೆ. 2,000 ಲೈನ್ ಮೆನ್ ಗಳ ನೇಮಕ ವೇಳೆಯೂ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ಆದ್ಯತೆ ನೀಡಲಾಗುತ್ತಿದೆ,” ಎಂದು ತಿಳಿಸಿದರು.
“ಈ ಬಾರಿ ಭಾರೀ ಮಳೆಯಾಗಿದ್ದರಿಂದ ಸಮಸ್ಯೆ ಸ್ವಲ್ಪ ಹೆಚ್ಚಾಗಿದೆ. ಭಾರೀ ಮಳೆಯ ಮುನ್ಸೂಚನೆ ಇದ್ದುದರಿಂಂದ ಒಂದು ತಿಂಗಳ ಹಿಂದೆಯೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಹೀಗಾಗಿ ಸಮಸ್ಯೆ ಎದುರಾದ ತಕ್ಷಣ ಸ್ಪಂದಿಸಲು ಸಾಧ್ಯವಾಗಿದೆ,” ಎಂದು ಸಚಿವರು ಹೇಳಿದರು.
“ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಗುಡ್ಡ ಕುಸಿತ, ರಸ್ತೆಗಳ ಹಾನಿ ಕುರಿತಂತೆ ಜಿಲ್ಲಾಧಿಕಾರಿಗಳು ವರದಿ ಸಿದ್ಧಪಡಿಸುತ್ತಿದ್ದಾರೆ. ತುರ್ತು ಕೆಲಸಗಳನ್ನು ಇರುವ ಅನುದಾನದಲ್ಲಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಉಳಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಾಕಿ ಇರುವ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು,” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ