NationalPolitics

*100 GW ಸೌರ ವಿದ್ಯುತ್; ಐತಿಹಾಸಿಕ ಮೈಲಿಗಲ್ಲಿನತ್ತ ನಮ್ಮ ಭಾರತ: ಇಂಧನ ಸ್ವಾತಂತ್ರ್ಯ ಮತ್ತು ಹಸಿರು ಭವಿಷ್ಯದತ್ತ ಸಾಗುತ್ತಿದೆ ದೇಶ*

ಪ್ರಗತಿವಾಹಿನಿ ಸುದ್ದಿ: ಭಾರತ 100 GW ಸ್ಥಾಪಿತ ಸೌರಶಕ್ತಿ ಸಾಮರ್ಥ್ಯ ಮೀರುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಭವಿಷ್ಯದಲ್ಲಿ ದೇಶದ ಸ್ವಚ್ಛ, ಹಸಿರು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನವೀಕರಿಸಬಹುದಾದ ಇಂಧನದಲ್ಲಿ ಭಾರತ ಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸಿದೆ. 2030ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿಗದಿಪಡಿಸಿದ 500 GW ಪಳೆಯುಳಿಕೆಯೇತರ ಇಂಧನ ಆಧಾರಿತ ಇಂಧನ ಸಾಮರ್ಥ್ಯದ ಮಹತ್ವಾಕಾಂಕ್ಷೆಯ ಗುರಿಸಾಧನೆಯತ್ತ ಮಹತ್ವದ ಹೆಜ್ಜೆಯಿರಿಸಿದೆ ಎಂದಿದ್ದಾರೆ.

ಕಳೆದ 10 ವರ್ಷಗಳಲ್ಲಿ ಭಾರತದ ಇಂಧನ ಪ್ರಯಾಣ ಐತಿಹಾಸಿಕ ಮತ್ತು ಸ್ಪೂರ್ತಿದಾಯಕವಾಗಿದೆ. ಸೌರ ಫಲಕ, ಸೌರ ಉದ್ಯಾನವನ ಮತ್ತು ಮೇಲ್ಛಾವಣಿ ಸೌರಶಕ್ತಿಯಂತಹ ಯೋಜನೆಗಳು ಕ್ರಾಂತಿಕಾರಿ ಬದಲಾವಣೆ ತಂದಿವೆ. ಪರಿಣಾಮ ಭಾರತ ಇಂದು 100 GW ಸೌರಶಕ್ತಿ ಉತ್ಪಾದನೆಯ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

ಸೂರ್ಯ ಘರ್ ಗೇಮ್ ಚೇಂಜರ್: ಹಸಿರು ಇಂಧನ ಕ್ಷೇತ್ರದಲ್ಲಿ, ಭಾರತ ಸ್ವಾವಲಂಬಿಯಾಗುವ ಜತೆಗೆ ಜಗತ್ತಿಗೇ ಹೊಸ ಮಾರ್ಗ ತೋರಿಸುತ್ತಿದೆ. ಪಿಎಂ ಸೂರ್ಯಘರ್ ಯೋಜನೆ ಸುಸ್ಥಿರ ಇಂಧನದಲ್ಲಿ ಗೇಮ್ ಚೇಂಜರ್ ಆಗಿದೆ. ಪ್ರತಿ ಮನೆಗಳನ್ನೂ ಶುದ್ಧ ವಿದ್ಯುತ್‌ನಿಂದ ಸಬಲೀಕರಣಗೊಳಿಸುತ್ತಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಸೌರಶಕ್ತಿ ವಲಯದಲ್ಲಿ ಅಭೂತಪೂರ್ವ ಬೆಳವಣಿಗೆ: ಕಳೆದ ದಶಕದಲ್ಲಿ ಭಾರತದ ಸೌರಶಕ್ತಿ ವಲಯ ಅಸಾಧಾರಣವಾಗಿ 3450% ಸಾಮರ್ಥ್ಯದ ಹೆಚ್ಚಳವನ್ನು ಕಂಡಿದ್ದು, 2014ರಲ್ಲಿ ಕೇವಲ 2.82 GW ಇದ್ದು, 2025ರಲ್ಲಿ ಅದೀಗ ಬರೋಬ್ಬರಿ 100 GWಗೆ ಏರಿದೆ. ಪ್ರಸಕ್ತ ಜನವರಿ ತಿಂಗಳಾಂತ್ಯಕ್ಕೆ ಭಾರತದ ಒಟ್ಟು ಸೌರಶಕ್ತಿ ಸ್ಥಾಪಿತ ಸಾಮರ್ಥ್ಯ 100.33 GW ಆಗಿದೆ. ಸೌರ ಶಕ್ತಿ 84.10 GW ಅನುಷ್ಠಾನ ಹಂತದಲ್ಲಿದೆ. ಹೆಚ್ಚುವರಿಯಾಗಿ 47.49 GW ಟೆಂಡರ್ ಹಂತದಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ದೇಶದ ಹೈಬ್ರಿಡ್ ಮತ್ತು ರೌಂಡ್-ದಿ-ಕ್ಲಾಕ್ (RTC) ನವೀಕರಿಸಬಹುದಾದ ಇಂಧನ ಯೋಜನೆಗಳು ಸಹ ವೇಗವಾಗಿ ಮುಂದುವರಿಯುತ್ತಿವೆ. 64.67 GW ಅನುಷ್ಠಾನ ಮತ್ತು ಟೆಂಡರ್ ಹಂತದಲ್ಲಿದೆ. ಇದು ಸೌರ ಮತ್ತು ಹೈಬ್ರಿಡ್ ಯೋಜನೆಗಳ ಒಟ್ಟು ಮೊತ್ತವನ್ನು 296.59 GW ಗೆ ತರುತ್ತದೆ ಎಂದಿದ್ದಾರೆ.

ನವೀಕರಿಸಬಹುದಾದ ಇಂಧನ ಬೆಳವಣಿಗೆಗೆ ಸೌರಶಕ್ತಿ ಪ್ರಮುಖ ಕೊಡುಗೆ ನೀಡುತ್ತಿದ್ದು, ಒಟ್ಟು ಸ್ಥಾಪಿತ ಇಂಧನ ಸಾಮರ್ಥ್ಯದ ಶೇ.47ರಷ್ಟಿದೆ. 2024ರಲ್ಲಿ ದಾಖಲೆಯ 24.5 GW ಸೌರ ಸಾಮರ್ಥ್ಯ ಸಾಧಿಸಿದೆ. 2023ಕ್ಕೆ ಹೋಲಿಸಿದರೆ ಸೌರ ಸ್ಥಾಪನೆಗಳಲ್ಲಿ ಎರಡು ಪಟ್ಟು ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.

ಕಳೆದ ವರ್ಷ 18.5 GW ಯುಟಿಲಿಟಿ-ಸ್ಕೇಲ್ ಸೌರ ಸಾಮರ್ಥ್ಯದ ಸ್ಥಾಪನೆ ಕಂಡಿತು. ಇದು 2023ಕ್ಕೆ ಹೋಲಿಸಿದರೆ ಸುಮಾರು 2.8 ಪಟ್ಟು ಹೆಚ್ಚಾಗಿದೆ. ರಾಜಸ್ಥಾನ, ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಉನ್ನತ ಕಾರ್ಯಕ್ಷಮತೆ ರಾಜ್ಯಗಳ ಪಟ್ಟಿಯಲ್ಲಿವೆ.

ಭಾರತದಲ್ಲಿ ಮೇಲ್ಛಾವಣಿ ಸೌರಶಕ್ತಿ ವಲಯ 2024ರಲ್ಲಿ ಗಮನಾರ್ಹ ಬೆಳವಣಿಗೆ ಕಂಡಿತು. 4.59 GW ಹೊಸ ಸಾಮರ್ಥ್ಯವನ್ನು ಸ್ಥಾಪಿಸಿದೆ.ವಿ2023ಕ್ಕೆ ಹೋಲಿಸಿದರೆ ಶೇ.53ರಷ್ಟು ಹೆಚ್ಚಳವಾಗಿದ್ದು, ಇದಕ್ಕೆ ಸೂರ್ಯಘರ್ ಕಾರಣವೆಂದು ತಿಳಿಸಿದ್ದಾರೆ.

9 ಲಕ್ಷ ಮೇಲ್ಛಾವಣಿ ಸೌರ ಸ್ಥಾಪನೆ: 2024 ರಲ್ಲಿ ಪ್ರಾರಂಭಿಸಲಾದ PM ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆ 9 ಲಕ್ಷ ಮೇಲ್ಛಾವಣಿ ಸೌರ ಘಟಕ ಸ್ಥಾಪನೆಗಳನ್ನು ಸಮೀಪಿಸುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button