ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು – ಕಾಂತಾರ ಸಿನೇಮಾ ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದೆ. ಚಿತ್ರದ ಬಗ್ಗೆ ಮಾಧ್ಯಮಗಳ ಪ್ರಚಾರಕ್ಕಿಂತ ಜನರೇ ಮಾತಾಡಿಕೊಳ್ಳುತ್ತಿದ್ದಾರೆ. ದೃಷ್ಯ ವೈಭವ, ಕ್ಯಾಮರಾ ಕೈಚಳಕ, ಸಂಗೀತ, ಸಾಹಸ, ಕುತೂಹಲಕಾರಿ ಕಥೆ ಮೊದಲಾಗಿ ಸಿನೇಮಾದ ಎಲ್ಲ ಮಜಲುಗಳೂ ಪ್ರೇಕ್ಷಕರನ್ನು ಇಡೀ ಸಿನೇಮಾದುದ್ದಕ್ಕೂ ತುದಿಗಾಲಲ್ಲಿ ನಿಲ್ಲಿಸುವಂತಿವೆ. ಕಾಂತಾರ ಚಿತ್ರದ ಯಶಸ್ಸಿಗೆ ಈ ಹತ್ತು ಪ್ರಮುಖ ಕಾರಣಗಳನ್ನು ಸಿನಿ ಪ್ರಿಯರು ಮುಂದಿಟ್ಟಿದ್ದಾರೆ.
೧) ದೈವಾರಾಧನೆ
ಕರಾವಳಿಯ ದೈವಗಳನ್ನು ಇಷ್ಟು ವೈಭವದಿಂದ ತೋರಿಸಿದ ಉದಾಹರಣೆಗಳೇ ಇಲ್ಲ. ಉಳಿದವರು ಕಂಡಂತೆ ಹಾಗೂ ಗರುಡ ಗಮನ ವೃಷಭವಾಹನ ಸಿನೇಮಾಗಳಲ್ಲಿ ಹುಲಿ ವೇಷವನ್ನು ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ. ಶೆಟ್ಟಿ ಅವರು ತೆರೆಗೆ ತಂದು ಯಶಸ್ವಿಯಾಗಿದ್ದರು. ಕಾಂತಾರದಲ್ಲಿ ಕರಾವಳಿಯ ನೆಲದ ಸಂಸ್ಕೃತಿ, ಆಚರಣೆಯನ್ನು ಪರಿಣಾಮಕಾರಿಯಾಗಿ ತೆರೆಗೆ ತರಲು ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಪಂಜುರ್ಲಿ ದೈವಾರಾಧನೆಯನ್ನು ತೆರೆಗೆ ತರುವಲ್ಲೂ ರಿಷಬ್ ಶೃದ್ಧೆ ಮತ್ತು ಭಕ್ತಿಯಿಂದ ಕೆಲಸ ಮಾಡಿದ್ದಾರೆ.
೨) ಹೊಂಬಾಳೆ ಬ್ಯಾನರ್
ಕೆಜಿಎಫ್‌ನಂತಹ ಪ್ಯಾನ್ ಇಂಡಿಯಾ ಸಿನೇಮಾ ನಿರ್ಮಿಸಿದ ಹೊಂಬಾಳೆ ಫಿಲಂಸ್ ಕಾಂತಾರ ನಿರ್ಮಾಣದ ಹಿಂದಿದ್ದ ಹಿನ್ನೆಲೆಯಲ್ಲಿ ಚಿತ್ರ ವಿಶ್ವದಾದ್ಯಂತ ಪ್ರೇಕ್ಷಕರನ್ನು ಸುಲಭವಾಗಿ ತಲುಪಲು ಸಾಧ್ಯವಾಯಿತು. ಅಲ್ಲದೇ ದೊಡ್ಡ ಬಜೆಟ್‌ನ ಚಿತ್ರವಾಗಿದ್ದು, ಚಿತ್ರದ ಬಜೆಟ್ ನಿರ್ಮಾಣ ಹಂತದಲ್ಲಿ ದುಪ್ಪಟ್ಟಾದರೂ ಅದರ ಬಗ್ಗೆ ಯೋಚಿಸದೆ ಒಳ್ಳೆಯ ಚಿತ್ರವನ್ನು ಸಿನಿಪ್ರಿಯರಿಗೆ ಕೊಡಬೇಕು ಎಂಬ ಧ್ಯೇಯ ಹೊಂಬಾಳೆ ಫಿಲಂಸ್ ಹೊಂದಿದ್ದು ಚಿತ್ರದ ಯಶಸ್ಸಿಗೆ ದೊಡ್ಡ ಪಾತ್ರ ವಹಿಸಿತು. ನಿರ್ಮಾಪಕ ವಿಜಯ ಕಿರಗಂದೂರು ಸಿನೇಮಾ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
೩) ರಿಷಬ್ ಶೆಟ್ಟಿ ಅಭಿನಯ, ನಿರ್ದೇಶನ
ಚಿತ್ರದ ನಾಯಕ ನಟನೂ ಆಗಿ ನಿರ್ದೇಶನವನ್ನೂ ಮಾಡಿದ್ದು ರಿಷಬ್ ಶೆಟ್ಟಿ ಅವರಿಗೆ ಇದು ಮೊದಲ ಪ್ರಯತ್ನ. ಮೊದಲ ಪ್ರಯತ್ನದಲ್ಲೇ ಸಿನೇಮಾದ ಎಲ್ಲಾ ವಿಭಾಗದಲ್ಲೂ ಅವರು ಗೆದ್ದಿದ್ದಾರೆ. ದಕ್ಷಿಣ ಕನ್ನಡದ ಸಂಸ್ಕೃತಿ, ದೈವಾರಾಧನೆ, ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದಂತಹ ಕಥಾ ವಸ್ತುವನ್ನು ಇಷ್ಟು ದೊಡ್ಡ ಬಜೆಟ್‌ನ ಮೂಲಕ ತೆರೆಗೆ ತರುವ ಧೈರ್ಯ ಮಾಡಿದ್ದು ರಿಷಬ್ ಶೆಟ್ಟಿ ಅವರ ಸಾಹಸವನ್ನು ಜನ ಮೆಚ್ಚಿದ್ದಾರೆ.
೪) ಸಾಹಸ ದೃಷ್ಯಗಳು
ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ ಸಾಹಸ ನಿರ್ದೇಶಕ ವಿಕ್ರಂ ಮೋರೆ ಈ ಚಿತ್ರದ ಸಾಹಸ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದಾರೆ. ಚಿತ್ರದ ಫೈಟ್ ಸೀನ್‌ಗಳು ಮೈ ಜುಮ್ಮೆನ್ನಿಸುವಂತೆ ಮೂಡಿ ಬಂದಿವೆ. ಚಿತ್ರದಲ್ಲಿ ಕೋಣದ ಕಂಬಳ, ನಂತರದ ಫೈಟ್ ಸೀನ್, ಕ್ಲೈಮಾಕ್ಸ್‌ನ ಫೈಟಿಂಗ್ ದೃಷ್ಯಗಳು ಹಾಲಿವುಡ್ ಸಿನೇಮಾದ ದೃಷ್ಯಗಳನ್ನು ನೆನಪಿಸುವಂತಿವೆ.
೫) ೨೦ ನಿಮಿಷಗಳ ಅದ್ಭುತ
ಸಿನೇಮಾದ ಕೊನೇಯ ೨೦ ನಿಮಿಷಗಳ ದೃಷ್ಯ ವೈಭವವನ್ನು ಹೊಗಳದ ಪ್ರೇಕ್ಷರೇ ಇಲ್ಲ. ಇಡೀ ಸಿನಿಮಾ ಒಂದು ತೂಕವಾದರೆ ಕೊನೇಯ ೨೦ ನಿಮಿಷಗಳದ್ದೇ ಒಂದು ತೂಕ ಎಂದು ಸಿನೇಮಾ ನೋಡಿದ ಪ್ರತಿ ಪ್ರೇಕ್ಷಕರೂ ಅಭಿಪ್ರಾಯಪಟ್ಟಿದ್ದಾರೆ. ಕೊನೇಯ ೨೦ ನಿಮಿಷವನ್ನು ರೋಮಾಂಚಕವಾಗಿ ಕಟ್ಟಿಕೊಡೋದು ಸಿನೇಮಾದ ಹೆಗ್ಗಳಿಕೆ. ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ೨೦ ನಿಮಿಷದ ನಿರ್ದೇಶನ ರಾಜ್ ಬಿ. ಶೆಟ್ಟಿ ಅವರದ್ದು.
೬) ಹಿನ್ನೆಲೆ ಸಂಗೀತ
ಅಜನೀಶ್ ಲೋಕನಾಥ ಕನ್ನಡದ ಹೊಸಪೀಳಿಗೆಯ ಜನಪ್ರಿಯ ಸಂಗತ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ. ಅವರ ಹಿನ್ನೆಲೆ ಸಂಗೀತ ಸಿನೇಮಾದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿದೆ. ವರಾಹ ರೂಪಂ, ಸಿಂಗಾರ ಸಿರಿಯೇ ಹಾಡುಗಳು ಜನ ಮನ ಗೆದ್ದಿವೆ. ಹಾಡುಗಳಲ್ಲದೇ ಚಿತ್ರದ ಹಲವು ದೃಷ್ಯಗಳಿಗೆ ನೀಡಿದ ಹಿನ್ನೆಲೆ ಸಂಗೀತ ದೃಷ್ಯಗಳ ವೈಭವವನ್ನು ಹೆಚ್ಚಿಸಿದೆ.
೭) ಅರವಿಂದ ಕಶ್ಯಪ್‌ರ ಛಾಯಾಗ್ರಹಣ
ಅರವಿಂದ್ ಕಶ್ಯಪ್‌ರ ಮನಸೆಳೆಯುವ ಛಾಯಾಗ್ರಹಣ ಇಡೀ ಚಿತ್ರಕ್ಕೆ ಮೆರಗು ನೀಡಿದೆ. ಅದರಲ್ಲೂ ಕಂಬಳ, ದೈವಾರಾಧನೆ ಮೊದಲಾದ ದೃಷ್ಯಗಳನ್ನು ಸೆರೆ ಹಿಡಿಯುವುದು ಸವಾಲಿನದ್ದು. ಆದರೆ ಸ್ವಲ್ಪವೂ ಊನವಾಗದಂತೆ ಇಡೀ ಚಿತ್ರವನ್ನು ದೃಷ್ಯ ಕಾವ್ಯವಾಗಿಸುವಲ್ಲಿ ಅರವಿಂದ್ ಯಶಸ್ವಿಯಾಗಿದ್ದಾರೆ. ಹಳ್ಳಿಯ ದೃಷ್ಯಗಳನ್ನು ಅತ್ಯಂತ ಸಹಜವಾಗಿ ಮೂಡಿಬರುವಂತೆ ಚಿತ್ರಿಸಿದ್ದಾರೆ. ಅಲ್ಲದೇ ಕಾಡಿನ ದೃಷ್ಯಗಳನ್ನು ಪಂಜಿನ ಬೆಳಕಿನಲ್ಲಿ ಸೆರೆಹಿಡಿದ ಅರವಿಂದ್ ಅವರ ಕ್ಯಾಮರಾ ಚಳಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿದೆ.
೮) ಪಾತ್ರ ವರ್ಗ
ಶಿವನಾಗಿ ರಿಷಬ್ ಶೆಟ್ಟಿ, ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ, ಅರಣ್ಯಾಧಿಕಾರಿಯ ಪಾತ್ರದಲ್ಲಿ ಕಿಶೋರ್, ದೇವೇಂದ್ರ ಸುತ್ತೂರು ಪಾತ್ರದಲ್ಲಿ ಅಚ್ಯುತ್‌ಕುಮಾರ್, ಶಿವನ ತಾಯಿ ಕಮಲ ಪಾತ್ರದಲ್ಲಿ ಮಾನಸಿ ಸುಧೀರ್ ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅಲ್ಲದೇ ಹತ್ತಾರು ಸಹ ನಟರಿಂದ ಉತ್ತಮ ಅಭಿನಯವನ್ನು ತೆಗೆಯುವಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಯಶಸ್ವಿಯಾಗಿದ್ದು ಚಿತ್ರವನ್ನು ಇನ್ನೊಂದು ಮಜಲಿಗೆ ಕೊಂಡೊಯ್ದಿದೆ.
೯) ವಸ್ತ್ರ ವಿನ್ಯಾಸ
ಚಿತ್ರದಲ್ಲಿ ೧೯೦೦, ೧೯೭೦ ಮತ್ತು ೧೯೯೦ರ ದಶಕಗಳ ಮೂರು ಹಂತದಲ್ಲಿ ಕಥೆ ಸಾಗುತ್ತದೆ. ಈ ಮೂರೂ ಕಾಲ ಮಾನದ ವಸ್ತ್ರ ವಿನ್ಯಾಸ ಮಾಡುವುದರ ಜತೆಗೆ ದಕ್ಷಿಣ ಕನ್ನಡದ ಹಳ್ಳಿಗಾಡಿನ ವಸ್ತ್ರ ವಿನ್ಯಾಸವನ್ನು, ಬುಡಕಟ್ಟು ವೇಷ ಭೂಷಣಗಳನ್ನು ರೂಪಿಸಿದ್ದು, ಚಿತ್ರದ ನಿರ್ದೇಶಕ ಮತ್ತು ನಾಯಕನೂ ಆಗಿರುವ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ. ಚಿತ್ರದ ದೃಷ್ಯಗಳಿಗೆ ಒಂದಿನಿತೂ ಕುಂದು ಬರದಂತೆ ಆಯಾ ಕಾಲ ಘಟ್ಟದ ಮತ್ತು ಹಳ್ಳಿಗಾಡಿನ ವಸ್ತ್ರ ವಿನ್ಯಾಸ ಚಿತ್ರದ ಪ್ಲಸ್ ಪಾಯಿಂಟ್.
೧೦) ಕಲಾ ನಿರ್ದೇಶನ
ಚಿತ್ರದ ಕಲಾ ನಿರ್ದೇಶನ ಈ ಚಿತ್ರಕ್ಕೆ ವಿಭಿನ್ನ ಆಯಾಮವನ್ನೇ ನೀಡಿದೆ. ಧರಣಿ ಗಂಗೆಪುತ್ರ ಮತ್ತು ತಂಡದ ಆರ್ಟ್ ಡೈರೆಕ್ಷನ್ ಚಿತ್ರವನ್ನು ಸಶಕ್ತವಾಗಿ ತೆರೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕುಂದಾಪುರ ಸೀಮೆಯ ಹಳ್ಳಿಗಳಲ್ಲಿ ಕಾಣ ಸಿಗುವ ವಿಭಿನ್ನ ಶೈಲಿಯ ಮನೆಯಂಗಳಗಳು, ಕೋಳಿ ಗೂಡು, ಹಂಚಿನ ಮನೆಗಳು, ತಟ್ಟಿ ಹೀಗೆ ಪ್ರತಿಯೊಂದನ್ನೂ ಯಥಾವತ್ತಾಗಿ ಸೆಟ್ ಹಾಕಿದ ಕಲಾ ನಿರ್ದೇಶನ ಚಿತ್ರವನ್ನು ನೈಜವಾಗಿ ಮೂಡಿ ಬರಲು ಸಹಕರಿಸಿದೆ.
ಅಮೀರ್ ಖಾನ್ ಸುತ್ತ ಮತ್ತೊಂದು ವಿವಾದ ; ಹಿಂದೂ ಸಂಪ್ರದಾಯ ಟೀಕಿಸಿದ ಆರೋಪ
https://pragati.taskdun.com/latest/another-controversy-around-aamir-khan-criticizing-hindu-tradition-accused/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ