Election NewsPolitics

*ಕುಮಾರಸ್ವಾಮಿ ವಿರುದ್ಧ ಚೆಲುವರಾಯ ಸ್ವಾಮಿ ಹೊಸ ಆರೋಪ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕದ ಉಪ ಚುನಾವಣೆಗಳಿಗೆ ಮೋದಿ ಅವರ ಹೆಸರಿನಲ್ಲಿ ಉಕ್ಕು ಕಂಪನಿಗಳಿಂದ 1 ಸಾವಿರ ಕೋಟಿ ರೂಪಾಯಿಗಳನ್ನು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸಂಗ್ರಹಿಸಿದ್ದಾರೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಆರೋಪಿಸಿದ್ದಾರೆ . 

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆಗಳನ್ನು ಶತಾಯಗತಾಯ ಗೆಲ್ಲಬೇಕು ಎಂದು ಬಿಜೆಪಿ ಮಿತ್ರ ಪಕ್ಷಗಳು ವಾಮಮಾರ್ಗ ಹಿಡಿದಿವೆ.  ಅಲ್ಲಿ ಹಣದ ಹೊಳೆಯನ್ನೇ ಹರಿಸಲು ಎಲ್ಲ ತಯಾರಿ ನಡೆಸಿಕೊಂಡಿವೆ. ಮಾತ್ರವಲ್ಲ ಕರ್ನಾಟಕದ ಉಪ ಚುನಾವಣೆಯಲ್ಲಿ ಮುಖ್ಯವಾಗಿ ಚೆನ್ನಪಟ್ಟಣದಲ್ಲಿ ಸೋಲಿನ ಭೀತಿ ಹೊಂದಿರುವ ಬಿಜೆಪಿ ಇಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಹಣ ಸುರಿಯಲು ಮುಂದಾಗಿವೆ. ಚುನಾವಣೆಗಳ ಜವಾಬ್ದಾರಿ ಹೊತ್ತಿರುವ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆಗಳ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಭಾರತದ ವಿವಿಧೆಡೆ ಮತ್ತು ರಾಜ್ಯದ ಉಕ್ಕು ಕಂಪನಿಗಳಿಂದ 1 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ಸಂಗ್ರಹ ಮಾಡಿದ್ದಾರೆ ಎಂದು ಚೆಲುವರಾಯಸ್ವಾಮಿ ನೇರವಾಗಿ ಆರೋಪ ಮಾಡಿದ್ದಾರೆ. 

ಉಕ್ಕಿನ ಕೈಗಾರಿಕೆಗಳಿಂದ ಹಣ ಸಂಗ್ರಹಿಸಿರುವ ಬಗ್ಗೆ ನಮಗೆ ಆಂತರಿಕ ಮಾಹಿತಿ ಬಂದಿದೆ. ಮಾತ್ರವಲ್ಲ ಉಕ್ಕಿನ ಕೈಗಾರಿಕೋದ್ಯಮಿಗಳೂ ಈ ಕುರಿತು ಮಾಹಿತಿ ನೀಡಿದ್ದಾರೆ. ಇದು ರಾಷ್ಟ್ರದ ಬಹು ದೊಡ್ಡ ಹಗರಣವಾಗಿದ್ದು, ಇ.ಡಿ., ಮುಂತಾದ ತನಿಖಾ ಸಂಸ್ಥೆಗಳು ಇಂಥ ವಿಷಯವನ್ನು ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತೇನೆ. 

ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ, ಗೋವಾದಲ್ಲಿ ಆಪರೇಶನ್‌ ಮಾಡಿ ಎಕ್ಸ್‌ಪರ್ಟ್‌ ಆಗಿರುವ ಬಿಜೆಪಿ ಚುನಾವಣೆಯ ಪಾವಿತ್ರ್ಯತೆಯನ್ನು ಕೆಡಿಸಲು ಹೊರಟಿದೆ. ಹಣದ ಹೊಳೆ ಹರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ನೆಲೆಘಟ್ಟನ್ನೇ ಅಲುಗಾಡಿಸಲು ಹೊರಟಿದೆ ಎಂದು ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ. ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎನ್‌.ಚೆಲುವರಾಯಸ್ವಾಮಿ ಮನವಿ ಮಾಡಿದ್ದಾರೆ. 

ತಮಗೆ ದೇಣಿಗೆ ನೀಡದ ಕಂಪನಿಗಳ ವಿರುದ್ಧ ಇ.ಡಿ, ಐಟಿ ಮುಂತಾದ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸುವ ತಂತ್ರವನ್ನು ಬಿಜೆಪಿ ಎಂದಿನಿಂದ ನಡೆಸಿಕೊಂಡು ಬಂದಿದೆ. ಈ ಹಿಂದೆ ಬಿಜೆಪಿ ವಿವಿಧ ಕಂಪನಿಗಳಿಂದ ಚುನಾವಣಾ ಬಾಂಡ್‌ ಹೆಸರಲ್ಲಿ 1,751  ಕೋಟಿ ರೂ.ಗಳನ್ನು ಪಡೆದುಕೊಂಡಿತ್ತು. ಇದು ರಾಷ್ಟ್ರದ ಅತಿ ದೊಡ್ಡ ಹಗರಣವಾಗಿದೆ. ಕುಮಾರಸ್ವಾಮಿ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಕಿಕ್‌ ಬ್ಯಾಕ್‌ ಆರೋಪವೂ ಕೇಳಿ ಬಂದಿತ್ತು. ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಮುಚ್ಚಿ ಹಾಕಿರುವ ಬಿಜೆಪಿ ಈಗ ಕಂಪನಿಗಳಿಂದ ಮತ್ತೆ ದೊಡ್ಡ ಪ್ರಮಾಣದಲ್ಲಿ ಹಣ ವಸೂಲಿ ಮಾಡಿ ಅವುಗಳನ್ನು ಮುಚ್ಚಿ ಹಾಕಲು ತಂತ್ರ ರೂಪಿಸಿದೆ. ಆದರೆ, ಈ ಬಾರಿ ಅವರ ತಂತ್ರ ಫಲಿಸದು ಎಂದು ಎನ್‌. ಚೆಲುವರಾಯಸ್ವಾಮಿ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button