Kannada NewsKarnataka NewsLatest

ಮೋದಿ ಸರಕಾರದಲ್ಲಿ 10 ಕೋಟಿ ಉದ್ಯೋಗ ನಷ್ಟ – ಬಿ.ವಿ.ಶ್ರೀನಿವಾಸ

ಹಿರೇಬಾಗೇವಾಡಿ ಗ್ರಾಮದಲ್ಲಿ ಬುಧವಾರ ಬೃಹತ್ ಜನಾಂದೋಲನ  ಸಮಾವೇಶ

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ – ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ದೇಶದಲ್ಲಿ ಕಳೆದ 7 ವರ್ಷದಲ್ಲಿ 14 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ  ಪ್ರಧಾನಮಂತ್ರಿ  ನರೇಂದ್ರ ಮೋದಿ ಸರಕಾರ 10 ಕೋಟಿ ಜನರ ಉದ್ಯೋಗ ಕಸಿದುಕೊಂಡಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ ಬಿ. ವಿ ಆರೋಪಿಸಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಬುಧವಾರ ಬೃಹತ್ ಜನಾಂದೋಲನ  ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರತಿವರ್ಷ 2 ಕೋಟಿ ಉದ್ಯೋಗಳನ್ನು ಸೃಷ್ಟಿಸುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಅದರ ಪ್ರಕಾರ ಅವರ ಭರವಸೆಯಂತೆ ಅಧಿಕಾರಕ್ಕೆ ಬಂದು  ಏಳು ವರ್ಷಗಳಲ್ಲಿ 14 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿತ್ತು, ಆದರೆ  ಈವರೆಗೆ ಯಾವುದೇ ಉದ್ಯೋಗಗಳನ್ನೂ ಸೃಷ್ಟಿ ಮಾಡಿಲ್ಲ, ಬದಲಾಗಿ ಇವರ ಆಡಳಿತ ಅವಧಿಯಲ್ಲಿ 10 ಕೋಟಿ ಯುವಕರು ತಮ್ಮ ಉದೋಗಗಳನ್ನು ಕಳೆದುಕೊಂಡು ಪರಿತಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇನ್ನು ಅಗತ್ಯ ವಸ್ತುಗಳ, ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುತ್ತೇವೆ ಎಂದು ಸುಳ್ಳುಹೇಳಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಆದರೆ ಬಿಜೆಪಿ ಅಧಿಕಾರ ವಹಿಸಿಕೊಂಡಾಗಿನಿಂದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ದಿನಬಳಕೆಯ ವಸ್ತುಗಳು, ಅಡುಗೆ ಎಣ್ಣೆ, ಕಾಳು ಕಡಿಗಳ ಬೆಲೆಗಳು ಗಗನಕ್ಕೇರಿವೆ. ಅಡುಗೆ ಅನಿಲ ಬೆಲೆ ಶೇ.116 ಏರಿಕೆಯಾಗಿದೆ, ಪೆಟ್ರೋಲ್, ಡಿಸೇಲ್ ಬೆಲೆಗಳು ಕ್ರಮವಾಗಿ 25%, 26% ಏರಿಕೆಯಾಗಿವೆ. ಅಡುಗೆ ಎಣ್ಣೆ ಒಂದೇ ವರ್ಷದಲ್ಲಿ 80 ರೂ. ಗಳಗಿಂತ ಜಾಸ್ತಿಯಾಗಿದೆ. ದೇಶದಲ್ಲಿ ಇಷ್ಟೆಲ್ಲ ಜ್ವಲಂತ ಸಮಸ್ಯೆಗಳು ಇದ್ದರೂ  ನರೇಂದ್ರ ಮೋದಿಯವರು ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಗಮನ ಹರಿಸದೇ ಬೆಲೆ ಏರಿಕೆ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ. ದೇಶವನ್ನು ಯಾವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ ಎಂದು ಶ್ರೀನಿವಾಸ ಆಕ್ರೋಶವ್ಯಕ್ತಪಡಿಸಿದರು.
ಅದಾನಿ, ಅಂಬಾನಿಗಳನ್ನು ಬೆಳೆಸುವುದಕ್ಕಿಂತ ದೇಶವನ್ನು ಬೆಳೆಸಿ, ಕೊಟ್ಟ ಮಾತಿನಂತೆ ಉದ್ಯೋಗ ಸೃಷ್ಟಿಸಿ ಎಂದು ಶ್ರೀನಿವಾಸ ಮನವಿ ಮಾಡಿದರು.
ಯುವ ಕಾಂಗ್ರೆಸ್ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮೃಣಾಲ ಹೆಬ್ಬಾಳಕರ್ ಇಡೀ ಕಾರ್ಯಕ್ರಮ ಸಂಯೋಜಿಸಿದ್ದರು.
 ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲ್ಪಾಡ್, ರಾಷ್ಟ್ರೀಯ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿ ಸುರಭಿ ದ್ವಿವೇದಿ, ಚನ್ನರಾಜ ಹಟ್ಟಿಹೊಳಿ, ಅಬ್ದುಲ್ ದೇಸಾಯಿ, ದರ್ಗಾ ಅಜ್ಜನವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಸಿ ಪಾಟೀಲ, ಸ್ವಾತಿ ಮಾಳಗಿ, ಶಂಕರಗೌಡ ಪಾಟೀಲ, ಸುರೇಶ ಇಟಗಿ, ಶ್ರೀಕಾಂತ, ಮಹಾಂತೇಶ ಮತ್ತಿಕೊಪ್ಪ, ಧರೆಪ್ಪ ಟಕ್ಕಣ್ಣವರ, ವಿನೋಧ ಅಸೋಟಿ  ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button